ಟಿಎಂಸಿ ಸಂಸದರನ್ನು ಭೇಟಿ ಮಾಡಿದ ಪವಾರ್: ಷೇರು ಮಾರುಕಟ್ಟೆ ಹಗರಣದ ತನಿಖೆಗೆ ಬೆಂಬಲ
ಮುಂಬೈ, ಜೂನ್ 18- ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ತೃಣಮೂಲ ಕಾಂಗ್ರೆಸ್ ಸಂಸದರ ನಿಯೋಗ ಮಂಗಳವಾರ ಭೇಟಿ ಮಾಡಿದೆ. ಮತಗಟ್ಟೆ ಸಮೀಕ್ಷೆ ನಂತರ ಷೇರು ಮಾರುಕಟ್ಟೆ ತಿರುಚುವಿಕೆ ಕುರಿತು ತನಿಖೆ ನಡೆಸಬೇಕೆಂಬ ಟಿಎಂಸಿ ಬೇಡಿಕೆಯನ್ನು ಪವಾರ್ ಅವರು ಬೆಂಬಲಿಸಿದ್ದಾರೆ.
ಚುನಾವಣೆ ಫಲಿತಾಂಶದ ಬಳಿಕ ಮಾರುಕಟ್ಟೆ ಕುಸಿತದಿಂದ ಚಿಲ್ಲರೆ ಹೂಡಿಕೆದಾರರು 30 ಲಕ್ಷ ಕೋಟಿ ರೂ. ಕಳೆದುಕೊಂಡಿರುವುದು ʻಅತಿ ದೊಡ್ಡ ಷೇರು ಮಾರುಕಟ್ಟೆ ಹಗರಣʼ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ಅವರ ಆರೋಪಗಳನ್ನು ʻಆಧಾರರಹಿತʼ ಎಂದು ತಳ್ಳಿಹಾಕಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ʻನಕಲಿ ಮತಗಟ್ಟೆ ಸಮೀಕ್ಷೆಯನ್ನು ಬಳಸಿಕೊಂಡು ಷೇರು ಮಾರುಕಟ್ಟೆಗಳನ್ನು ಹೇಗೆ ತಿರುಚಲಾಯಿತು ಎಂಬ ಕುರಿತು ತನಿಖೆ ನಡೆಸಬೇಕು,ʼ ಎಂದು ಒತ್ತಾಯಿಸಿ ದ್ದಾರೆ.
ಮಂಗಳವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪವಾರ್, ʻಮತಗಟ್ಟೆ ಸಮೀಕ್ಷೆ ಬಳಸಿಕೊಂಡು ಷೇರು ಮಾರುಕಟ್ಟೆಯನ್ನು ನಿರ್ವಹಿಸಿದ ಕುರಿತು ತನಿಖೆಗೆ ಒತ್ತಾಯಿಸಿ, ಸೆಬಿಗೆ ದೂರು ನೀಡಲು ತೃಣಮೂಲ ಕಾಂಗ್ರೆಸ್ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಸಾಗರಿಕಾ ಘೋಷ್ ಮತ್ತು ಸಾಕೇತ್ ಗೋಖಲೆ ಅವರು ಮುಂಬೈಗೆ ಆಗಮಿಸಿದ್ದರು. ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಶರದ್ಚಂದ್ರ ಪವಾರ್ ) ಈ ವಿಷಯದಲ್ಲಿ ಅವರನ್ನು ಬೆಂಬಲಿಸಲಿದೆ,ʼ ಎಂದು ಪವಾರ್ ಬರೆದಿದ್ದಾರೆ.
ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್, ಸಂಸದೆ ಹಾಗೂ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಮಾಜಿ ಎಂಎಲ್‌ಸಿ ವಿದ್ಯಾ ಚವಾಣ್ ಅವರು ಉಪಸ್ಥಿತರಿದ್ದರು.