ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಮುಕ್ತಗೊಳಿಸಿದ ಸರ್ಕಾರ

ಹಿಂದಿನ ಬಿಜೆಡಿ ಸರ್ಕಾರ ಕೋವಿಡ್-19ರ ಹಿನ್ನೆಲೆಯಲ್ಲಿ ಜಗನ್ನಾಥ ದೇವಸ್ಥಾನದ ಮೂರು ದ್ವಾರಗಳನ್ನು ಮುಚ್ಚಿತ್ತು. ಇದರಿಂದ ಭಕ್ತರಿಗೆ ಅನನುಕೂಲವಾಗುತ್ತಿದೆ ಎಂದು ದೂರು ಕೇಳಿಬಂದಿತ್ತು.;

Update: 2024-06-13 08:32 GMT

ಪುರಿಯ ಶ್ರೀ ಜಗನ್ನಾಥ ದೇವಾಲಯದ ಎಲ್ಲ ನಾಲ್ಕು ದ್ವಾರಗಳನ್ನು ಗುರುವಾರ ಮುಂಜಾನೆ(ಜೂನ್‌ 13) ಪುನಃ ತೆರೆಯಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಯೊಂದನ್ನು ಪೂರೈಸಿದೆ.

ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಬಿಜೆಪಿಯ ಶಾಸಕರು ಗುರುವಾರ ಬೆಳಗ್ಗೆ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ದೇವಾಲಯದ ನಾಲ್ಕು ದ್ವಾರಗಳನ್ನು ಮುಕ್ತಗೊಳಿಸಿದ ನಂತರ ಮಾತನಾಡಿದ ಮಾಝಿ,ʻಸಂಪುಟ ಸಭೆಯಲ್ಲಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ತೆರೆಯುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ. ದೇಗುಲದ ಅಭಿವೃದ್ಧಿ ಹಾಗೂ ಇತರ ಕಾಮಗಾರಿಗಳು ಹಾಗೂ ನಿರ್ವಹಣೆಗೆ 500 ಕೋಟಿ ರೂ. ಮೂಲನಿಧಿ ಸ್ಥಾಪಿಸಲಾಗುವುದು,ʼ ಎಂದು ಹೇಳಿದರು. ʻದೇವಸ್ಥಾನದ ಎಲ್ಲ ದ್ವಾರಗಳನ್ನು ತೆರೆಯುವುದು ಬಿಜೆಪಿಯ ಚುನಾವಣೆ ಪ್ರಣಾಳಿಕೆಯ ಭರವಸೆಗಳಲ್ಲಿ ಒಂದಾಗಿತ್ತು. ದ್ವಾರಗಳನ್ನು ಮುಚ್ಚಿದ್ದರಿಂದ ಭಕ್ತರು ತೊಂದರೆ ಅನುಭವಿಸುತ್ತಿದ್ದರು,ʼ ಎಂದು ಹೇಳಿದರು. 

ಹಿಂದಿನ ಬಿಜೆಡಿ ಸರ್ಕಾರ ಕೋವಿಡ್‌ ಹಿನ್ನೆಲೆಯಲ್ಲಿ ದೇವಾಲಯದ ಮೂರು ದ್ವಾರಗಳನ್ನು ಮುಚ್ಚಿತ್ತು. ಭಕ್ತರು ಒಂದು ದ್ವಾರದ ಮೂಲಕ ಪ್ರವೇಶಿಸಬಹುದಾಗಿತ್ತು. ದರ್ಶನಕ್ಕೆ ಗಂಟೆಗಟ್ಟಲೆ ಕಾಯಬೇಕಾಗಿರುವುದರಿಂದ, ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಎಲ್ಲ ದ್ವಾರಗಳನ್ನು ತೆರೆಯಬೇಕು ಎಂಬ ಆಗ್ರಹ ಕೇಳಿಬಂದಿತ್ತು. 

ಭತ್ತದ ಎಂಎಸ್‌ಪಿ ಹೆಚ್ಚಳ: ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಪ್ರತಿ ಕ್ವಿಂಟಾಲಿಗೆ 3,100 ರೂ.ಗೆ ಏರಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಈ ಸಂಬಂಧ ಕ್ರಮ ಕೈಗೊಳ್ಳಲು ಇಲಾಖೆಯನ್ನು ಕೋರಲಾಗಿದೆ. ಎಂಎಸ್‌ಪಿ ಸೇರಿದಂತೆ ರೈತರ ಸಮಸ್ಯೆಗಳನ್ನು ನಿಭಾ ಯಿಸಲು ಸಮೃದ್ಧ ಕೃಷಿಕ್ ನೀತಿ ರೂಪಿಸಲಾಗುವುದು. ಸರ್ಕಾರದ ಮೊದಲ 100 ದಿನಗಳಲ್ಲಿ ಇದನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. 

ಮಹಿಳೆಯರಿಗೆ 50,000 ರೂ. ವೋಚರ್:‌ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಿಂದಿನ ಬಿಜೆಡಿ ಆಡಳಿತ ವಿಫಲವಾಗಿದೆ. ಹೊಸ ಸರ್ಕಾರ ಸುಭದ್ರಾ ಯೋಜನೆಯನ್ನು ಜಾರಿಗೊಳಿಸಲಿದ್ದು, ಇದರಡಿ ಮಹಿಳೆಯರಿಗೆ ತಲಾ 50,000 ರೂ. ನಗದು ವೋಚರ್ ಸಿಗುತ್ತದೆ ಎಂದು ಹೇಳಿದರು.

Tags:    

Similar News