Repo Rate: ರೆಪೊ ದರ ಶೇ.0.25 ಇಳಿಕೆ: ಗೃಹ, ವಾಹನ ಸಾಲ ಇನ್ನಷ್ಟು ಅಗ್ಗ

ಸತತ ಎರಡನೇ ಬಾರಿಗೆ ಬಡ್ಡಿ ದರ ಕಡಿತ ಮಾಡಿದಂತಾಗಿದ್ದು, ಈ ಹಿಂದೆ ಫೆಬ್ರವರಿ 2025ರಲ್ಲಿ ರೆಪೊ ದರವನ್ನು ಶೇಕಡಾ 6.5ರಿಂದ ಶೇಕಡಾ 6.25ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಮತ್ತೆ 25 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡಲಾಗಿದೆ.;

Update: 2025-04-09 06:00 GMT

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿ ಪರಾಮರ್ಶೆ ಸಮಿತಿಯ (MPC) ದ್ವೈಮಾಸಿಕ ಸಭೆಯಲ್ಲಿ ರೆಪೊ ದರವನ್ನು ಶೇಕಡಾ 0.25ರಷ್ಟು ಇಳಿಕೆ ಮಾಡಿದೆ. ಹೀಗಾಗಿ ಆr ಐ ವಿಧಿಸುವ ಬಡ್ಡಿ ದರ ಈಗ ಶೇಕಡಾ 6ಕ್ಕೆ ತಲುಪಿದ್ದು, ಗೃಹ, ವಾಹನ ಮತ್ತಿತರ ಸಾಲಗಳು ಇನ್ನಷ್ಟು ಅಗ್ಗವಾಗಲಿದೆ. ಈಗಾಗಲೇ ಸಾಲ ಪಡೆದಿರುವವರ ಇಎಂಐ(ಕಂತು) ಮೊತ್ತವೂ ಇಳಿಕೆಯಾಗಲಿದೆ. ಈ ನಿರ್ಧಾರವನ್ನು ಸಮಿತಿಯು ಒಮ್ಮತದಿಂದ ತೆಗೆದುಕೊಂಡಿದ್ದು, ಸತತ ಎರಡನೇ ಬಾರಿಗೆ ಬಡ್ಡಿ ದರ ಕಡಿತ ಮಾಡಿದಂತಾಗಿದೆ. ಈ ಹಿಂದೆ ಫೆಬ್ರವರಿ 2025ರಲ್ಲಿ ರೆಪೊ ದರವನ್ನು ಶೇಕಡಾ 6.5ರಿಂದ ಶೇಕಡಾ 6.25ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಮತ್ತೆ 25 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡಲಾಗಿದೆ.



ಆರ್​ಬಿಐ  ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಏಪ್ರಿಲ್ 7 ರಿಂದ 9ರವರೆಗೆ ಸಭೆ ನಡೆಯಿತು. ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಬಡ್ಡಿ ದರ ಇಳಿಕೆಯ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. "ಸೂಕ್ಷ್ಮ ಆರ್ಥಿಕತೆ ಮತ್ತು ಹಣಕಾಸು ಪರಿಸ್ಥಿತಿಗಳ ವಿಸ್ತೃತ ಮೌಲ್ಯಮಾಪನದ ನಂತರ, ರೆಪೊ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿ 6% ಕ್ಕೆ ತರುವುದಾಗಿ ಸರ್ವಾನುಮತದಿಂದ ನಿರ್ಧರಿಸಲಾಯಿತು," ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಹಣದುಬ್ಬರ ಇಳಿಕೆಯ ಗುರಿ

ಹಣದುಬ್ಬರವು 4% ಗಿಂತ ಕೆಳಗೆ ಇಳಿದಿರುವ ಮತ್ತು ಆರ್ಥಿಕ ಬೆಳವಣಿಗೆಯು ನಿಧಾನಗೊಂಡಿರುವಂತೆಯೇ ಈ ದರ ಕಡಿತದ ನಿರ್ಧಾರ ಪ್ರಕಟಗೊಂಡಿದೆ. ಫೆಬ್ರವರಿ 2025ರಲ್ಲಿ ಹಣದುಬ್ಬರ ಏಳು ತಿಂಗಳ ಕನಿಷ್ಠ ಮಟ್ಟವಾದ 3.6% ಗೆ ಇಳಿದಿತ್ತು, ಇದು ಆರ್​ಬಿಐನ ಮಧ್ಯಂತರ ಅವಧಿಯ ಗುರಿಯಾಗಿರುವ ಶೇಕಡಾ 4ಕ್ಕಿಂತ ಕಡಿಮೆಯಾಗಿದೆ. ಆಹಾರ ವಸ್ತುಗಳ ಬೆಲೆಗಳಲ್ಲಿ ಇಳಿಕೆಯಿಂದಾಗಿ ಈ ಕಡಿತ ಸಾಧ್ಯವಾಗಿದೆ. ಇದರಿಂದಾಗಿ ಹೂಡಿಕೆಗೆ ಉತ್ತೇಜನ ನೀಡಲು ಸಾಧ್ಯವಾಗಲಿದೆ.

ದರ ಕಡಿತದ ಉದ್ದೇಶ

ಆರ್​ಬಿಐ ರೆಪೊ ದರ ಇಳಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ಗವರ್ನರ್ ಮಲ್ಹೋತ್ರಾ ಡಿಸೆಂಬರ್ 2024ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ನೇತೃತ್ವದಲ್ಲಿ ನಡೆದ ಎರಡನೇ ಸಭೆಯಾಗಿದೆ. ಸಾಲಗಾರರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಿ ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಗಳಿಂದ ಉಂಟಾದ ವ್ಯಾಪಾರ ಒತ್ತಡಗಳು ಭಾರತದ ರಫ್ತು ಮತ್ತು ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಆದಾಗ್ಯೂ, ಯುಎಸ್ ಫೆಡರಲ್ ರಿಸರ್ವ್ ಈ ವರ್ಷದ ಕೊನೆಯಲ್ಲಿ ದರಗಳನ್ನು ಕಡಿಮೆ ಮಾಡಿದರೆ, ಭಾರತೀಯ ರೂಪಾಯಿ ಮೇಲಿನ ಒತ್ತಡ ಕಡಿಮೆಯಾಗಬಹುದು ಹಾಗೂ ಇನ್ನಷ್ಟು ದರ ಕಡಿತಕ್ಕೆ ಅವಕಾಶ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಸತತ ಎರಡನೇ ದರ ಕಡಿತವು ಭಾರತದ ಆರ್ಥಿಕತೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಣದುಬ್ಬರ ನಿಯಂತ್ರಣದಲ್ಲಿರುವಾಗ ಮತ್ತು ಬೆಳವಣಿಗೆಗೆ ಉತ್ತೇಜನದ ಅಗತ್ಯವಿರುವ ಸಂದರ್ಭದಲ್ಲಿ, ಆರ್​ಬಿಐನ ಈ ಕ್ರಮವು ಆರ್ಥಿಕ ಸ್ಥಿರತೆ ಮತ್ತು ಪ್ರಗತಿಗೆ ದಾರಿ ಮಾಡಿಕೊಡಲಿದೆ ಎಂದು ಅವರು ಆಶಿಸಿದ್ದಾರೆ.

Tags:    

Similar News