ಮಾಜಿ ಮ್ಯಾನೇಜರ್ ಹತ್ಯೆ ಪ್ರಕರಣ: ಡೇರಾ ಮುಖ್ಯಸ್ಥ ಖುಲಾಸೆ

ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ಅವರನ್ನು 2002 ರ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

Update: 2024-05-28 08:40 GMT

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣ ದಲ್ಲಿ ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯ ಮೇ 28 ರಂದು ದೋಷಮುಕ್ತಗೊಳಿಸಿದೆ. ಗುರ್ಮೀತ್‌ ರಾಮ್ ರಹೀಮ್(56) ಜೀವಾವಧಿ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ. 

2021 ರಲ್ಲಿ ಸಿಬಿಐ ನ್ಯಾಯಾಲಯ ರಾಮ್ ರಹೀಮ್ ಮತ್ತು ಇತರ ನಾಲ್ವರು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿತು. 2022 ರಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅವತಾರ್ ಸಿಂಗ್, ಕ್ರಿಶನ್ ಲಾಲ್, ಜಸ್ಬೀರ್ ಸಿಂಗ್ ಮತ್ತು ಸಬ್ದಿಲ್ ಸಿಂಗ್ ಪ್ರಕರಣದ ಇತರ ನಾಲ್ವರು ಆರೋಪಿಗಳು. ವಿಚಾರಣೆ ವೇಳೆ ಒಬ್ಬ ಆರೋಪಿ ಮೃತಪಟ್ಟಿದ್ದಾರೆ. 

ಸಿರ್ಸಾದಲ್ಲಿ ಈ ಪಂಗಡದ ಪ್ರಧಾನ ಕಚೇರಿ ಇದೆ. ಸಿಬಿಐ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ʻರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ,ʼ ಎಂದು ಡೇರಾ ಮುಖ್ಯಸ್ಥನ ವಕೀಲ ಜಿತೇಂದರ್ ಖುರಾನಾ ಹೇಳಿದ್ದಾರೆ. 

ಎರಡು ಅತ್ಯಾಚಾರ ಪ್ರಕರಣ: ಗುರ್ಮೀತ್ ರಾಮ್ ರಹೀಮ್ ಪ್ರಸ್ತುತ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದಾರೆ. ಡೇರಾದಲ್ಲಿ ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರ ಮತ್ತು ಪತ್ರಕರ್ತ ರಾಮ್ಚಂದರ್ ಪ್ರಜಾಪತಿ ಹತ್ಯೆ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ. ಡೇರಾ ಮುಖ್ಯಸ್ಥನ ಲೈಂಗಿಕ ದೌರ್ಜನ್ಯ ಕುರಿತು ಪ್ರಜಾಪತಿ ನಿರಂತರವಾಗಿ ವರದಿ ಮಾಡಿದ್ದರು. ಪ್ರಜಾಪತಿ ಅವರ ಹತ್ಯೆ ಪ್ರಕರಣದಲ್ಲಿ ಅವರ ಮೇಲ್ಮನವಿ ಬಾಕಿ ಇದೆ. 

ರಂಜಿತ್ ಸಿಂಗ್ ಹತ್ಯೆ: ಡೇರಾ ಸಚ್ಚಾ ಸೌಧದ ಮಾಜಿ ಮ್ಯಾನೇಜರ್ ಮತ್ತು ಪಂಥದ ಅನುಯಾಯಿಯಾಗಿದ್ದ ರಂಜಿತ್ ಸಿಂಗ್ ಅವರನ್ನು ಜುಲೈ 10, 2002 ರಂದು ಹರಿಯಾಣದ ಕುರುಕ್ಷೇತ್ರದ ಖಾನ್‌ಪುರ್ ಕೊಲಿಯನ್ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಸಿಬಿಐ ಚಾರ್ಜ್‌ಶೀ ಟ್ ಪ್ರಕಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ರಂಜಿತ್‌ ಸಿಂಗ್‌ ಬಹಿರಂಗಪಡಿಸಿದ್ದಾರೆ ಎಂದು ರಾಮ್ ರಹೀಮ್ ಶಂಕಿಸಿದ್ದರು. ಇತರ ಆರೋಪಿಗಳೊಂದಿಗೆ ರಂಜಿತ್ ಸಿಂಗ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ಅನುಮಾನಕ್ಕೆಡೆ ಇಲ್ಲದಂತೆ ಸಾಬೀತಾಗಿದೆ ಎಂದು ಸಿಬಿಐ ನ್ಯಾಯಾಲಯ ಹೇಳಿತ್ತು. ಅಕ್ಟೋಬರ್ 18, 2021 ರಂದು ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಜತೆಗೆ, ಡೇರಾ ಮುಖ್ಯಸ್ಥನಿಗೆ 31 ಲಕ್ಷ ರೂ. ದಂಡ ವಿಧಿಸಿತು. 

ಡೇರಾ ಮುಖ್ಯಸ್ಥರಿಗೆ ಪೆರೋಲ್ ಕೂಡದು: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ಅನುಮತಿಯಿಲ್ಲದೆ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪೆರೋಲ್ ನೀಡಬಾರದು ಎಂದು ಹರಿಯಾಣ ಸರ್ಕಾರವನ್ನು ಇತ್ತೀಚೆಗೆ ಕೇಳಿತ್ತು. ಇಂತಹ ಕ್ರಿಮಿನಲ್ ಹಿನ್ನೆಲೆಯಿರುವ ಮತ್ತು ಮೂರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಎಷ್ಟು ವ್ಯಕ್ತಿಗಳಿಗೆ ಪೆರೋಲ್‌ ನೀಡಲಾಗಿದೆ ಎಂಬ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು.

Tags:    

Similar News