'ಸಾಕ್ಷಿ ನಾಶಕ್ಕೆ ಯತ್ನ': ಇವಿಎಂ ದತ್ತಾಂಶ ಅಳಿಸಲು ಮುಂದಾದ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಗುಡುಗು!
ಮತದಾರರ ಪಟ್ಟಿ ಕೇಳಿದರೆ, ಅದು ಮೆಶಿನ್ ರಿಡೇಬಲ್ ಫಾರ್ಮ್ಯಾಟ್ನಲ್ಲಿ ಇರುವುದರಿಂದ ಒದಗಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳುತ್ತದೆ. ಆದರೆ, ಸಿಸಿಟಿವಿ ದೃಶ್ಯಾವಳಿ ಕೇಳಿದರೆ, ಅದನ್ನು ಮರೆಮಾಚಲು ಕಾನೂನನ್ನೇ ಬದಲಿಸಿದೆ ಎಂದು ಆರೋಪಿಸಿದೆ.;
ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಇವಿಎಂ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್ ಡೇಟಾಗಳನ್ನು ಅಳಿಸಿ ಹಾಕುವ ಚುನಾವಣಾ ಆಯೋಗದ (EC) ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಉತ್ತರಿಸಬೇಕಾದವರು ಸಾಕ್ಷಿ ನಾಶ ಮಾಡಲು ಹೊರಟಿದ್ದಾರೆ" ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಚುನಾವಣೆ ನಡೆದ 45 ದಿನಗಳ ಬಳಿಕ ಮತದಾನ ಕೇಂದ್ರಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ, ವೆಬ್ಕಾಸ್ಟಿಂಗ್ ಮತ್ತು ಇತರ ವಿಡಿಯೊಗಳನ್ನು ಅಳಿಸಿ ಹಾಕುವಂತೆ ಚುನಾವಣಾ ಆಯೋಗವು ತನ್ನ ಎಲ್ಲ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರ ರಾಹುಲ್ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಿದೆ.
'ಮ್ಯಾಚ್ ಫಿಕ್ಸಿಂಗ್ ಸ್ಪಷ್ಟ '
ಈ ಕುರಿತು ತಮ್ಮ 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗದ ನಡೆಯನ್ನು ಸರಣಿ ಪ್ರಶ್ನೆಗಳೊಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. "ಮತದಾರರ ಪಟ್ಟಿ ಕೇಳಿದರೆ, ಅದು ಮೆಶಿನ್ ರಿಡೇಬಲ್ ಫಾರ್ಮ್ಯಾಟ್ನಲ್ಲಿ ಇರುವುದರಿಂದ ಒದಗಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳುತ್ತದೆ. ಆದರೆ, ಸಿಸಿಟಿವಿ ದೃಶ್ಯಾವಳಿ ಕೇಳಿದರೆ, ಅದನ್ನು ಮರೆಮಾಚಲು ಕಾನೂನನ್ನೇ ಬದಲಿಸಿದೆ" ಎಂದು ಆರೋಪಿಸಿದ್ದಾರೆ.
"ಇನ್ನು ಫೋಟೋ ಮತ್ತು ವಿಡಿಯೋ ಸಾಕ್ಷಿಗಳನ್ನು 1 ವರ್ಷ ಕಾಪಿಟ್ಟುಕೊಳ್ಳುವ ಬದಲು ಈಗ ಕೇವಲ 45 ದಿನಗಳಲ್ಲಿ ಅಳಿಸಿ ಹಾಕಲು ಹೊರಟಿದೆ" ಎಂದು ಹೇಳಿರುವ ರಾಹುಲ್, "ನನ್ನ ಆರೋಪಗಳಿಗೆ ಯಾರು ಉತ್ತರಿಸಬೇಕಿತ್ತೊ ಅವರೇ ಸಾಕ್ಷಿಗಳನ್ನು ನಾಶ ಮಾಡಲು ಹೊರಟಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಮ್ಯಾಚ್ ಫಿಕ್ಸಿಂಗ್ ಆಗಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಚುನಾವಣಾ ಅಕ್ರಮಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ" ಎಂದು ರಾಹುಲ್ ಗಾಂಧಿ ನೇರವಾಗಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದ ಪ್ರತಿಕ್ರಿಯೆ
ಮಹಾರಾಷ್ಟ್ರದ ಚುನಾವಣೆಯಲ್ಲಿ 'ಮ್ಯಾಚ್ ಫಿಕ್ಸಿಂಗ್' ನಡೆದಿದೆ ಎಂದು ರಾಹುಲ್ ಈ ಹಿಂದೆ ಆರೋಪಿಸಿದ್ದರು. ತಮ್ಮ ಆರೋಪಗಳಿಗೆ ಉತ್ತರ ನೀಡುವಂತೆ ಚುನಾವಣಾ ಆಯೋಗವನ್ನು ಆಗಲೂ ಕೇಳಿದ್ದರು. ಅಲ್ಲದೇ, ಮುಂಬರುವ ಬಿಹಾರ ಚುನಾವಣೆಯಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದರು.
ರಾಹುಲ್ ಗಾಂಧಿ ಅವರ ಈ ಎಲ್ಲ ಆರೋಪಗಳನ್ನು ಚುನಾವಣಾ ಆಯೋಗ ಈ ಹಿಂದೆ ಅಲ್ಲಗಳೆದಿತ್ತು. ಆದರೆ, ಈಗ ಎಲೆಕ್ಟ್ರಾನಿಕ್ ದತ್ತಾಂಶ ಅಳಿಸುವಿಕೆಯ ನಿರ್ಧಾರವು ಮತ್ತೆ ಆಯೋಗ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದವನ್ನು ತೀವ್ರಗೊಳಿಸಿದೆ. ಈ ನಿರ್ಧಾರವು ಚುನಾವಣಾ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.