ಸುಪ್ರೀಂ ಛೀಮಾರಿ: ಬೇಷರತ್ ಕ್ಷಮೆಯಾಚಿಸಿದ ರೇವಂತ್
ಬಿಆರ್‌ಎಸ್ ಮತ್ತು ಬಿಜೆಪಿ ನಡುವಿನ ಒಪ್ಪಂದದಿಂದಾಗಿ ಬಿಆರ್‌ಎಸ್ ನಾಯಕಿಗೆ ಜಾಮೀನು ಸಿಕ್ಕಿದೆ ಎಂದು ರೇವಂತ್ ರೆಡ್ಡಿ ಹೇಳಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡ ನಂತರ ತೆಲಂಗಾಣ ಸಿಎಂ ಕ್ಷಮೆಯಾಚಿಸಿದ್ದಾರೆ.;
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಜಾಮೀನು ಕುರಿತು ನೀಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ಒಪ್ಪಂದದಿಂದ ಬಿಆರ್‌ಎಸ್ ನಾಯಕಿಗೆ ಜಾಮೀನು ಸಿಕ್ಕಿದೆ ಎಂಬ ಹೇಳಿಕೆಗೆ ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ನ್ಯಾಯಾಂಗದಲ್ಲಿ ನಂಬಿಕೆ: ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರೇವಂತ್, ಭಾರತೀಯ ನ್ಯಾಯಾಂಗದ ಮೇಲೆ ಅತ್ಯಂತ ಗೌರವ ಮತ್ತು ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ಆಗಸ್ಟ್ 29, 2024 ರಂದು ಕೆಲವು ಪತ್ರಿಕಾ ವರದಿಗಳಲ್ಲಿನ ನನ್ನದು ಎನ್ನಲಾದ ವ್ಯಾಖ್ಯಾನಗಳು ನಾನು ನ್ಯಾಯಾಲಯದ ಬುದ್ಧಿವಂತಿಕೆಯನ್ನು ಪ್ರಶ್ನಿಸುತ್ತಿದ್ದೇನೆ ಎಂಬ ಭಾವನೆ ಮೂಡಿಸುತ್ತವೆ. ಆದರೆ, ನಾನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ದೃಢ ನಂಬಿಕೆ ಇರಿಸಿದ್ದೇನೆ ಎಂದು ಪುನರುಚ್ಚರಿಸುತ್ತೇನೆ. ವರದಿಗಳಲ್ಲಿನ ಹೇಳಿಕೆಗಳಿಗೆ ಬೇಷರತ್ ವಿಷಾದ ವ್ಯಕ್ತಪಡಿಸುತ್ತೇನೆ. ಆ ವರದಿಗಳಲ್ಲಿನ ನನ್ನ ಹೇಳಿಕೆಗಳನ್ನು ಆಯ್ಕೆ ಮಾಡಿಕೊಂಡು ಪ್ರಕಟಿಸಲಾಗಿದೆ. ನ್ಯಾಯಾಂಗ ಮತ್ತು ಅದರ ಸ್ವಾತಂತ್ರ್ಯದ ಬಗ್ಗೆ ಅತ್ಯಂತ ಗೌರವ ಹೊಂದಿದ್ದೇನೆ. ಸಂವಿಧಾನದಲ್ಲಿ ನಂಬಿಕೆ ಇರುವ ನಾನು ನ್ಯಾಯಾಂಗದ ಬಗ್ಗೆ ಅತ್ಯುನ್ನತ ಗೌರವ ಹೊಂದಿದ್ದೇನೆ,ʼ ಎಂದು ಬರೆದಿದ್ದಾರೆ.
ಸುಪ್ರೀಂ ಅಸಮಾಧಾನ: ರೇವಂತ್ ಅವರ ಹೇಳಿಕೆಗೆ ಸುಪ್ರೀಂ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ʻಅವರು ಹೇಳಿದ್ದನ್ನು ನೀವು ಓದಿದ್ದೀರಾ... ಸುಮ್ಮನೆ ಓದಿ... ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆಗಳು ಆತಂಕ ಉಂಟುಮಾಡಬಹುದು,ʼ ಎಂದು ಹೇಳಿತ್ತು.
ಕವಿತಾ ಅವರಿಗೆ ಜಾಮೀನು ಪಡೆಯಲು ಬಿಜೆಪಿ ಮತ್ತು ಬಿಆರ್‌ಎಸ್ ನಡುವೆ ʻವ್ಯವಹಾರʼ ನಡೆದಿದೆ ಎಂಬ ರೇವಂತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ʻಅವರು ಹೇಳಿದ್ದನ್ನು ನೀವು ಪತ್ರಿಕೆಯಲ್ಲಿ ಓದಿದ್ದೀರಾ? ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ ಇಂಥ ಹೇಳಿಕೆ ನೀಡಬಹುದೇ? ಅದು ಜನರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಬಹುದು. ಸಾಂವಿಧಾನಿಕ ಅಧಿಕಾರವುಳ್ಳವರು ಈ ರೀತಿ ಮಾತನಾಡಬಹುದೇ?ʼ ಎಂದು ಪ್ರಶ್ನಿಸಿತು.
ʻರಾಜಕೀಯದಲ್ಲಿ ನ್ಯಾಯಾಲಯವನ್ನು ಏಕೆ ಎಳೆಯಬೇಕು? ನಾವು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ, ಆದೇಶ ನೀಡುತ್ತೇವೆಯೇ? ರಾಜಕಾರಣಿಗಳು ಅಥವಾ ಬೇರೆಯವರು ನಮ್ಮ ಆದೇಶಗಳನ್ನು ಟೀಕಿಸಿದರೆ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆತ್ಮಸಾಕ್ಷಿ ಮತ್ತು ಪ್ರಮಾಣ ವಚನದಂತೆ ನಮ್ಮ ಕರ್ತವ್ಯ ಮಾಡುತ್ತೇವೆ,ʼ ಎಂದು ನ್ಯಾ.ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಹಿರಿಯ ವಕೀಲ ಮುಕುಲ್ ರೋಹಟಗಿ ಅವರಿಗೆ ಹೇಳಿತು.
ರೇವಂತ್ ಹೇಳಿಕೆ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ 15 ತಿಂಗಳ ಬಳಿಕ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ನೂ ಜಾಮೀನು ಸಿಗದೆ ಇರುವಾಗ, ಕವಿತಾ ಅವರಿಗೆ ಐದು ತಿಂಗಳೊಳಗೆ ಹೇಗೆ ಜಾಮೀನು ಸಿಕ್ಕಿತು ಎಂದು ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ರೇವಂತ್ ರೆಡ್ಡಿ ಪ್ರಶ್ನಿಸಿದ್ದರು.
ʻ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಬಿಆರ್‌ಎಸ್ ಶ್ರಮಿಸಿರುವುದು ಸತ್ಯ. ಎರಡು ಪಕ್ಷಗಳ ನಡುವಿನ ಡೀಲ್‌ನಿಂದ ಕವಿತಾ ಅವರಿಗೆ ಜಾಮೀನು ಸಿಕ್ಕಿದೆ ಎಂಬ ಮಾತು ಇದೆ,ʼ ಎಂದು ರೇವಂತ್ ಹೇಳಿದ್ದರು.