ನವದೆಹಲಿ, ಮಾ.27 - ಆಮ್ ಆದ್ಮಿ ಪಕ್ಷದ ಏಕೈಕ ಸಂಸದ ಸುಶೀಲ್ ಕುಮಾರ್ ರಿಂಕು ಹಾಗೂ ಪಕ್ಷದ ಶಾಸಕ ಶೀತಲ್ ಅಂಗುರಲ್ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಜಲಂಧರ್‌ನ ಸಂಸದ ರಿಂಕು ಮತ್ತು ಜಲಂಧರ್ ಪಶ್ಚಿಮದಿಂದ ವಿಧಾನಸಭೆಗೆ ಆಯ್ಕೆಯಾದ ಅಂಗುರಲ್ ಅವರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ʻಪಂಜಾಬ್, ವಿಶೇಷವಾಗಿ ಜಲಂಧರ್ ನ ಅಭಿವೃದ್ಧಿಗಾಗಿ ಬಿಜೆಪಿ ಸೇರುತ್ತಿದ್ದೇನೆ. ರಾಜ್ಯದ ಎಎಪಿ ಸರ್ಕಾರವು ಅಭಿವೃದ್ಧಿ ಕಾರ್ಯಗಳಲ್ಲಿ ಸಹಾಯ ಮಾಡುತ್ತಿಲ್ಲʼ ಎಂದು ಆರೋಪಿಸಿದರು. ರಿಂಕು ಅವರು ಕಳೆದ ವರ್ಷ ಕಾಂಗ್ರೆಸ್ ತೊರೆದು ಎಎಪಿ ಸೇರಿ, ಆಯ್ಕೆಯಾಗಿದ್ದರು. ಅಶಿಸ್ತಿನ ಪ್ರತಿಭಟನೆಗಾಗಿ ಸದನದಿಂದ ಅಮಾನತುಗೊಂಡಿದ್ದರು.
ಪಂಜಾಬಿನ ಮೂರು ಅವಧಿಯ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಟ್ಟು ಅವರು ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ. ಬಿಯಾಂತ್ ಸಿಂಗ್ ಅಧಿಕಾರದಲ್ಲಿದ್ದಾಗಲೇ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾಗಿದ್ದರು.