ಬಿಜೆಪಿ ಸರ್ಕಾರದಲ್ಲಿ ಕಾಶ್ಮೀರದ ಯುವಜನರ ಸಬಲೀಕರಣ: ಮೋದಿ

Update: 2024-09-19 12:15 GMT

ಜಮ್ಮು-ಕಾಶ್ಮೀರದ ಯುವಕರು ತಮ್ಮ ಮತ ಪ್ರಜಾಸತ್ತಾತ್ಮಕ ಬದಲಾವಣೆ ತರಬಹುದು ಎಂಬ ವಿಶ್ವಾಸ ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆಪ್ಟೆಂಬರ್ 19) ಪ್ರಚಾರ ಸಭೆಯಲ್ಲಿ ಹೇಳಿದರು.

ಶ್ರೀನಗರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಇದು ಅವರ ಸಬಲೀಕರಣದ ಮೊದಲ ಹೆಜ್ಜೆ ಎಂದು ಹೇಳಿದರು. 

ರಾಜ್ಯ ಸ್ಥಾನಮಾನದ ಭರವಸೆ: ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಮಾತನಾಡಿ, ಜಮ್ಮು-ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ. ರಾಜ್ಯದ ಯುವಜನರು ಇನ್ನು ಅಸಹಾಯಕರಲ್ಲ. ಅವರು ಮೋದಿ ಸರ್ಕಾರದಡಿ ಅಧಿಕಾರ ಪಡೆಯುತ್ತಿದ್ದಾರೆ,ʼ ಎಂದು ಹೇಳಿದರು. 

ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮೇಲೆ ವಾಗ್ದಾಳಿ ನಡೆಸಿ, ಈ ಮೂರು ಪಕ್ಷಗಳು ಪ್ರಜಾಪ್ರಭುತ್ವ ಮತ್ತು ಕಾಶ್ಮೀರವನ್ನು ತುಳಿಯುತ್ತಿವೆ ಎಂದು ದೂರಿದರು.ʻ1980ರ ದಶಕದಲ್ಲಿ ಅವರು ಮಾಡಿದ್ದು ನಿಮಗೆ ನೆನಪಿದೆಯೇ? ಜಮ್ಮು-ಕಾಶ್ಮೀರವನ್ನು ಊಳಿಗದಂತೆ ನೋಡಿಕೊಂಡರು. ತಮ್ಮ ಕುಟುಂಬ ವನ್ನು ಹೊರತುಪಡಿಸಿ ಯಾರಿಗೂ ಮುಂದೆ ಬರಲು ಬಿಡಲಿಲ್ಲ? ಇಲ್ಲದಿದ್ದರೆ, ಅವರು ಪಂಚಾಯತ್, ಜಿಲ್ಲೆ ಮತ್ತು ವಿಭಾಗ ಚುನಾವಣೆಗಳನ್ನು ಏಕೆ ನಿಲ್ಲಿಸಿದರು?ʼ ಎಂದು ಪ್ರಶ್ನಿಸಿದರು. 

ʻ ಅವರ ಸ್ವಾರ್ಥದ ಪರಿಣಾಮವಾಗಿ ಯುವಜನರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡರು. ಯಾರಿಗೆ ಮತ ಚಲಾಯಿಸಿದರೂ ಈ ಮೂರು ಕುಟುಂಬಗಳೇ ಅಧಿಕಾರಕ್ಕೆ ಬರುತ್ತವೆ ಎಂದು ಭಾವಿಸಿದರು. ಕಳೆದ ಐದು ವರ್ಷದಲ್ಲಿ ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಹಳ ಬದಲಾಗಿದೆ. ಇದರಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಯುವಜನರ ವಿಶ್ವಾಸ ಮರುಸ್ಥಾಪನೆಯಾಗಿದೆ,ʼ ಎಂದು ಹೇಳಿದರು.

ʻಹಿಂದೆ ಚುನಾವಣೆಗಳು ನಡೆದ ರೀತಿಯನ್ನು ನೆನಪಿಸಿಕೊಳ್ಳಿ. ಸಂಜೆ 6 ಗಂಟೆಗೆ ಪ್ರಚಾರ ನಿಲ್ಲುತ್ತಿತ್ತು. ಮನೆ ಮನೆ ಪ್ರಚಾರ ಅಸಾಧ್ಯವಾಗಿತ್ತು. ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿ ಇದರಿಂದ ಸಂತೋಷಗೊಂಡಿದ್ದವು,.ಈಗ ತಡರಾತ್ರಿಯಲ್ಲೂ ಪ್ರಚಾರ ನಡೆಯುತ್ತದೆ. ಯುವಜನರು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕಂಡುಕೊಂಡಿದ್ದಾರೆ. ತಮ್ಮ ಮತ ತಮ್ಮ ಹಕ್ಕು; ಇದರಿಂದ ಬದಲಾವಣೆಯನ್ನು ತರಬಹುದು ಎಂದು ನಂಬಿದ್ದಾರೆ. ಇದು ಸಬಲೀಕರಣದ ಮೊದಲ ಹೆಜ್ಜೆ,ʼ ಎಂದು ಹೇಳಿದರು.

Tags:    

Similar News