ದುರ್ಗಾ ಪೂಜೆ ಹಿನ್ನೆಲೆ; ಬಾಂಗ್ಲಾದಿಂದ ಪಶ್ವಿಮಬಂಗಾಳಕ್ಕೆ 50 ಮೆಟ್ರಿಕ್ ಟನ್ ಹಿಲ್ಸಾ ಮೀನು ರಫ್ತು
ದುರ್ಗಾಪೂಜೆಯ ಹಿನ್ನಲೆಯಲ್ಲಿ ಬಾಂಗ್ಲಾದೇಶದಿಂದ 50 ಮೆಟ್ರಿಕ್ ಟನ್ ಹಿಲ್ಸಾ ಮೀನುಗಳು ಪಶ್ವಿಮ ಬಂಗಾಳಕ್ಕೆ ರಫ್ತಾಗಿವೆ ಎಂದು ಆಮದುದಾರರು ಶನಿವಾರ ತಿಳಿಸಿದ್ದಾರೆ.;
ದುರ್ಗಾಪೂಜೆಯ ಹಿನ್ನಲೆಯಲ್ಲಿ ಬಾಂಗ್ಲಾದೇಶದಿಂದ 50 ಮೆಟ್ರಿಕ್ ಟನ್ ಹಿಲ್ಸಾ ಮೀನುಗಳು ಪಶ್ವಿಮ ಬಂಗಾಳಕ್ಕೆ ರಫ್ತಾಗಿವೆ ಎಂದು ಆಮದುದಾರರು ಶನಿವಾರ ತಿಳಿಸಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ದುರ್ಗಾ ಪೂಜೆ ಹಬ್ಬದ ಸಮಯದಲ್ಲಿ ಅಕ್ಟೋಬರ್ ಮಧ್ಯದವರೆಗೆ ಮೀನುಗಳನ್ನು ರಫ್ತು ಮಾಡಲು ಅನುಮತಿಸಿದ್ದು, ಇದೀಗ 50 ಮೆಟ್ರಿಕ್ ಟನ್ ಹಿಲ್ಸಾ ಪಶ್ಚಿಮ ಬಂಗಾಳಕ್ಕೆ ರವಾನಿಸಲಾಗಿದೆ.
ಬಂಗಾಳಿಗಳ ನೆಚ್ಚಿನ ಖಾದ್ಯವಾದ ಅದೇ ಪ್ರಮಾಣದ 'ಪದ್ಮಾರ್ ಇಲಿಶ್' (ಪದ್ಮಾ ನದಿಯಿಂದ ಹಿಡಿದ ಹಿಲ್ಸಾ) ಮೀನನ್ನು ಶೀಘ್ರದಲ್ಲೇ ರಫ್ತು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೀನು ಆಮದುದಾರರ ಸಂಘವು ಇತ್ತೀಚೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕಳೆದ ಐದು ವರ್ಷಗಳಿಂದ ದುರ್ಗಾಪೂಜೆಯ ಸಮಯದಲ್ಲಿ ಹಿಲ್ಸಾವನ್ನು ರಪ್ತು ಮಾಡಲಾಗುತ್ತಿದ್ದು, ಈ ಬಾರಿಯೂ ಹಬ್ಬದ ಸಂದರ್ಭದಲ್ಲಿ ಹಿಲ್ಸಾವನ್ನು ರಫ್ತು ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿತ್ತು.
ಮೀನುಗಳನ್ನು ರಫ್ತು ಮಾಡಲು ಬಾಂಗ್ಲಾದ ಮಧ್ಯಂತರ ಸರ್ಕಾರ ಅನುಮತಿ ನೀಡಿದ್ದು, "50 ಮೆಟ್ರಿಕ್ ಟನ್‌ಗಳ ಮೀನುಗಳ ಮೊದಲ ರಫ್ತು ಎರಡು ದಿನಗಳ ಹಿಂದೆ ಪೆಟ್ರಾಪೋಲ್ ಗಡಿಯ ಮೂಲಕ ಬಂದಿದೆ. ಇದನ್ನು ಕೋಲ್ಕತ್ತಾ ಮತ್ತು ಜಿಲ್ಲೆಗಳ ಹಲವಾರು ಸಗಟು ಮಾರುಕಟ್ಟೆಗಳಿಗೆ ಕಳುಹಿಸಲಾಗಿದೆ. ಒಂದು ದಿನದಲ್ಲಿ ಸುಮಾರು 50 MT ನ ಮತ್ತೊಂದು ಸರಕು ಬರುವ ನಿರೀಕ್ಷೆಯಿದೆ ಎಂದು ಸಂಘದ ಕಾರ್ಯದರ್ಶಿ ಸೈಯದ್ ಅನ್ವರ್ ಮಕ್ಸೂದ್ ತಿಳಿಸಿದ್ದಾರೆ.
ಪ್ರತಿ ರಫ್ತಾಗುವ ಹಿಲ್ಸಾದ ತೂಕ 700 ಗ್ರಾಂನಿಂದ 1 ಕೆಜಿಯಷ್ಟಿದ್ದು, ಪ್ರತಿ ಕೆಜಿಗೆ 900 ರೂ.ನಿಂದ 1300-1500 ರೂ.ಗಳವರೆಗೆ ಬೆಲೆ ಇದೆ ಎಂದು ಅವರು ಹೇಳಿದರು.
ಕೋಲ್ಕತ್ತಾ ಮೂಲದ ರಾಷ್ಟ್ರೀಯ ಸಮುದ್ರ ಮೀನು ಆಮದುದಾರರು-ರಫ್ತುದಾರರ ಸಂಸ್ಥೆಯು ಬಾಂಗ್ಲಾದೇಶದಿಂದ ಸರಕುಗಳ ಆಗಮನದ ಕಟ್-ಆಫ್ ದಿನಾಂಕವಾದ ಅಕ್ಟೋಬರ್ 12 ರೊಳಗೆ ಒಟ್ಟು 2000 ಮೆಟ್ರಿಕ್ ಟನ್‌ಗಳಷ್ಟು ಹಿಲ್ಸಾವನ್ನು ಪಡೆಯುವ ಭರವಸೆಯನ್ನು ಹೊಂದಿದೆ. ಅಕ್ಟೋಬರ್ 13 ರಿಂದ ನೆರೆಯ ದೇಶದಲ್ಲಿ ಹಿಲ್ಸಾ ಮೀನುಗಾರಿಕೆಯನ್ನು ಒಂದು ಅವಧಿಗೆ ನಿಷೇಧಿಸಲಾಗಿದೆ.
ಮೊದಲ ರಫ್ತು ದಕ್ಷಿಣ ಬಂಗಾಳದ ಪತಿಪುಕುರ್, ಸೀಲ್ದಾ, ಹೌರಾ ಮತ್ತು ಉತ್ತರ ಬಂಗಾಳದ ಸಿಲಿಗುರಿಯ ಸಗಟು ಮಾರುಕಟ್ಟೆಗಳನ್ನು ತಲುಪಿದೆ ಮತ್ತು ಕಳೆದ ಎರಡು ದಿನಗಳಿಂದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗಿದೆ.
“ಮುಂಬರುವ ದಿನಗಳಲ್ಲಿ ಪ್ರತಿ ಮೀನಿನ ತೂಕವು ಹೆಚ್ಚು ಇರುತ್ತದೆ ಎಂಬುವುದು ನಮ್ಮ ನಿರೀಕ್ಷೆ. ಬೇಡಿಕೆ ಹೆಚ್ಚಿದೆ, ಆದರೆ ಗ್ರಾಹಕರು ಮೀನಿನ ಗಾತ್ರ ಮತ್ತು ರುಚಿಗೆ ತೃಪ್ತಿಯಾಗಿಲ್ಲ ಎಂದು ದಕ್ಷಿಣ ಕೋಲ್ಕತ್ತಾದ ಬೈಸ್ನಾಬ್ಘಾಟಾ ರತ್ತಲಾ ಮಾರುಕಟ್ಟೆಯಲ್ಲಿ ಮೀನು ಮಾರಾಟಗಾರ ಸುಕುಮಾರ್ ದಾಸ್ ಹೇಳಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೆಪ್ಟೆಂಬರ್ 21 ರಂದು ತನ್ನ ಹಿಂದಿನ ನಿರ್ಧಾರವನ್ನು ಪರಿಷ್ಕರಿಸಿ ಮುಂಬರುವ ದುರ್ಗಾ ಪೂಜೆಯೊಂದಿಗೆ 3,000 ಟನ್ ಹಿಲ್ಸಾವನ್ನು ಭಾರತಕ್ಕೆ ರಫ್ತು ಮಾಡುವುದಾಗಿ ಹೇಳಿತ್ತು. "ರಫ್ತುದಾರರ ಮನವಿಯ ಹಿನ್ನೆಲೆಯಲ್ಲಿ, ಮುಂಬರುವ ದುರ್ಗಾ ಪೂಜೆಯ ಸಂದರ್ಭದಲ್ಲಿ ನಿರ್ದಿಷ್ಟ ಷರತ್ತುಗಳನ್ನು ಪೂರೈಸುವ ಮೂಲಕ 3,000 ಟನ್ ಹಿಲ್ಸಾ (ಭಾರತಕ್ಕೆ) ರಫ್ತು ಮಾಡಲು ಅನುಮೋದನೆ ನೀಡಲಾಗಿದೆ ಎಂದು ಬಾಂಗ್ಲಾದೇಶ ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ವರ್ಷ ಅಕ್ಟೋಬರ್ 9 ರಿಂದ 13 ರವರೆಗೆ ದುರ್ಗಾ ಪೂಜೆಯನ್ನು ಆಚರಿಸಲಾಗುತ್ತದೆ.
2023 ರಲ್ಲಿ ಶೇಖ್ ಹಸೀನಾ ಅವರು ಪ್ರಧಾನಿಯಾಗಿದ್ದಾಗ, ಬಾಂಗ್ಲಾದೇಶವು ದುರ್ಗಾ ಪೂಜೆಯ ಸಂದರ್ಭದಲ್ಲಿ ಭಾರತಕ್ಕೆ ಒಟ್ಟು 4,000 ಟನ್ ಹಿಲ್ಸಾ ಮೀನುಗಳನ್ನು ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತು.