Gautam Adani: ಅಮೆರಿಕದಲ್ಲಿ ಬಂಧನ ವಾರಂಟ್‌ ಪ್ರಕರಣ; ಸುಪ್ರೀಂ ಕೋರ್ಟ್‌ನಲ್ಲೂ ಅದಾನಿ ವಿರುದ್ಧ ಅರ್ಜಿ

ಭಾರತದ ನಾಲ್ಕು ರಾಜ್ಯಗಳಲ್ಲಿ ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕ ಮಾಡಿಕೊಡುವುದಕ್ಕೆ ಪ್ರತಿಯಾಗಿ ಭಾರತೀಯ ಅಧಿಕಾರಿಗಳಿಗೆ ಸುಮಾರು 2,200 ಕೋಟಿ ರೂ. ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಅಮೆರಿಕದ ಸ್ಟಾಕ್‌ ಎಕ್ಸ್‌ಚೇಂಜ್‌ ಮಾಡಿದೆ.;

Update: 2024-11-24 12:41 GMT
Gautham Adani

ಲಂಚ ಪ್ರಕರಣದಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಗರ್ ಅದಾನಿಗೆ ಅಮೆರಿಕದ ನ್ಯಾಯಾಲಯ ಸಮನ್ಸ್‌ ನೀಡಿರುವ ಪ್ರಕರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲಿಯನೇರ್ ಕೈಗಾರಿಕೋದ್ಯಮಿ ವಿರುದ್ಧ ಭಾರತದಲ್ಲೂ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ವಕೀಲ ವಿಶಾಲ್ ತಿವಾರಿ ಎಂಬುವರು ಸಲ್ಲಿಸಿದ ಅರ್ಜಿಯಲ್ಲಿ, ಲಂಚ ಮತ್ತು ವಂಚನೆಯ ಆರೋಪದ ಮೇಲೆ ಅಮೆರಿಕದಲ್ಲಿ ಆರೋಪ ಎದುರಿಸುತ್ತಿರುವ ಗೌತಮ್ ಅದಾನಿ ವಿರುದ್ಧದ ತನಿಖೆ ನಡೆಸಬೇಕೆಂದು ಕೋರಿದ್ದಾರೆ. ಅಂದ ಹಾಗೆ ಇದು ಮಧ್ಯಂತರ ಅರ್ಜಿಯಾಗಿದೆ. ಹಿಂಡೆನ್‌ಬರ್ಗ್‌ ವರದಿಯಲ್ಲಿ ಉಲ್ಲೇಖಿಸಿದಂತೆ, ಅದಾನಿ ಷೇರುಗಳ ಬೆಲೆಯನ್ನು ತಿರುಚಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅದರ ಜತೆಗೆ ಈ ಮಧ್ಯಂತ ಅರ್ಜಿ ಸಲ್ಲಿಸಲಾಗಿದೆ.

ಗಂಭೀರ ಆರೋಪಗಳು

ಭಾರತದ ನಾಲ್ಕು ರಾಜ್ಯಗಳಲ್ಲಿ ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕ ಮಾಡಿಕೊಡುವುದಕ್ಕೆ ಪ್ರತಿಯಾಗಿ ಭಾರತೀಯ ಅಧಿಕಾರಿಗಳಿಗೆ ಸುಮಾರು 2,200 ಕೋಟಿ ರೂ. ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಅಮೆರಿಕದ ಸ್ಟಾಕ್‌ ಎಕ್ಸ್‌ಚೇಂಜ್‌ ಮಾಡಿದೆ. ಅದರ ಆಧಾರದಲ್ಲಿ ಅಲ್ಲಿ ಅವರು ಪ್ರಕರಣ ಎದುರಿಸುತ್ತಿದ್ದ ವಾರಂಟ್‌ ಜಾರಿಯಾಗಿದೆ.

ಅಮೆರಿಕದ ದೋಷಾರೋಪಣೆಯ ಪ್ರಕಾರ, ಅದಾನಿ ಹಲವಾರು ವರ್ಷಗಳಿಂದ ಹಣವನ್ನು ಸಂಗ್ರಹಿಸುವಾಗ ಸುಳ್ಳು ದಾಖಲೆಗಳು ಮತ್ತು ತಪ್ಪು ವಹಿವಾಟು ನಡೆಸಿ ಅಮೆರಿಕದ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆ. ಈ ಯೋಜನೆಯು ಸಾಲಗಳು ಮತ್ತು ಬಾಂಡ್‌ಗಳ ಮೂಲಕ ಸಂಗ್ರಹಿಸಿದ 2 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣ ಒಳಗೊಂಡಿದೆ ಎಂದು ಆರೋಪಿಸಲಾಗಿದೆ.

ಅದಾನಿ ಗ್ರೂಪ್ ಈ ಆರೋಪವನ್ನು ನಿರಾಕರಿಸಿದ್ದು, ಯುಎಸ್ ಪ್ರಾಸಿಕ್ಯೂಟರ್‌ಗಳು ಮಾಡಿದ ಆರೋಪಗಳು "ಆಧಾರರಹಿತ" ಮತ್ತು ಸಮೂಹವು ಎಲ್ಲಾ ಕಾನೂನುಗಳಿಗೆ ಬದ್ಧವಾಗಿದೆ ಎಂದು ಹೇಳಿದೆ. ಸಾಧ್ಯವಿರುವ ಎಲ್ಲ ಕಾನೂನು ನೆರವು ಪಡೆಯುವುದಾಗಿಯೂ ಅದು ಪ್ರತಿಜ್ಞೆ ಮಾಡಿದೆ.

ಸೆಬಿ ವಿರುದ್ಧ ಆರೋಪ

ಅದಾನಿ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಭಾರತೀಯ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ತಿವಾರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ವಾದಿಸಿದ್ದಾರೆ.

"ಸೆಬಿ ತನಿಖೆಯನ್ನು ಆರಂಭಿಸಿ ವಿಶ್ವಾಸ ಮೂಡಿಸಬೇಕು. ಸೆಬಿ ತನಿಖೆಯಲ್ಲಿ ಅಲ್ಪ ಮಾರಾಟದ ಆರೋಪಗಳು ಇರುವುದರಿಂದ ಮತ್ತು ವಿದೇಶಿ ಅಧಿಕಾರಿಗಳು ಮಾಡಿದ ಪ್ರಸ್ತುತ ಆರೋಪಗಳಿಗೆ ಸಂಬಂಧವಿರಬಹುದು. ಆದರೆ ಸೆಬಿಯ ತನಿಖಾ ವರದಿಯು ಇದನ್ನು ಸ್ಪಷ್ಟಪಡಿಸಬೇಕು, ಇದರಿಂದ ಹೂಡಿಕೆದಾರರು ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಯುಎಸ್ ಎಸ್ಇಸಿ ಸಮನ್ಸ್

ಸೌರ ವಿದ್ಯುತ್ ಒಪ್ಪಂದಗಳನ್ನು ಪಡೆಯಲು ಲಂಚ ನೀಡಿದ ಆರೋಪಗಳಿಗೆ 21 ದಿನಗಳಲ್ಲಿ ಉತ್ತರಿಸುವಂತೆ ಯುಎಸ್ ಎಸ್ಇಸಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅವರಿಗೆ ಸಮನ್ಸ್ ನೀಡಿದೆ.

ನ್ಯೂಯಾರ್ಕ್ ಈಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್ ಮೂಲಕ ಕಳುಹಿಸಲಾದ ಸಮನ್ಸ್‌ನಲ್ಲಿ ಅವರು ಪ್ರತಿಕ್ರಿಯಿಸಲು ವಿಫಲವಾದರೆ ಇದು ಆರೋಪಿಗಳ ವಿರುದ್ಧ ಡೀಫಾಲ್ಟ್ ತೀರ್ಪನ್ನು ದಾಖಲಿಸಬಹುದು ಎಂದು ಎಚ್ಚರಿಸಿದೆ.

ಭಾರತದಲ್ಲಿ ಸೆಬಿ ತನಿಖೆ

ಭಾರತದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯಲ್ಲಿ, ಅರ್ಜಿದಾರರಾದ ವಿಶಾಲ್ ತಿವಾರಿ, ಅದಾನಿ ಗ್ರೂಪ್ ಸ್ಟಾಕ್ ತಿರುಚಿದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರಕರಣದಲ್ಲಿ ಯುಎಸ್ ನ್ಯಾಯಾಲಯದ ದೋಷಾರೋಪಣೆ ಮತ್ತು ಎಸ್ಇಸಿಯ ದೂರು ಎಂಬ ಎರಡು ನಿರ್ಣಾಯಕ ದಾಖಲೆಗಳನ್ನು ಸೇರಿಸಬೇಕೆಂದು ವಿನಂತಿಸಿದ್ದಾರೆ.

Tags:    

Similar News