NEET-UG 2024: ಎನ್‌ಟಿಎಯಿಂದ ಅಂತಿಮ ಅಂಕಪಟ್ಟಿ ಬಿಡುಗಡೆ
ಸುಪ್ರೀಂ ಕೋರ್ಟ್ ಪರೀಕ್ಷೆಯನ್ನು ರದ್ದುಪಡಿಸಲು ಮತ್ತು ಮರುಪರೀಕ್ಷೆ ನಡೆಸಲು ನಿರಾಕರಿಸಿ ತೀರ್ಪು ನೀಡಿದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.;
ನೀಟ್-ಯುಜಿ 2024 ರ ಪರಿಷ್ಕೃತ ಮತ್ತು ಅಂತಿಮ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಗುರುವಾರ (ಜುಲೈ 25) ಪ್ರಕಟಿಸಿದೆ.
ಹಲವು ಅಭ್ಯರ್ಥಿಗಳ ಅಂಕಗಳ ಮೇಲೆ ಪರಿಣಾಮ ಬೀರಿದ ಭೌತಶಾಸ್ತ್ರದ ಪ್ರಶ್ನೆಯ ಸರಿಯಾದ ಆಯ್ಕೆಯನ್ನು ಪರಿಗಣಿಸಿದ ನಂತರ ಪರಿಷ್ಕೃತ ಫಲಿತಾಂಶಗಳನ್ನು ಘೋಷಿಸಲಾಗಿದೆ.
ಪರೀಕ್ಷೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಲು ಮತ್ತು ಮರುಪರೀಕ್ಷೆ ನಡೆಸಲು ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಜುಲೈ 23) ರದ್ದುಗೊಳಿಸಿದ ನಂತರ ಫಲಿತಾಂಶ ಪ್ರಕಟವಾಗಿದೆ.
ಭೌತಶಾಸ್ತ್ರದ ಪ್ರಶ್ನೆ: ಮು.ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಐಐಟಿ ದೆಹಲಿಯ ಮೂವರು ತಜ್ಞರ ಸಮಿತಿ ಸೂಚಿಸಿದ ಭೌತಶಾಸ್ತ್ರದ ಪ್ರಶ್ನೆಯ ಸರಿ ಉತ್ತರವನ್ನು ಪರಿಗಣಿಸಿ, ನೀಟ್-ಯುಜಿ ಪರೀಕ್ಷೆಯ ಪರಿಷ್ಕೃತ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗೆ ನಿರ್ದೇಶನ ನೀಡಿತು.
ಎನ್‌ಟಿಎ ಎರಡು ಆಯ್ಕೆಗಳನ್ನು ಸರಿಯಾದ ಉತ್ತರವೆಂದು ಪರಿಗಣಿಸಿದೆ; ಈ ಆಯ್ಕೆ ಮಾಡಿದ ಪರೀಕ್ಷಾರ್ಥಿಗಳಿಗೆ ನಾಲ್ಕು ಅಂಕ ನೀಡಿದೆ. 4 ಲಕ್ಷಕ್ಕೂ ಹೆಚ್ಚು ನೀಟ್-ಯುಜಿ ಆಕಾಂಕ್ಷಿಗಳು ಹಳೆಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ಪ್ರಕಾರ ಉತ್ತರಿಸಿದವರು ಐದು ಅಂಕ ಕಳೆದು ಕೊಳ್ಳುತ್ತಾರೆ. ಇದರಿಂದ ಅವರ ಶ್ರೇಣಿಯಲ್ಲಿ ಬದಲಾವಣೆ ಆಗುತ್ತದೆ.
ಶಿಕ್ಷಣ ಸಚಿವರಿಂದ ಸ್ವಾಗತ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಪರಿಷ್ಕೃತ ಮೆರಿಟ್ ಪಟ್ಟಿಯನ್ನು ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಮಂಗಳವಾರ ಹೇಳಿದ್ದರು.
ʻಸತ್ಯ ಮೇಲುಗೈ ಸಾಧಿಸುತ್ತದೆ. ನಾವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವಾಗತಿಸುತ್ತೇವೆ. ನಾವು ಮೊದಲಿನಿಂದಲೂ ಹೇಳುತ್ತ ಬಂದಿ ದ್ದೇವೆ; ನಮ್ಮ ಆದ್ಯತೆ ವಿದ್ಯಾರ್ಥಿಗಳು. ನೀಟ್ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಉಲ್ಲಂಘನೆಯಾಗಿಲ್ಲ ಎಂಬುದು ಸರ್ಕಾರದ ನಿಲುವು. ಸುಪ್ರೀಂ ಕೋರ್ಟ್‌ನಲ್ಲಿ ಇದು ಸರಿ ಎಂದು ಹೇಳಿದೆ,ʼ ಎಂದು ಪ್ರಧಾನ್ ಹೇಳಿದ್ದರು.
ಜೂನ್ 4 ರಂದು ಪ್ರಕಟವಾದ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು 720 ಅಂಕ ಗಳಿಸಿದ್ದರು. ಈ 67 ರಲ್ಲಿ ಆರು ಮಂದಿಗೆ ಕೃಪಾಂಕ ನೀಡಿ ದ್ದರಿಂದ, ಪೂರ್ಣ ಅಂಕ ಗಳಿಸಿದ್ದರು. ಭೌತಶಾಸ್ತ್ರದ ಪ್ರಶ್ನೆಗೆ ತಪ್ಪು ಉತ್ತರ ನೀಡಿದ 44 ಮಂದಿ ಕೃಪಾಂಕ ಪಡೆದು, ಅಗ್ರ ಸ್ಥಾನ ಗಳಿಸಿದ್ದರು.
ಫಲಿತಾಂಶಗಳನ್ನು ಎಲ್ಲಿ ಪರಿಶೀಲಿಸಬೇಕು?: https://neet.ntaonline.in/, https://exams.nta.ac.in/NEET/, https://nta.ac.in
ಪರಿಶೀಲಿಸುವುದು ಹೇಗೆ?: * ಪರಿಷ್ಕೃತ ಫಲಿತಾಂಶಗಳಿಗೆ NTA ಯ ಅಧಿಕೃತ ವೆಬ್‌ಸೈಟ್‌ನ NEET-UG ಪುಟಕ್ಕೆ ಹೋಗಿ.
* 'ಪರಿಷ್ಕೃತ ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಿದ ನಂತರ, 'NEET 2024 ಪರಿಷ್ಕೃತ ಸ್ಕೋರ್ ಕಾರ್ಡ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ!' ಆಯ್ಕೆ ಮಾಡಿಕೊಳ್ಳಿ.
* ಲಾಗ್ ಇನ್ ಮಾಡಲು ಅರ್ಜಿದಾರರ ಹೆಸರು, ಅರ್ಜಿ ಸಂಖ್ಯೆ, ಪಾಸ್‌ವರ್ಡ್ ಮತ್ತು ಭದ್ರತಾ ಪಿನ್‌ನಂತಹ ಅಗತ್ಯವಿರುವ ಮಾಹಿತಿಗಳನ್ನು ಅಳವಡಿಸಿ.