ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ದುರಸ್ತಿಗೆ ಮುಂದಾದ ಪುರಾತತ್ವ ಇಲಾಖೆ
ಸಮೀಕ್ಷೆಯ ವರದಿಯ ಪ್ರಕಾರ ಮತ್ತು ದೇವಾಲಯದ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ದುರಸ್ತಿ ಕಾರ್ಯವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ .;
ಒಡಿಶಾದ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ 'ರತ್ನ ಭಂಡಾರ'ದ ಜೀರ್ಣೋದ್ಧಾರ ಕಾರ್ಯವನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಡಿಸೆಂಬರ್ 16 ರಿಂದ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಉದ್ದೇಶಿತ ದುರಸ್ತಿ ಕಾರ್ಯಕ್ಕಾಗಿ ಇಲಾಖೆಯು, ದೇವಾಲಯದ ಉಪಸಮಿತಿಯಿಂದ ಅನುಮೋದನೆ ಕೋರಿದೆ ಎಂದು ಎಎಸ್ಐ ಅಧೀಕ್ಷಕ ಡಿ ಬಿ ಗರ್ನಾಯಕ್ ತಿಳಿಸಿದ್ದಾರೆ.
ಈ ಹಿಂದೆ, ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನೆರವಿನಿಂದ ಪುರಾತತ್ವ ಇಲಾಖೆ 12ನೇ ಶತಮಾನದ ದೇವಾಲಯದ 'ರತ್ನ ಭಂಡಾರ್' (ಖಜಾನೆ) ಜಿಪಿಆರ್- ಜಿಪಿಎಸ್ ಸಮೀಕ್ಷೆ ನಡೆಸಿತ್ತು. ಸಂಸ್ಥೆಯು ತನ್ನ ಸಮೀಕ್ಷೆಯ ಫಲಿತಾಂಶಗಳನ್ನು ಕಳೆದ ತಿಂಗಳು ಪುರಾತತ್ವ ಇಲಾಖೆಗೆ ಸಲ್ಲಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಮೀಕ್ಷೆಯ ವರದಿಯ ಪ್ರಕಾರ ಮತ್ತು ದೇವಾಲಯದ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ದುರಸ್ತಿ ಕಾರ್ಯವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ .
ಡಿಸೆಂಬರ್ 10 ರಂದು ನಡೆಯಲಿರುವ ಪುರಿ ಜಗನ್ನಾಥ ದೇವಾಲಯದ ಸೇವಕರ ಒಕ್ಕೂಟ 'ಛಟಿಸಾ ನಿಜೋಗಾ'ದಲ್ಲಿ 'ರತ್ನ ಭಂಡಾರ್' ದುರಸ್ತಿ ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದು ಪುರಿ ಕಲೆಕ್ಟರ್ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.
ದೇವಾಲಯದೊಳಗಿನ ಎರಡು ತಾತ್ಕಾಲಿಕ ಖಜಾನೆಗಳಲ್ಲಿ ಸಂಗ್ರಹಿಸಲಾಗಿರುವ ಆಭರಣಗಳು ಮತ್ತು ಆಭರಣಗಳ ದಾಸ್ತಾನು ದುರಸ್ತಿ ಕಾರ್ಯ ಮುಂದಿನ ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಹೇಳಿದ್ದಾರೆ.
"ದುರಸ್ತಿ ಕಾರ್ಯವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ನಾವು ಪುರಾತತ್ವ ಇಲಾಖೆಗೆ ಮನವಿ ಮಾಡಿದ್ದೇವೆ. ಬಳಿಕ ನಾವು ತಾತ್ಕಾಲಿಕ ಖಜಾನೆಗಳಿಂದ 'ರತ್ನ ಭಂಡಾರ್' ನಲ್ಲಿರುವ ಆಭರಣಗಳನ್ನು ಮತ್ತೆ ಇಡುತ್ತೇವೆ. ಅದಾದ ಬಳಿಕ ದಾಸ್ತಾನು ಕಾರ್ಯವನ್ನು ಕೈಗೊಳ್ಳಲಾಗುವುದು" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಲೆಬಾಳುವ ವಸ್ತುಗಳ ದಾಸ್ತಾನು ಮತ್ತು ಅದರ ರಚನೆಯ ದುರಸ್ತಿಗಾಗಿ 46 ವರ್ಷಗಳ ನಂತರ ಈ ವರ್ಷದ ಜುಲೈನಲ್ಲಿ 'ರತ್ನ ಭಂಡಾರ್' ಅನ್ನು ತೆರೆಯಲಾಗಿತ್ತು ಎಂದು ಅಧಿಕಾರಿ ಹೇಳಿದರು.