ಎಫ್‌ಎಂ ಕ್ಷಮೆಯಾಚಿಸಿದ ಅನ್ನಪೂರ್ಣ ಹೊಟೇಲ್ ಮಾಲೀಕ: ರಾಹುಲ್ ಟೀಕೆ

ಅನ್ನಪೂರ್ಣ ಹೊಟೇಲ್ ಮಾಲೀಕರಾದ ಶ್ರೀನಿವಾಸನ್‌ ಅವರ ದೂರು ಮತ್ತು ಕ್ಷಮೆಯಾಚನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟೀಕೆ, ಶ್ಲಾಘನೆ ವ್ಯಕ್ತವಾಗಿದೆ. ರಾಹುಲ್‌ ಗಾಂಧಿ ಎಫ್‌ಎಂ ವರ್ತನೆ ಯನ್ನು ಖಂಡಿಸಿದ್ದಾರೆ.;

Update: 2024-09-13 11:14 GMT
ಅನ್ನಪೂರ್ಣ ಹೊಟೇಲ್ ಮಾಲೀಕರಾದ ಕೊಯಮತ್ತೂರಿನ ಶ್ರೀನಿವಾಸನ್ (ಬಲ)ಅವರು ತಿಂಡಿ ತಿನಿಸುಗಳಿಗೆ ವಿವಿಧ ಜಿಎಸ್‌ಟಿ ದರದಿಂದ ಗೊಂದಲ ಆಗುತ್ತಿದೆ ಎಂದು ದೂರಿದರು.

ತಮಿಳುನಾಡಿನ ಪ್ರಸಿದ್ಧ ಹೋಟೆಲ್‌ ಅನ್ನಪೂರ್ಣದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸನ್, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೆ ತಿಂಡಿ ತಿನಿಸುಗಳ ವಿವಿಧ ಜಿಎಸ್‌ಟಿ ದರ ಕುರಿತು ಪ್ರಶ್ನೆ ಕೇಳಿದಾಗ ತಾವು ರಾಜಕೀಯ ಹಣಾಹಣಿಯಲ್ಲಿ ಸಿಕ್ಕಿಬೀಳುತ್ತೇನೆ ಎಂಬ ಕಲ್ಪನೆ ಇರಲಿಲ್ಲ.

ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀನಿವಾಸನ್ ಅವರು ಒಂದೇ ರೀತಿಯ ತಿಂಡಿಗೆ ವಿಭಿನ್ನ ಜಿಎಸ್‌ಟಿಯಿಂದ ಗೊಂದಲ ಉಂಟಾಗುತ್ತಿದೆ ಎಂದು ಸೀತಾರಾಮನ್ ಅವರಿಗೆ ದೂರು ನೀಡಿದರು. ವರದಿಗಳ ಪ್ರಕಾರ, ವಿತ್ತ ಸಚಿವೆ ಬಳಿ ಕ್ಷಮೆಯಾಚಿಸಲು ಅವರ ಮೇಲೆ ಒತ್ತಡ ಹೇರಲಾಗಿದ್ದು, ಆ ವಿಡಿಯೋ ವೈರಲ್ ಆಗಿದೆ; ವಿವಾದ ಹುಟ್ಟುಹಾಕಿದೆ. 

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ, ʻಸಣ್ಣ ಉದ್ಯಮಿಯೊಬ್ಬರ ಮನವಿಯನ್ನು ದುರಹಂಕಾರ ಮತ್ತು ಅಗೌರವದಿಂದ ಕಾಣಲಾ ಗಿದೆ. ಅವರನ್ನು ಮತ್ತಷ್ಟು ಅವಮಾನಿಸಬಾರದು. ಆದರೆ, ಅಧಿಕಾರದಲ್ಲಿರುವವರ ಅಹಂಕಾರಕ್ಕೆ ಪೆಟ್ಟು ಬಿದ್ದಾಗ, ಅವರು ಅವಮಾನಿಸುವುದು ಖಚಿತ. ಈ ದುರಹಂಕಾರಿ ಸರ್ಕಾರ ಜನರ ಮಾತನ್ನು ಆಲಿಸಿದರೆ, ಸರಳೀಕೃತ ಜಿಎಸ್‌ಟಿಯು ಲಕ್ಷಾಂತರ ವ್ಯವಹಾರಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ,ʼ ಎಂದು ಬರೆದಿದ್ದಾರೆ. 

ʻಅನ್ನಪೂರ್ಣ ರೆಸ್ಟೋರೆಂಟ್‌ನಂತಹ ಸಣ್ಣ ವ್ಯಾಪಾರದ ಮಾಲೀಕರು ಸರಳೀಕೃತ ಜಿಎಸ್‌ಟಿಯನ್ನು ಕೇಳಿದರೆ, ಅವರ ವಿನಂತಿಯನ್ನು ದುರಹಂಕಾರ ಮತ್ತು ಅಗೌರವಿಸಲಾಗುತ್ತದೆ,ʼ ಎಂದು ರಾಹುಲ್ ಹೇಳಿದರು.

ʻಆದರೆ ತಮ್ಮ ಕೋಟ್ಯಧಿಪತಿ ಸ್ನೇಹಿತ ಕೇಳಿದರೆ, ಪ್ರಧಾನಿ ನಿಯಮ, ಕಾನೂನು ಬದಲಿಸುತ್ತಾರೆ. ಸಣ್ಣ ವ್ಯಾಪಾರಗಳ ಮಾಲೀಕರು ನೋಟು ಅಮಾನ್ಯೀಕರಣ, ಬ್ಯಾಂಕಿಂಗ್ ವ್ಯವಸ್ಥೆಗೆ ನಿರ್ಬಂಧ, ತೆರಿಗೆ ಸುಲಿಗೆ ಮತ್ತು ವಿನಾಶಕಾರಿ ಜಿಎಸ್‌ಟಿ ಹೊಡೆತ ಸಹಿಸಿಕೊಂಡಿದ್ದಾರೆ,ʼ ಎಂದು ರಾಹುಲ್ ಹೇಳಿದರು. 

ಶ್ರೀನಿವಾಸನ್ ಹೇಳಿದ್ದೇನು?: ಸಾರ್ವಜನಿಕ ಸಭೆಯಲ್ಲಿ ಶ್ರೀನಿವಾಸನ್ ಅವರು,ʻನಿಮ್ಮ ಪಕ್ಕದಲ್ಲಿರುವ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ನಮ್ಮ ಗ್ರಾಹಕರಾಗಿದ್ದು, ಜಿಎಸ್‌ಟಿ ಬಿಲ್ ಬಗ್ಗೆ ದೂರುತ್ತಾರೆ,ʼ ಎಂದು ವಿತ್ತ ಸಚಿವೆಗೆ ಹೇಳಿದರು.

ʻಬನ್‌ಗೆ ಜಿಎಸ್‌ಟಿ ಇಲ್ಲ.ಆದರೆ, ಕ್ರೀಮ್ ಹಾಕಿದರೆ ಶೇ.18 ಜಿಎಸ್‌ಟಿ ಇದೆ. ಇದರಿಂದ ಗ್ರಾಹಕರು ಬನ್ ಮತ್ತು ಕ್ರೀಮ್ ಪ್ರತ್ಯೇಕವಾಗಿ ನೀಡಲು ಕೇಳುತ್ತಾರೆ. ಉತ್ತರ ಭಾರತದಲ್ಲಿ ಜನರು ಹೆಚ್ಚು ಸಿಹಿತಿಂಡಿ ಸೇವಿಸುತ್ತಾರೆ ಎಂದು ಸಿಹಿಗೆ ಶೇ.5 ಪ್ರತಿಶತ ಮತ್ತು ನಮ್ಕೀನ್‌ಗೆ ಶೇ.12 ಜಿಎಸ್‌ಟಿ ಹಾಕಿದ್ದಾರೆ ಎಂದು ಜನ ಮಾತಾಡುತ್ತಾರೆ. ಆದರೆ, ತಮಿಳುನಾಡಿನಲ್ಲಿ ಸಿಹಿ, ನಮ್ಕೀನ್ ಮತ್ತು ಕಾಫಿ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ದಯವಿಟ್ಟು ಇವುಗಳಿಗೆ ಏಕರೂಪದ ಜಿಎಸ್ಟಿ ವಿಧಿಸಿ,ʼ ಎಂದು ಕೋರಿದ್ದರು. ಈ ವಿಡಿಯೋವನ್ನು ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ವ್ಯಾಪಕವಾಗಿ ಹಂಚಿಕೊಂಡಿವೆ.

ಇನ್ನೊಂದು ವಿಡಿಯೋದಲ್ಲಿ ಶ್ರೀನಿವಾಸನ್‌ ಅವರು ʻನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿʼ ಎಂದು ವಿತ್ತ ಸಚಿವೆಗೆ ಹೇಳುತ್ತಿರುವುದು ಕಂಡುಬರುತ್ತದೆ. ವಿಡಿಯೋವನ್ನು ತಮಿಳುನಾಡು ಬಿಜೆಪಿ ಸಾಮಾಜಿಕ ಮಾಧ್ಯಮ ಸೆಲ್ ಸಂಚಾಲಕ ಬಾಲಾಜಿ ಎಂ.ಎಸ್. ಹಂಚಿಕೊಂಡಿದ್ದಾರೆ. 

ಶ್ರೀನಿವಾಸನ್‌  ಅವರ ದೂರು ಮತ್ತು ಕ್ಷಮೆಯಾಚನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟೀಕೆ, ಶ್ಲಾಘನೆ ವ್ಯಕ್ತವಾಗಿದೆ.

ಅಣ್ಣಾಮಲೈ ಟ್ವೀಟ್: ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಘಟನೆಗೆ ಕ್ಷಮೆಯಾಚಿಸಿದ್ದಾರೆ. ʻಖಾಸಗಿ ಸಂಭಾಷಣೆಯನ್ನು ಹಂಚಿಕೊಂಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಅನ್ನಪೂರ್ಣ ರೆಸ್ಟೋರೆಂಟ್‌ಗಳ ಮಾಲೀಕರಾದ ಎ.ವಿ.ಎಲ್. ಶ್ರೀನಿವಾಸನ್ ಅವರೊಂದಿಗೆ ಮಾತನಾಡಿದ್ದೇನೆ. ಶ್ರೀನಿವಾಸನ್ ಅವರು ತಮಿಳುನಾಡಿನ ವ್ಯಾಪಾರ ಸಮುದಾಯದ ಆಧಾರ ಸ್ತಂಭ. ರಾಜ್ಯ ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸೋಣ,ʼ ಎಂದು ಹೇಳಿದ್ದಾರೆ.

Tags:    

Similar News