ನ್ಯಾ. ಶ್ರೀಶಾನಂದ ಪ್ರಕರಣ | ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಬಾರದು: ಸುಪ್ರೀಂ ತಾಕೀತು

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಕಲಾಪದ ವೇಳೆ ಮಾಡಿದ ಆಕ್ಷೇಪಾರ್ಹ ಹೇಳಿಕೆ ಕುರಿತ ಸ್ವಯಂಪ್ರೇರಿತ ವಿಚಾರಣೆಯನ್ನು ಸುಪ್ರೀಂ ಮುಕ್ತಾಯಗೊಳಿಸಿದೆ. ʻನ್ಯಾಯಾಂಗಕ್ಕೆ ಮಾರ್ಗದರ್ಶನ ನೀಡುವ ಮೌಲ್ಯಗಳು ಸಂವಿಧಾನದಲ್ಲಿವೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವುದು ಅಗತ್ಯʼ ಎಂದು ಪೀಠ ಹೇಳಿದೆ.

Update: 2024-09-25 10:20 GMT

ಹೊಸದಿಲ್ಲಿ: ʻಸ್ತ್ರೀದ್ವೇಷʼ ಅಥವಾ ʻನಿರ್ದಿಷ್ಟ ಲಿಂಗ ಅಥವಾ ಸಮುದಾಯʼ ವನ್ನು ಉದ್ಧೇಶಿಸಿದ ವ್ಯಾಖ್ಯಾನ ಮಾಡುವುದರ ವಿರುದ್ಧ ಎಚ್ಚರಿಸಿರುವ ಸುಪ್ರೀಂಕೋರ್ಟ್, ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಬಾರದು ಎಂದು ಬುಧವಾರ ನ್ಯಾಯಾಲಯಗಳಿಗೆ ಎಚ್ಚರಿಕೆ ನೀಡಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಕಲಾಪದ ವೇಳೆ ಮಾಡಿದ ಆಕ್ಷೇಪಾರ್ಹ ಹೇಳಿಕೆ ಕುರಿತ ಸ್ವಯಂಪ್ರೇರಿತ ವಿಚಾರಣೆಯನ್ನು ಸುಪ್ರೀಂ ಮುಕ್ತಾಯಗೊಳಿಸಿದೆ. ಸೆಪ್ಟೆಂಬರ್ 21 ರಂದು ತೆರೆದ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕ್ಷಮೆಯಾಚಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. 

ಮು.ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ನ್ಯಾ.ಶ್ರೀಶಾನಂದ ಅವರು ವಿಚಾರಣೆಯ ಭಾಗವಲ್ಲದ ಕಾರಣ, ʻಲಿಂಗ ಮತ್ತು ಒಂದು ಸಮುದಾಯ ಕುರಿತ ಹೇಳಿಕೆ ಬಗ್ಗೆ ನಮ್ಮ ಗಂಭೀರ ಕಾಳಜಿ ವ್ಯಕ್ತಪಡಿಸುವುದನ್ನು ಹೊರತುಪಡಿಸಿ, ಹೆಚ್ಚು ಅವಲೋಕನ ಮಾಡುವುದಿಲ್ಲ,ʼ ಎಂದು ಹೇಳಿತು. 

ನ್ಯಾಯಾಲಯದ ವಿಚಾರಣೆ ವೇಳೆ ವಕೀಲೆ ವಿರುದ್ಧದ ಹೇಳಿಕೆ ಹಾಗೂ ಬೆಂಗಳೂರಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನು ʻಪಾಕಿಸ್ತಾನʼ ಎಂದು ಕರೆದಿದ್ದನ್ನು ಸುಪ್ರೀಂ ಸೆಪ್ಟೆಂಬರ್ 20 ರಂದು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿತ್ತು. 

ʻನಿರ್ದಿಷ್ಟ ಲಿಂಗ ಅಥವಾ ಸಮುದಾಯಕ್ಕೆ ಸಂಬಂಧಿಸಿದ ಸಾಂದರ್ಭಿಕ ಅವಲೋಕನಗಳು ವೈಯಕ್ತಿಕ ಪಕ್ಷಪಾತವನ್ನು ಪ್ರತಿಬಿಂಬಿಸಬಹುದು,ʼ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯ ಕಾಂತ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠ ಹೇಳಿದೆ. 

ʻಆದ್ದರಿಂದ ನ್ಯಾಯಾಲಯಗಳು ಸ್ತ್ರೀದ್ವೇಷ ಅಥವಾ ಯಾವುದೇ ಸಮುದಾಯ ಕುರಿತ ಪೂರ್ವಗ್ರಹ ಪೀಡಿತ ಎನ್ನಬಹುದಾದ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು,ʼ ಎಂದು ಹೇಳಿದೆ.

ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ವರದಿಯನ್ನು ಉಲ್ಲೇಖಿಸಿದ ಪೀಠ, ವಿಚಾರಣೆ ಸಂದರ್ಭದಲ್ಲಿ ಮಾಡಿದ ಹೇಳಿಕೆಗಳು ಪ್ರಕರಣಕ್ಕೆ ಸಂಬಂಧಿಸಿರಲಿಲ್ಲ ಮತ್ತು ಅವುಗಳನ್ನು ಹೇಳದಿದ್ದರೆ ಉತ್ತಮವಿತ್ತು. ಸಮಾಜದ ಎಲ್ಲರಿಗೂ ನ್ಯಾಯದ ಗ್ರಹಿಕೆಯು ಒಂದು ವಸ್ತುನಿಷ್ಠ ಸತ್ಯವಾಗಿ ನ್ಯಾಯದ ನಿರೂಪಣೆಯಷ್ಟೇ ಮುಖ್ಯವಾಗಿರಲಿದೆ,ʼ ಎಂದು ಹೇಳಿದೆ.

ʻಅಂತಹ ಅವಲೋಕನಗಳನ್ನು ನಕಾರಾತ್ಮಕವಾಗಿ ಅರ್ಥೈಸಬಹುದು. ಇದರಿಂದ ಅವುಗಳನ್ನು ವ್ಯಕ್ತಪಡಿಸಿದ ನ್ಯಾಯಾಧೀಶರಲ್ಲದೆ ನ್ಯಾಯಾಂಗ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ,ʼ ಎಂದು ಹೇಳಿದೆ.

ಪೀಠ ಆದೇಶ ನೀಡಿದ ನಂತರ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಎಕ್ಸ್‌ನಲ್ಲಿನಲ್ಲಿರುವ ಕೆಲವು ಸಂದೇಶಗಳನ್ನು ಉಲ್ಲೇಖಿಸಿ, ಅವು ಸಂಪೂರ್ಣ ವಿಷಪೂರಿತವಾಗಿದ್ದವು ಎಂದು ಹೇಳಿದರು.

ಪಾಕಿಸ್ತಾನ ಎನ್ನಬಾರದು

ʻದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಬಾರದು. ಏಕೆಂದರೆ, ಅದು ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ,ʼ ಎಂದು ಸಿಜೆಐ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಸಾಧ್ಯವಿಲ್ಲ.ಅದರ ಅನಾಮಧೇಯತೆ ʻಅತ್ಯಂತ ಅಪಾಯಕಾರಿʼ ಎಂದು ಹೇಳಿದರು. 

ʻಸೂರ್ಯನ ಬೆಳಕಿಗೆ ಉತ್ತರ ಇನ್ನಷ್ಟು ಸೂರ್ಯನ ಬೆಳಕು ಎಂಬುದನ್ನು ನಾನು ನಿಮಗೆ ಹೇಳಬೇಕೇ? ನ್ಯಾಯಾಲಯಗಳಲ್ಲಿ ಆಗುತ್ತಿರುವುದನ್ನು ನಿಗ್ರಹಿಸಬಾರದು. ಎಲ್ಲವನ್ನೂ ಮುಚ್ಚುವುದು ಉತ್ತರವಲ್ಲʼ ಎಂದು ಸಿಜೆ ಹೇಳಿದರು. 

ʻಸಾಮಾಜಿಕ ಮಾಧ್ಯಮಗಳು ನ್ಯಾಯಾಲಯದ ಪ್ರಕ್ರಿಯೆಗಳ ವ್ಯಾಪಕ ವರದಿ ಮಾಡಿವೆ ಮತ್ತು ದೇಶದ ಹೆಚ್ಚಿನ ಹೈಕೋರ್ಟ್‌ಗಳು ಈಗ ಲೈವ್ ಸ್ಟ್ರೀಮಿಂಗ್ ಅಥವಾ ವಿಡಿಯೋ ಕಾನ್ಫರೆನ್ಸಿಂಗ್ ಕುರಿತು ನಿಯಮಗಳನ್ನು ಅಳವಡಿಸಿಕೊಂಡಿವೆ. ಕೋವಿಡ್-19, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಪ್ರಕ್ರಿಯೆಯು ನ್ಯಾಯಾಲಯಗಳ ಪ್ರಮುಖ ಸಂವಹನ ಸೌಲಭ್ಯವಾಗಿ ಹೊರಹೊಮ್ಮಿದೆ,ʼ ಎಂದು ಹೇಳಿದೆ. 

ʻನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಎಲ್ಲ ಮಧ್ಯಸ್ಥಗಾರರು ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯು ಅಲ್ಲಿ ಉಪಸ್ಥಿತರಿರುವವರಿಗೆ ಮಾತ್ರವಲ್ಲ; ಪ್ರೇಕ್ಷಕರಿಗೂ ವಿಸ್ತರಿಸುತ್ತದೆ ಎಂದು ಪ್ರಜ್ಞೆ ಹೊಂದಿರಬೇಕು. ಇದು ನ್ಯಾಯಾಧೀಶರು, ವಕೀಲರು ಮತ್ತು ಸಮುದಾಯದ ಮೇಲೆ ಹೆಚ್ಚುವರಿ ಜವಾಬ್ದಾರಿ ಹೊರಿಸುತ್ತದೆ,ʼ ಎಂದು ಪೀಠ ಹೇಳಿದೆ.

ʻನ್ಯಾಯಾಧೀಶರಿಗೆ ತಮ್ಮ ಪೂರ್ವಾಪರದ ಅರಿವು ಇರಬೇಕು. ತೀರ್ಪಿನ ಹೃದಯ ಮತ್ತು ಆತ್ಮವು ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿರಬೇಕು. ಪ್ರತಿಯೊಬ್ಬ ನ್ಯಾಯಾಧೀಶರಿಗೂ ತಮ್ಮ ಪ್ರವೃತ್ತಿ ಬಗ್ಗೆಅರಿವು ಇರಬೇಕು; ಏಕೆಂದರೆ, ಅಂತಹ ಅರಿವಿನಿಂದ ಮಾತ್ರ ನಾವು ನಂಬಿಕಸ್ತರಾಗಬಹುದು. ವಸ್ತುನಿಷ್ಠ ಮತ್ತು ನ್ಯಾಯೋಚಿತತೆ ನ್ಯಾಯಾಧೀಶರ ಮೂಲಭೂತ ಬಾಧ್ಯತೆ,ʼ ಎಂದು ಪೀಠ ಹೇಳಿದೆ.

ʻನ್ಯಾಯಾಂಗಕ್ಕೆ ಮಾರ್ಗದರ್ಶನ ನೀಡುವ ಮೌಲ್ಯಗಳು ಸಂವಿಧಾನದಲ್ಲಿವೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವುದು ಅಗತ್ಯವಾದ್ದರಿಂದ, ಈ ಅಂಶಕ್ಕೆ ಒತ್ತು ನೀಡಲಾಗುತ್ತಿದೆʼ ಎಂದು ಪೀಠ ಹೇಳಿದೆ.

ಎರಡು ಹೇಳಿಕೆಗಳಿಗೆ ಆಕ್ಷೇಪ

ಕರ್ನಾಟಕ ನ್ಯಾಯಾಧೀಶರು ಜೂನ್ 6 ಮತ್ತು ಆಗಸ್ಟ್ 28 ರಂದು ಈ ಹೇಳಿಕೆ ನೀಡಿದ್ದರು. ಸೆಪ್ಟೆಂಬರ್ 20 ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತು. ನ್ಯಾ. ಶ್ರೀಶಾನಂದ ಅವರು ಸೆಪ್ಟೆಂಬರ್ 21 ರಂದು ವಕೀಲರ ಸಮ್ಮುಖದಲ್ಲಿ ತೆರೆದ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು. ಸಮಾಜದ ಯಾವುದೇ ವರ್ಗ ಅಥವಾ ವ್ಯಕ್ತಿಗೆ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.

Tags:    

Similar News