ಚೀನಾದಲ್ಲಿ ಐತಿಹಾಸಿಕ ಎಸ್​​ಸಿಒ ಸಭೆ; ಪ್ರಧಾನಿ ಮೋದಿ ಸೇರಿದಂತೆ 20 ವಿಶ್ವ ನಾಯಕರು ಭಾಗಿ

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಈ ಸಭೆಯು, ಚೀನಾ ಆಯೋಜಿಸುತ್ತಿರುವ ಐದನೇ ಶೃಂಗಸಭೆಯಾಗಿದೆ.;

Update: 2025-08-23 05:18 GMT

ಪ್ರಧಾನಿ ಮೋದಿ ಜೊತೆಗೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ (SCO) ಇತಿಹಾಸದಲ್ಲೇ ಅತಿದೊಡ್ಡ ಶೃಂಗಸಭೆಯನ್ನು ಈ ತಿಂಗಳ ಕೊನೆಯಲ್ಲಿ ಚೀನಾ ಆಯೋಜಿಸಿದೆ. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 20 ವಿಶ್ವ ನಾಯಕರು ಭಾಗವಹಿಸಲಿದ್ದಾರೆ ಎಂದು ಚೀನಾ ಅಧಿಕೃತವಾಗಿ ಘೋಷಿಸಿದೆ. ಇದು ಜಾಗತಿಕ ವೇದಿಕೆಯಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವ ಮತ್ತು ರಾಜತಾಂತ್ರಿಕ ಮಹತ್ವವನ್ನು ಎತ್ತಿ ತೋರಿಸುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಈ ಸಭೆಯು, ಚೀನಾ ಆಯೋಜಿಸುತ್ತಿರುವ ಐದನೇ ಶೃಂಗಸಭೆಯಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹತ್ತು ಸದಸ್ಯ ರಾಷ್ಟ್ರಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಉಪಸ್ಥಿತಿಯು ಈ ಸಭೆಗೆ ವಿಶೇಷ ಮಹತ್ವ ತಂದುಕೊಟ್ಟಿದೆ.

ಬೃಹತ್ ಸೇನಾ ಪ್ರದರ್ಶನಕ್ಕೆ ಸಿದ್ಧತೆ

ಶೃಂಗಸಭೆಯ ಬಳಿಕ, ಹೆಚ್ಚಿನ ನಾಯಕರು ಸೆಪ್ಟೆಂಬರ್ 3 ರಂದು ಬೀಜಿಂಗ್‌ನಲ್ಲಿ ನಡೆಯಲಿರುವ ಚೀನಾದ ಬೃಹತ್ ಸೇನಾ ಪರೇಡ್‌ಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಜಪಾನ್ ವಿರುದ್ಧದ ಯುದ್ಧದಲ್ಲಿ ಚೀನಾದ ವಿಜಯದ 80ನೇ ವಾರ್ಷಿಕೋತ್ಸವದ ಅಂಗವಾಗಿ ಈ ಪರೇಡ್ ಆಯೋಜಿಸಲಾಗಿದೆ. ಇದರಲ್ಲಿ ಚೀನಾ ತನ್ನ ಮಿಲಿಟರಿ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಲಿದ್ದು, ನಾಲ್ಕನೇ ತಲೆಮಾರಿನ ಟ್ಯಾಂಕ್‌ಗಳು, ಯುದ್ಧ ವಿಮಾನಗಳು, ಮಾನವರಹಿತ ಗುಪ್ತಚರ ಉಪಕರಣಗಳು ಮತ್ತು ಹೈಪರ್‌ಸಾನಿಕ್ ಕ್ಷಿಪಣಿಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇದೇ ಮೊದಲ ಬಾರಿಗೆ ಅನಾವರಣಗೊಳಿಸುವ ಸಾಧ್ಯತೆ ಇದೆ ಎಂದು ಚೀನಾದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಮಹತ್ವಾಕಾಂಕ್ಷೆಯ ಕಾರ್ಯಸೂಚಿ

ಈ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ತಮ್ಮ ಭಾಷಣದಲ್ಲಿ ಎಸ್​ಸಿಒ ಗೆ ಹೊಸ ದೃಷ್ಟಿಕೋನ ಮತ್ತು ಪ್ರಸ್ತಾವನೆಗಳನ್ನು ಮಂಡಿಸಲಿದ್ದಾರೆ. ಅಲ್ಲದೆ, SCOದ ಅಭಿವೃದ್ಧಿಗಾಗಿ ಚೀನಾದ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಚೀನಾದ ಸಹಾಯಕ ವಿದೇಶಾಂಗ ಸಚಿವ ಲಿಯು ಬಿನ್ ತಿಳಿಸಿದ್ದಾರೆ.

ಶೃಂಗಸಭೆಯ ಕೊನೆಯಲ್ಲಿ, ಸದಸ್ಯ ರಾಷ್ಟ್ರಗಳ ನಾಯಕರು ಜಂಟಿ ಘೋಷಣೆಗೆ ಸಹಿ ಹಾಕಲಿದ್ದು, ಮುಂದಿನ ಹತ್ತು ವರ್ಷಗಳ SCO ಅಭಿವೃದ್ಧಿ ಕಾರ್ಯತಂತ್ರವನ್ನು ಅನುಮೋದಿಸಲಿದ್ದಾರೆ. ಭದ್ರತೆ, ಆರ್ಥಿಕತೆ ಮತ್ತು ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವ ಹಲವು ಒಪ್ಪಂದಗಳಿಗೂ ಸಹಿ ಹಾಕಲಾಗುವುದು ಎಂದು ಹೇಳಲಾಗಿದೆ. ಈ ಸಭೆಯು ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

Tags:    

Similar News