NEET-SS ಪರೀಕ್ಷೆ| ಮನವಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2024-07-19 13:12 GMT

ಹೊಸದಿಲ್ಲಿ, ಜು.19: 2024ರಲ್ಲಿ ನೀಟ್-ಸೂಪರ್ ಸ್ಪೆಷಾಲಿಟಿ (NEET-SS) ಪರೀಕ್ಷೆಯನ್ನು ನಡೆಸದೆ ಇರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಕೇಂದ್ರ ಮತ್ತು ಇತರರಿಂದ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿಕ್ರಿಯೆ ಕೇಳಿದೆ. 

ನೀಟ್-ಸೂಪರ್ ಸ್ಪೆಷಾಲಿಟಿ ಪರೀಕ್ಷೆಯನ್ನು ಎಂಡಿ, ಎಂಎಸ್‌ ಮತ್ತು ಡಿಎನ್‌ಬಿ ಮತ್ತಿತರ ಸ್ನಾತಕೋತ್ತರ ಪದವಿ ಹೊಂದಿರುವ ವೈದ್ಯರು ಅಥವಾ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಅರ್ಹತೆ ಹೊಂದಿರುವ ವೈದ್ಯರು ತೆಗೆದು ಕೊಳ್ಳಬಹುದು. 

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠಕ್ಕೆ , ಎನ್‌ಎಂಸಿ ಈ ವರ್ಷ ಪರೀಕ್ಷೆಯನ್ನು ನಡೆಸದಿರಲು ನಿರ್ಧರಿಸಿದೆ ಎಂದು 13 ಆಕಾಂಕ್ಷಿಗಳ ಪರ ವಕೀಲರು ಹೇಳಿದರು. 

ವರದಿಗಳ ಪ್ರಕಾರ, ನೀಟ್-ಸೂಪರ್ ಸ್ಪೆಷಾಲಿಟಿ ಪರೀಕ್ಷೆಯನ್ನು ಜನವರಿ 2025 ರಲ್ಲಿ ನಡೆಸುವ ಸಾಧ್ಯತೆಯಿದೆ. 

ಕೇಂದ್ರ, ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಮತ್ತು ಎನ್‌ಎಂಸಿಗೆ ನೋಟಿಸ್‌ ನೀಡಿದ ಪೀಠವು ಅರ್ಜಿದಾರರಾದ ರಾಹುಲ್ ಬಲ್ವಾನ್ ಮತ್ತು ಇತರ 12 ಮಂದಿಗೆ ಎನ್‌ಬಿಇ (ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್) ಅನ್ನು ಪಕ್ಷ ವನ್ನಾಗಿ ಮಾಡುವ ಸ್ವಾತಂತ್ರ್ಯವನ್ನು ನೀಡಿತು. ಜುಲೈ 26 ರಂದು ವಿಚಾರಣೆಗೆ ಪಟ್ಟಿಮಾಡಿತು.

ಪ್ರತಿ ವರ್ಷ ನೀಟ್-‌ ಎಸ್ಎಸ್‌ ಪರೀಕ್ಷೆ ನಡೆಸಬೇಕು. ಸೂಪರ್-ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಸುಪ್ರೀಂ ಕೋರ್ಟ್ ಈಗಾಗಲೇ ವೇಳಾಪಟ್ಟಿಯನ್ನು ನಿಗದಿಪಡಿಸಿದೆ ಎಂದು ಅರ್ಜಿದಾರರು ಹೇಳಿದರು. ಕೋವಿಡ್ -19 ರಿಂದಾಗಿ ಈ ವರ್ಷ ಪರೀಕ್ಷೆಯನ್ನು ಮುಂದೂಡುವ ಸನ್ನಿವೇಶ ಉದ್ಭವಿಸಿದೆ ಎಂದು ವಕೀಲರು ಹೇಳಿದರು.

Tags:    

Similar News