Hit and Run : ಸಂಚಾರ ಪೊಲೀಸರಿಗೆ ಗುದ್ದಿ 20 ಮೀಟರ್‌ ಎಳೆದೊಯ್ದ ಅಪರಿಚಿತ ವಾಹನ

ನೈರುತ್ಯ ದೆಹಲಿಯ ವೇದಾಂತ್‌ ದೇಶಿಕಾ ಮಾರ್ಗ್‌ ಬಳಿಯ ಟ್ರಾಫಿಕ್‌ ಸಿಗ್ನಲ್‌ ಬಳಿ ಶನಿವಾರ ರಾತ್ರಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರಿಗೆ ಈ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

Update: 2024-11-03 13:24 GMT
ಅಪರಾಧ ಸುದ್ದಿ (ಸಾಂದರ್ಭಿಕ ಸುದ್ದಿ)

ಅಪರಿಚಿತ ವಾಹನವೊಂದು ಸಂಚಾರ ಪೊಲೀಸರಿಗೆ ಡಿಕ್ಕಿ ಹೊಡೆದು ಸುಮಾರು 20 ಮೀಟರ್‌ ಎಳೆದೊಯ್ದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಭೀಕರ ಘಟನೆಯಲ್ಲಿ ಇಬ್ಬರು  ಪೊಲೀಸರಿಗೆ ಗಾಯಗಳಾಗಿವೆ. ನೈರುತ್ಯ ದೆಹಲಿಯ ವೇದಾಂತ್‌ ದೇಶಿಕಾ ಮಾರ್ಗ್‌ ಬಳಿಯ ಟ್ರಾಫಿಕ್‌ ಸಿಗ್ನಲ್‌ ಬಳಿ ಶನಿವಾರ ರಾತ್ರಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರ ಪೊಲೀಸರಿಗೆ  ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

ಬಳಿಕ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಕಿಶನ್ ಗಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ತಂಡ ರವಾನೆ

ಹಿಟ್‌  ಆಂಡ್‌ ರನ್‌ ಘಟನೆ ಬೆನ್ನಲ್ಲೇ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಗಾಯಾಳು ಸಿಬ್ಬಂದಿಯನ್ನು ಪಿಸಿಆರ್ ವಾಹನದ ಮೂಲಕ ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರುವ ಎಎಸ್‌ಐ ಪ್ರಮೋದ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸೈಲೇಶ್ ಚೌಹಾಣ್ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುತ್ತಿದ್ದರು. ರಾತ್ರಿ 7.45ರ ಸುಮಾರಿಗೆ ಅಪರಿಚಿತ ವಾಹನ ಸಿಗ್ನಲ್‌ ದೀಪ ಜಂಪ್‌ ಮಾಡಿತು. ಈ ವೇಳೆ ವಾಹನ ನಿಲ್ಲಿಸುವಂತೆ ಸೈಲೇಶ್ ಸೂಚಿಸಿದರೂ ಚಾಲಕ ವಾಹನ ನಿಲ್ಲಿಸಲಿಲ್ಲ, ಕಾರನ್ನು ತಡೆಯಲು ಮುಂದಾದ ಪೊಲೀಸರನ್ನುಸುಮಾರು 20 ಮೀಟರ್ ಎಳೆದುಕೊಂಡು ಹೋಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ತಂಡವು ಪರಿಶೀಲನೆ ನಡೆಸಿತು. ಪೊಲೀಸರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡುವ ಉದ್ದೇಶವಿತ್ತು. ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಿಶನ್‌ ಗಢ ಪೊಲೀಸರು ತಿಳಿಸಿದ್ದಾರೆ.

ವಾಹನದ ಮಾಲೀಕರನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News