Jayachandran | ʼಒಲವಿನ ಉಡುಗೊರೆ ಕೊಡಲೇನುʼ ಹಾಡಿನ ಗಾಯಕ ಇನ್ನಿಲ್ಲ

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಜಯಚಂದ್ರನ್‌ ಕೇರಳದ ತ್ರಿಶ್ಯೂರ್‌ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು.;

Update: 2025-01-09 19:17 GMT
ಗಾಯಕ ಪಿ.ಜಯಚಂದ್ರನ್‌

ʼಓಲವಿನ ಹುಡುಗೊರೆ ಕೊಡಲೇನು.. ರಕುತದಿ ಬರೆದೆನು ಇದ ನಾನು..ʼ ರೆಬಲ್‌ಸ್ಟಾರ್‌ ಅಂಬರೀಷ್‌ ಹಾಗೂ ಮಂಜುಳಾ ಶರ್ಮಾ ನಟನೆಯ ಒಲವಿನ ಉಡುಗೊರೆ ಚಿತ್ರದ ಈ ಎವರ್‌ಗ್ರೀನ್‌ ಹಾಡಿಗೆ ಜೀವ ತುಂಬಿದ ಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌(೮೦) ಕೊನೆಯುಸಿರೆಳೆದಿದ್ದಾರೆ.  

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಜಯಚಂದ್ರನ್‌ ಕೇರಳದ ತ್ರಿಶ್ಯೂರ್‌ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು. ಖ್ಯಾತ ಸಂಗೀತ ನಿರ್ದೇಶಕರಾದ ಜಿ ದೇವರಾಜನ್, ಎಂ.ಎಸ್. ಬಾಬುರಾಜ್, ಇಳಯರಾಜ, ಎ.ಆರ್ ರೆಹಮಾನ್ ಹಾಗೂ ಎಂ.ಎಂ ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಹಿನ್ನೆಲೆ ಗಾಯಕರಾಗಿ ಸಾವಿರಾರು ಹಾಡುಗಳಿಗೆ ಕಂಠದಾನ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಕಲಾರಸಿಕರ ಮನಗೆದ್ದಿದ್ದ  ಜಯಚಂದ್ರನ್‌ ಅವರು, ತಮ್ಮ ವರ್ಣರಂಜಿತ ವೃತ್ತಿಜೀವನದಲ್ಲಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಒಟ್ಟು 16,000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದರು.

ಜಯಚಂದ್ರನ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿಗಳು ಸಂದಿವೆ. ಮೃತರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್‌ ಅವರನ್ನು ಅಗಲಿದ್ದಾರೆ. ಜಯಚಂದ್ರನ್‌ ಅವರ ಪುತ್ರ ದೀನನಾಥನ್ ಕೂಡ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

1944ರ ಮಾರ್ಚ್ 3ರಂದು ಎರ್ನಾಕುಲಂನಲ್ಲಿ ಜನಿಸಿದ ಜಯಚಂದ್ರನ್‌ ಅವರು ಬಾಲ್ಯದಿಂದಲೇ ಸಾಂಪ್ರದಾಯಿಕ ತಾಳವಾದ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಚೆಂಡೆ ವಾದನ, ಮೃದಂಗ ವಾದನವನ್ನೂ ಕಲಿತಿದ್ದರು.

ಕನ್ನಡದಲ್ಲೂ ಹಾಡಿದ್ದ ಜಯಚಂದ್ರನ್‌

ಅಂಬರೀಷ್‌ ಅಭಿನಯದ ಒಲವಿನ ಉಡುಗೊರೆ ಚಿತ್ರದ ಒಲವಿನ ಉಡುಗೊರೆ ಕೊಡಲೇನು, ಅಮೃತ ಘಳಿಗೆ ಚಿತ್ರದ 'ಹಿಂದೂಸ್ತಾನವು ಎಂದೂ ಮರೆಯದ..', ರಂಗನಾಯಕಿ ಸಿನಿಮಾದ 'ಮಂದಾರ ಪುಷ್ಪವು ನೀನು..', ಮಾನಸ ಸರೋವರದ 'ಚಂದ..ಚಂದ..', ಹಂತಕನ ಸಂಚು ಸಿನಿಮಾದ 'ಜೀವನ ಸಂಜೀವನ... ಭಕ್ತ ಪ್ರಹ್ಲಾದ ಸಿನಿಮಾದ 'ಕಮಲ ನಯನ.. ಕಮಲ ವದನ..' ಪ್ರಾಯ ಪ್ರಾಯ ಪ್ರಾಯ ಸಿನಿಮಾದ 'ಭೂಮಿ ತಾಯಾಣೆ, ನೀ ಇಷ್ಟ ಕಣೆ..!' ಹಾಗೂ ಮಸಣದ ಹೂವು ಚಿತ್ರದ 'ಕನ್ನಡ ನಾಡಿನ ಕರಾವಳಿ..' ಅಂತಹ ಸುಪ್ರಸಿದ್ದ ಗೀತೆಗಳನ್ನು ಹಾಡಿದ್ದಾರೆ.

Tags:    

Similar News