ಪುಣೆ ಪೋರ್ಷ್ ಡಿಕ್ಕಿ| ಉನ್ನತ ಪೊಲೀಸ್ ಅಧಿಕಾರಿ ವರ್ಗಾವಣೆಗೆ ಆಗ್ರಹ
ಪುಣೆ, ಮೇ 31- ಎರಡು ಜೀವಗಳನ್ನು ಬಲಿತೆಗೆದುಕೊಂಡ ಪೋರ್ಷ್ ಅಪಘಾತಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡುವಂತೆ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಾಟಿಯಾ, ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಇಬ್ಬರ ಸಾವಿಗೆ ಕಾರಣನಾದ, ಕಾನೂನಿನೊಡನೆ ಸಂಘರ್ಷದಲ್ಲಿರುವ ಬಾಲಕನನ್ನು ಉಳಿಸಲು ಪುರಾವೆಗಳ ನಾಶದಲ್ಲಿ ತೊಡಗಿರುವ ಪೊಲೀಸ್ ಭ್ರಷ್ಟಾಚಾರ ಮತ್ತು ಕೊಳಕಿನ ಅಸಭ್ಯ ಪ್ರದರ್ಶನವನ್ನು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ʻಪ್ರಕರಣ ನಮ್ಮನ್ನು ಬೆಚ್ಚಿಬೀಳಿಸಿದೆ, ಅಭದ್ರತೆಯನ್ನು ಹೆಚ್ಚಿಸಿದೆ ಮತ್ತು ನಮ್ಮ ಆಡಳಿತ ಹಾಗೂ ಪ್ರಜಾಪ್ರಭುತ್ವದ ಭಯಾನಕ ಮುಖವನ್ನು ತೋರಿಸಿದೆ. ಭ್ರಷ್ಟ ಅಧಿಕಾರಿಗಳು ಮತ್ತು ಕಿರುಕುಳಪೀಡಿತ ನಾಗರಿಕರು ಈಗ ದೈನಂದಿನ ಜೀವನದ ಭಾಗವಾಗಿಬಿಟ್ಟಿದ್ದಾರೆ. ಆದ್ದರಿಂದ, ನಿಮ್ಮ ಮಧ್ಯಪ್ರವೇಶವನ್ನು ಕೋರುತ್ತಿದ್ದೇವೆ,ʼ ಎಂದು ಪತ್ರದಲ್ಲಿ ಬರೆದಿದ್ದಾರೆ.
ʻನಮ್ಮ ನಿರ್ಲಕ್ಷ್ಯದಿಂದ ಭ್ರಷ್ಟಾಚಾರ ವ್ಯಾಪಕವಾಗಿದೆ, ಸ್ಪಷ್ಟವಾಗಿ ಗೋಚರಿಸುತ್ತಿದೆ ಮತ್ತು ಸಾಂಸ್ಥಿಕವಾಗಿದೆ. ಒಬ್ಬ ಅಧಿಕಾರಿ ಮಾತ್ರ ದುಷ್ಟರಲ್ಲ; ಇಡೀ ಅಧಿಕಾರಿ ವರ್ಗವೇ ಹಾಗೆ ಆಗಿಬಿಟ್ಟಿದೆ. ಇಂಥವರು ಒಗ್ಗೂಡಿದಾಗ, ಅಜೇಯರಾಗು ತ್ತಾರೆ. ನಾಗರಿಕರೊಬ್ಬರು ವ್ಯವಸ್ಥೆ ಎದುರು ಹೋರಾಡಲು ಆಗುವುದಿಲ್ಲ,ʼ ಎಂದು ಭಾಟಿಯಾ ಹೇಳಿದ್ದಾರೆ.
ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪುಣೆಯ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ (ಸಸೂನ್)ಯ ಮುಖ್ಯ ವೈದ್ಯಾಧಿಕಾರಿ ಸೇರಿದಂತೆ ವೈದ್ಯರು ಅಪರಾಧಿಯನ್ನು ರಕ್ಷಿಸಲು ಸಹಕರಿಸಿದ್ದಾರೆ. ಪೊಲೀಸರು ಆಲ್ಕೋಹಾಲ್ ಸೇವನೆ ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹಿಸಲು ಆರು ಗಂಟೆಗಳಿಗೂ ಹೆಚ್ಚು ಕಾಲ ತಡಮಾಡಿದರು; ಠಾಣೆಯಲ್ಲಿ ಪಿಜ್ಜಾ ತಿನ್ನಿಸಿದರು: ಆನಂತರ ರಕ್ತದ ಮಾದರಿಯನ್ನು ನಾಶಪಡಿಸಿದರು ಮತ್ತು ಬದಲಿಸಿದರು; ಸಾಕ್ಷಿಗಳು ಮತ್ತು ಕಾರು ಪ್ರಯಾಣಿಕರ ಹೇಳಿಕೆಗಳ ದಾಖಲು ವಿಳಂಬವಾಯಿತು,ʼ ಎಂದಿದ್ದಾರೆ.
ಐಪಿಎಸ್ ಅಧಿಕಾರಿಯಾದ ಪೊಲೀಸ್ ಕಮಿಷನರ್, ರಕ್ತದ ಮಾದರಿ ಸಂಗ್ರಹ-ಪರೀಕ್ಷೆ ಕುರಿತುʻಕಾರ್ಯವಿಧಾನದ ಲೋಪʼ ಎಂದಿದ್ದಾರೆ. ವೈದ್ಯರನ್ನು ಉಳಿಸಲು ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಹೇಳಿದ್ದರೂ, ಇಬ್ಬರು ರಾಜಕಾರಣಿಗಳು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ. ತಮ್ಮ ಅಧೀನ ಅಧಿಕಾರಿಗಳ ದುಷ್ಕೃತ್ಯಗಳಿಗೆ ಹಿರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡದ ಹೊರತು, ಸರ್ಕಾರಿ ಇಲಾಖೆಗಳು ಸುಧಾರಿ ಸುವುದಿಲ್ಲ ಎಂಬ ಅಂಶವನ್ನು ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಅಧೀನ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಲಂಚ ಸಂಗ್ರಹಿಸಿ ಕೊಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.ʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ʻಪೊಲೀಸ್ ಕಮಿಷನರ್ ಅವರನ್ನು ತಕ್ಷಣ ವರ್ಗಾಯಿಸಿ, ಅವರನ್ನು ತನಿಖೆಗೆ ಒಳಪಡಿಸಬೇಕು. ರಾಜಕಾರಣಿಯೊಬ್ಬರ ಶಿಫಾರಸಿನಂತೆ ಮುಖ್ಯ ವೈದ್ಯಾಧಿಕಾರಿಯನ್ನು ನೇಮಿಸಿರುವ ಕುರಿತು ತನಿಖೆ ನಡೆಸಿ, ಆರೋಗ್ಯ ಕಾರ್ಯದರ್ಶಿಗೆ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.