IPL 2024| RCB vs CSK ಪಂದ್ಯ: ಸಬ್ ಏರ್ ಸಿಸ್ಟಮ್ ಕಾರ್ಯನಿರ್ವಹಣೆ ಹೇಗೆ?
ಕೆಎಸ್‌ಸಿಎ 2017ರಲ್ಲಿ ಕ್ರೀಡಾಂಗಣದಲ್ಲಿ ಸಬ್ ಏರ್ ಗಾಳಿ ಮತ್ತು ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆ ಯನ್ನು4.25 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿತು. ಮಳೆ ಪ್ರಾರಂಭವಾದ ತಕ್ಷಣ ಸ್ವಯಂಚಾಲಿತವಾಗಿ ಕಾರ್ಯಾಚರಣೆ ಆರಂಭಿಸುತ್ತದೆ. ಇದರಿಂದ ಹೊರ ಅಂಕಣ(ಔಟ್ ಫೀಲ್ಡ್)ದಲ್ಲಿ ನೀರು ನಿಲ್ಲುವುದಿಲ್ಲ.;
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಐಪಿಎಲ್ ಪಂದ್ಯಕ್ಕೆ ಮಳೆಯ ಬೆದರಿಕೆ ಎದುರಾಗಿದೆ. ಆದರೆ, ಆತಿಥೇಯ ಕ್ರಿಕೆಟ್ ಸಂಸ್ಥೆಯು ಸಬ್ ಏರ್ ವ್ಯವಸ್ಥೆಯಿಂದ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸುವ ವಿಶ್ವಾಸದಲ್ಲಿದೆ.
ಶನಿವಾರ ರಾತ್ರಿ 7:30 ರಿಂದ 11:30 ರವರೆಗೆ ಮಳೆ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. 12 ಅಂಕ ಗಳಿಸಿರುವ ಆರ್‌ಸಿಬಿ, ಪ್ಲೇಆಫ್‌ಗೆ ಮುನ್ನಡೆಯಲು ಗೆಲ್ಲಲೇಬೇಕು. ನಿವ್ವಳ ರನ್ ರೇಟ್ ಆಧರಿಸಿ, ಸಿಎಸ್‌ಕೆ (14 ಅಂಕ) ಸೋಲಿನ ಹೊರತಾಗಿಯೂ ಪ್ಲೇಆಫ್ ಸ್ಥಾನ ಪಡೆಯಬಹುದು.
60 ನಿಮಿಷ ಹೆಚ್ಚುವರಿ ಸಮಯ: ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ನಿಯಮಗಳ ಪ್ರಕಾರ 60 ನಿಮಿಷ ಹೆಚ್ಚುವರಿ ಸಮಯ ಬಳಸಿಕೊಳ್ಳಲಾಗುತ್ತದೆ. ಷರತ್ತು '13.7.3 ಹೆಚ್ಚುವರಿ ಸಮಯ' ಪ್ರಕಾರ, ʻಯಾವುದೇ ಕಾರಣದಿಂದ ಆಟದ ಪ್ರಾರಂಭ ವಿಳಂಬವಾದರೆ ಅಥವಾ ಆಟವನ್ನು ಅಮಾನತುಗೊಳಿಸಿದರೆ, (1) ಪ್ರತಿ ಐಪಿಎಲ್ ನಿಯಮಿತ ಋತುವಿನ ಪಂದ್ಯಕ್ಕೆ ಅರವತ್ತು ನಿಮಿಷ ಹೆಚ್ಚುವರಿ ಸಮಯ ಮತ್ತು (2) ಯಾವುದೇ ಪ್ಲೇ ಆಫ್ ಪಂದ್ಯಗಳಿಗೆ ನೂರ ಇಪ್ಪತ್ತು ನಿಮಿಷಗಳವರೆಗೆ ಹೆಚ್ಚುವರಿ ಸಮಯಾವಕಾಶ ಇರುತ್ತದೆ.
ಸಬ್ ಏರ್ ಸಿಸ್ಟಮ್: ಶನಿವಾರ ಮಧ್ಯಾಹ್ನ ಬೆಂಗಳೂರಿನ ಕೆಲವೆಡೆ ತುಂತುರು ಮಳೆಯಾಗಿದೆ. ಆದರೆ, ಆತಿಥೇಯ ಸಂಸ್ಥೆಯಾದ ಕರ್ನಾ ಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಫಲಿತಾಂಶ ಪಡೆಯುವ ವಿಶ್ವಾಸದಲ್ಲಿದೆ. ʻಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಿರುವ ಅತ್ಯಾಧುನಿಕ ಸಬ್ ಏರ್ ವ್ಯವಸ್ಥೆ ಶನಿವಾರದ ಪಂದ್ಯವನ್ನು ನಡೆಸಲು ಸಹಾಯ ಮಾಡುತ್ತದೆʼ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ʻಮಳೆಯಿಂದಾಗಿ ಪಂದ್ಯ ಮೊಟಕುಗೊಂಡರೂ, ಫಲಿತಾಂಶವನ್ನು ಪಡೆಯುವ ವಿಶ್ವಾಸವಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಕ್ರೀಡಾಂಗಣದಲ್ಲಿರುವ ಅತ್ಯಾಧುನಿಕ ಸಬ್‌ಏರ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿದ್ದು, ನಾವು ತ್ವರಿತವಾಗಿ ಆಟ ಆರಂಭಿಸ ಬಹುದು,ʼ ಎಂದು ಕೆಎಸ್‌ಸಿಎ ಅಧಿಕಾರಿಯೊಬ್ಬರು ಹೇಳಿದರು.
ಸಂಸ್ಥೆ 2017ರಲ್ಲಿ ಕ್ರೀಡಾಂಗಣದಲ್ಲಿ ಸಬ್ ಏರ್ ಗಾಳಿ ಮತ್ತು ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆಯನ್ನು4.25 ಕೋಟಿ ರೂ. ವೆಚ್ಚ ದಲ್ಲಿ ಅಳವಡಿಸಿತು. ಇದು ಕ್ರಿಕೆಟ್ ಸ್ಟೇಡಿಯಂಗೆ ಇಂಥ ತಂತ್ರಜ್ಞಾನದ ಮೊದಲ ಅಳವಡಿಕೆ.
ಸಬ್ ಏರ್ ವ್ಯವಸ್ಥೆ ಮಳೆ ಪ್ರಾರಂಭವಾದ ತಕ್ಷಣ ಸ್ವಯಂಚಾಲಿತವಾಗಿ ಕಾರ್ಯಾಚರಣೆ ಆರಂಭಿಸುತ್ತದೆ. ಇದರಿಂದ ಹೊರ ಅಂಕಣ(ಔಟ್ ಫೀಲ್ಡ್)ದಲ್ಲಿ ನೀರು ನಿಲ್ಲುವುದಿಲ್ಲ.ಇದರಿಂದ ಗುರುತ್ವಾಕರ್ಷಣೆಯಿಂದ ನೀರು ಇಳಿಯುವಿಕೆಗಿಂತ 36 ಪಟ್ಟು ವೇಗವಾಗಿ ನೀರು ಖಾಲಿಯಾಗುತ್ತದೆ. ಒದ್ದೆ ಔಟ್‌ಫೀಲ್ಡ್ ನಿಂದ ಆಟದ ವಿಳಂಬ ಅಥವಾ ರದ್ದುಗೊಳಿಸುವಿಕೆಗೆ ಅವಕಾಶ ನೀಡುವುದಿಲ್ಲ. ನಿಮಿಷಕ್ಕೆ 10,000 ಲೀಟರ್ ನಷ್ಟು ನೀರನ್ನು ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ.
ಸಬ್ ಏರ್ ಕಂಪನಿ ಪ್ರಕಾರ, ʻಸಬ್ ಏರ್ ಕ್ರೀಡಾ ವ್ಯವಸ್ಥೆಯು ಚಿನ್ನಸ್ವಾಮಿ ಸ್ಟೇಡಿಯಂನ ಕ್ಯುರೇಟರ್‌ಗಳು ಸದೃಢ ಮತ್ತು ಸುರಕ್ಷಿತ ಅಂಕಣವನ್ನು ರೂಪಿಸಬಹುದು. 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಅದರಿಂದ ಪಾಚಿ, ಹುಲ್ಲು ಮತ್ತು ಕಪ್ಪು ಪದರ ಕಡಿಮೆ ಆಗುತ್ತದೆ. ಗಾಳಿಯಾಡುವಿಕೆಯಿಂದ ಅಂಕಣದ ಮೇಲ್ಮೈ ತಾಪಮಾನ ಕಡಿಮೆಯಾಗುತ್ತದೆ. ಇದು ಆಟಗಾರರಿಗೆ ಹೆಚ್ಚು ಆರಾಮದಾಯಕವಾಗಿರಲಿದೆ,ʼ ಎಂದರು.
ಕೆಕೆಆರ್ ಪಂದ್ಯದಲ್ಲಿ ನೆರವು: ಮೇ 17, 2017 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಗಂಟೆ ಕಾಲ ಮಳೆ ಹೊರತಾಗಿಯೂ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯ ನಡೆಯಿತು. ಪಂದ್ಯ ಮೇ 18 ರಂದು ಬೆಳಗ್ಗೆ 1:30 ಕ್ಕೆ ಕೊನೆಗೊಂಡಿತು. ಅಂದು ಅಂಕಣದಿಂದ ಸುಮಾರು 2 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗಿತ್ತು. ಮಳೆ ನಿಂತ ನಂತರ 15 ರಿಂದ 20 ನಿಮಿಷಗಳ ನಂತರ ಔಟ್‌ಫೀಲ್ಡ್ ಆಡಬಹುದಾದ ಸ್ಥಿತಿಯಲ್ಲಿತ್ತು. ಕೆಕೆಆರ್ ಆರು ಓವರ್‌ಗಳಲ್ಲಿ 48 ರನ್‌ಗಳ ಪರಿಷ್ಕೃತ ಗುರಿಯನ್ನು ಏಳು ವಿಕೆಟ್ ಮತ್ತು ನಾಲ್ಕು ಎಸೆತ ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಿತು.
ಪಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್, ʻಒಳಚರಂಡಿ ವ್ಯವಸ್ಥೆಯನ್ನು ಪರಿಷ್ಕರಿಸಿ, @KKRiders ಅನ್ನು ತೊಂದರೆಯಿಂದ ಹೊರತೆಗೆದ ಕೆಎಸ್‌ಸಿಎಗೆ ಧನ್ಯವಾದಗಳು… @ipl @BCCI (sic)ʼ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.