ಬ್ಯಾಲೆಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕ್ ; ಭಾರತ ಕಳವಳ
ಸೇನಾಪಡೆಗಳ ಕಾರ್ಯಾಚರಣೆಯ ಸನ್ನದ್ಧತೆ ಖಚಿತಪಡಿಸಿಕೊಳ್ಳುವುದು ಮತ್ತು ತಾಂತ್ರಿಕತೆ ಮೌಲ್ಯೀಕರಿಸುವ ಗುರಿ ಹೊಂದಿರುವುದಾಗಿ ಪಾಕಿಸ್ತಾನ ಸೇನೆ ಹೇಳಿದೆ.;
ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ನಡೆಸಿತು.
ಪಾಕಿಸ್ತಾನ ಸೇನೆ ಶನಿವಾರ ತನ್ನ ಅಬ್ದಾಲಿ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. 450 ಕಿ.ಮೀ ಗಮ್ಯ ಹೊಂದಿರುವ ಈ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಿರುವುದು ಯುದ್ಧದ ಭೀತಿ ಮೂಡಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕ್ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಕ್ಷಿಪಣಿ ಪರೀಕ್ಷೆ ನಡೆಸಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಅಪಾಯಕಾರಿ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದೆ.
ಕ್ಷಿಪಣಿ ಉಡಾವಣೆಯು ಸೇನಾಪಡೆಗಳ ಸನ್ನದ್ಧತೆ ಹಾಗೂ ತಾಂತ್ರಿಕತೆ ಮೌಲ್ಯೀಕರಿಸುವ ಗುರಿ ಹೊಂದಿದೆ. ಈ ಕ್ಷಿಪಣಿಯು ಅತ್ಯಾಧುನಿಕ ನ್ಯಾವಿಗೇಶನ್ ವ್ಯವಸ್ಥೆ ಮತ್ತು ಕುಶಲತೆಯ ವೈಶಿಷ್ಟ್ಯ ಒಳಗೊಂಡಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಕ್ಷಿಪಣಿ ಪ್ರಯೋಗವು ಎಕ್ಸ್‌ಪ್ರೆಸ್ ಇಂಡಸ್ ಭಾಗವಾಗಿದ್ದು, ಪ್ರಯೋಗಾರ್ಥ ಪರೀಕ್ಷೆ ವೇಳೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್, ಸೇನಾ ಪಡೆಗಳ ಕಮಾಂಡರ್ ಹಾಗೂ ಕಾರ್ಯತಂತ್ರ ಯೋಜನೆಗಳ ವಿಭಾಗದ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಹಾಜರಿದ್ದರು.
ಪಾಕಿಸ್ತಾನದ ಸೇನಾಪಡೆಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ. ವಿಶ್ವಾಸಾರ್ಹತೆ ಮತ್ತು ರಾಷ್ಟ್ರೀಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಿದ್ಧತೆ ಮತ್ತು ತಾಂತ್ರಿಕ ಪ್ರಾವೀಣ್ಯತೆಯನ್ನು ಉತ್ತಮಪಡಿಸಿಕೊಳ್ಳಲು ಇದರಿಂದ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಭಾರತ, ಕ್ಷಿಪಣಿ ಪರೀಕ್ಷೆಯು ಉದ್ದೇಶಪೂರ್ವಕವಲ್ಲದ ಕೃತ್ಯ ಎಂದು ಟೀಕಿಸಿದ್ದು, ಪಾಕಿಸ್ತಾನ ಯೋಜಿಸಿಯೇ ಈ ಕೃತ್ಯ ಎಸಗಿ ನಿಯಮ ಉಲ್ಲಂಘಿಸಿದೆ. ಇದು ಪ್ರಚೋದನೆಯ ಅಜಾಗರೂಕ ಕೃತ್ಯ. ಇಂತಹ ಸಂದರ್ಭದಲ್ಲಿ ಭಾರತ ವಿರುದ್ಧದ ಈ ಪರೀಕ್ಷೆ ಅಪಾಯಕಾರಿಯಾಗಿದೆ ಎಂದು ತಿಳಿಸಿದೆ.