ಸಿಎಸ್‌ಐಆರ್-ಯುಜಿಸಿ-ನೆಟ್ ಪರೀಕ್ಷೆ ಮುಂದೂಡಿಕೆ
ಸಿಎಸ್‌ಐಆರ್-ಯುಜಿಸಿ-ಎನ್‌ಇಟಿ ಪರೀಕ್ಷೆಯು ಕಿರಿಯ ಸಂಶೋಧನಾ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕ ಮತ್ತು ವಿಜ್ಞಾನ ವಿಷಯಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಧರಿಸಲು ನಡೆಸುವ ಪರೀಕ್ಷೆ.;
ಹೊಸದಿಲ್ಲಿ, ಜೂ.21- ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್) ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ದ ಜಂಟಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಜೂನ್ ಆವೃತ್ತಿಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಿರುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
ಜಂಟಿ ಸಿಎಸ್‌ಐಆರ್-ಯುಜಿಸಿ-ಎನ್‌ಇಟಿ ಎನ್ನುವುದು ಕಿರಿಯ ಸಂಶೋಧನಾ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕ ಮತ್ತು ವಿಜ್ಞಾನ ವಿಷ ಯಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಧರಿಸಲು ನಡೆಸುವ ಪರೀಕ್ಷೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಯುಜಿಸಿ-ನೆಟ್ ಪರೀಕ್ಷೆ ನಡೆದ 24 ಗಂಟೆಗಳೊಳಗೆ ʻಪರೀಕ್ಷೆಯ ಸಮಗ್ರತೆಗೆ ಧಕ್ಕೆಯಾಗಿದೆʼ ಎಂದು ಹೇಳಿ ಪರೀಕ್ಷೆಯನ್ನು ರದ್ದುಗೊಳಿಸಿತು. ಅದಾದ ಎರಡು ದಿನಗಳ ನಂತರ ಜಂಟಿ ಸಿಎಸ್‌ಐಆರ್-ಯುಜಿಸಿ-ಎನ್‌ಇಟಿ ಪರೀಕ್ಷೆಯನ್ನು ಮುಂದೂಡಿದೆ.
ʻಜೂನ್ 25 ರಿಂದ 27ರ ನಡುವೆ ನಡೆಯಬೇಕಿದ್ದ ಜಂಟಿ ಸಿಎಸ್‌ಐಆರ್-ಯುಜಿಸಿ-ಎನ್‌ಇಟಿ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ,ʼ ಎಂದು ಎನ್‌ಟಿಎ ಸುತ್ತೋಲೆಯಲ್ಲಿ ತಿಳಿಸಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ʻಮತ್ತೊಂದು ಎನ್‌ಟಿಎ ಪರೀಕ್ಷೆಯನ್ನು ಮುಂದೂಡಲಾಗಿದೆ. ಎನ್‌ಟಿಎ ಯುವಜನರಿಗೆ ನರೇಂದ್ರ ಮೋದಿ ಅವರ ಅವರ ಟ್ರಾಮಾ ಏಜೆನ್ಸಿ,ʼ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.
ಸಿಎಸ್‌ಐಆರ್-ಯುಜಿಸಿ-ಎನ್‌ಇಟಿ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ, ಜೂನ್ ಮತ್ತು ಡಿಸೆಂಬರ್ ನಲ್ಲಿ ನಡೆಸಲಾಗುತ್ತದೆ. ಐಐಟಿಗಳು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್‌ಇಆರ್) ಸೇರಿದಂತೆ ಈ ವಿಭಾಗಗಳಲ್ಲಿ ಪಿಎಚ್‌ಡಿ ಕೋರ್ಸ್‌ಗಳನ್ನು ನೀಡುವ ಎಲ್ಲ ಪ್ರಮುಖ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಇದನ್ನು ಬಳಸಲಾಗುತ್ತದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಪರೀ ಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.