Rajeev Chandrasekhar : ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ನೇಮಕ
ಚಂದ್ರಶೇಖರ್ ಅವರು ಈ ಹುದ್ದೆಗೆ ಏಕೈಕ ನಾಮನಿರ್ದೇಶಿತರಾಗಿದ್ದರು. ಭಾನುವಾರ ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ರಾಜೀವ್ ಚಂದ್ರಶೇಖರ್ ಅವರು ಎರಡು ದಶಕಗಳ ರಾಜಕೀಯ ಅನುಭವ ಹೊಂದಿದ್ದಾರೆ.;
ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಕೇರಳ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೇರಳದ ಪಕ್ಷದ ಸಂಘಟನಾ ಚುನಾವಣೆಯ ಉಸ್ತುವಾರಿ ಪ್ರಹ್ಲಾದ್ ಜೋಶಿ ಅವರು ಸೋಮವಾರ (ಮಾರ್ಚ್ 24) ತಿರುವನಂತಪುರದಲ್ಲಿ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಈ ಪ್ರಕಟಣೆ ಹೊರಡಿಸಿದರು. ನಿರ್ಗಮಿತ ಅಧ್ಯಕ್ಷ ಸುರೇಂದ್ರನ್ ಅವರು ಪಕ್ಷದ ಧ್ವಜವನ್ನು ಚಂದ್ರಶೇಖರ್ ಅವರಿಗೆ ವೇದಿಕೆಯಲ್ಲಿ ಹಸ್ತಾಂತರಿಸಿದರು.
ಕಳೆದ 10 ವರ್ಷಗಳಲ್ಲಿ ಕೇರಳದಲ್ಲಿ ಬಿಜೆಪಿ ಅಭೂತಪೂರ್ವ ಬೆಳವಣಿ ಕಂಡಿದೆ ಎಂದು ಸುರೇಂದ್ರನ್ ತಮ್ಮ ಭಾಷಣದಲ್ಲಿ ಹೇಳಿದರಲ್ಲದೆ, ಚಂದ್ರಶೇಖರ್ ಅವರು, ನಾಯಕನ ಅನುಭವ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪರಿಣತಿಯು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ವೇಗಗೊಳಿಸಲಿದೆ ಎಂದು ಹೇಳಿದರು.
ಚಂದ್ರಶೇಖರ್ ಅವರು ಈ ಹುದ್ದೆಗೆ ಏಕೈಕ ನಾಮನಿರ್ದೇಶಿತರಾಗಿದ್ದರು. ಭಾನುವಾರ ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ರಾಜೀವ್ ಚಂದ್ರಶೇಖರ್ ಅವರು ಎರಡು ದಶಕಗಳ ರಾಜಕೀಯ ಅನುಭವ ಹೊಂದಿದ್ದಾರೆ. ಅವರು ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜಲಶಕ್ತಿ ಇಲಾಖೆಗಳ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕದಿಂದ ಮೂರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಮತ್ತು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಎನ್‌ಡಿಎಯ ಕೇರಳ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು, ಆದರೆ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋಲನ್ನು ಕಂಡಿದ್ದರು.
ಹೊಸ ಜವಾಬ್ದಾರಿ ವಹಿಸಿಕೊಂಡಿರುವ ರಾಜೀವ್ ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅಭಿನಂದಿಸಿದ್ದಾರೆ.