ಹರಿಯಾಣದಲ್ಲಿ ಎಎಪಿ ಜೊತೆ ಮೈತ್ರಿ ಇಲ್ಲ: ಕಾಂಗ್ರೆಸ್
ಹರಿಯಾಣದಲ್ಲಿ ಜನನಾಯಕ್ ಜನತಾ ಪಕ್ಷ (ಜೆಜೆಪಿ) ನೆಲೆ ಕಳೆದುಕೊಂಡಿದೆ. ಬಿಜೆಪಿ ಜನರಿಂದ ದೂರವಾಗಿದೆ. ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಅವಕಾಶವಿಲ್ಲ ಎಂದು ಸೆಲ್ಜಾ ಹೇಳಿದರು.;
ಹರ್ಯಾಣದಲ್ಲಿ ತಮ್ಮ ಪಕ್ಷ ಪ್ರಬಲವಾಗಿದೆ ಮತ್ತು ಸ್ವಂತವಾಗಿ ಬಹುಮತ ಗಳಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಹೇಳಿದ್ದಾರೆ. ಹೀಗಾಗಿ, ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಮೈತ್ರಿ ಇರುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಎಎಪಿ ಈಗಾಗಲೇ ಘೋಷಿಸಿದೆ.
90 ಸದಸ್ಯರ ಸದನದಲ್ಲಿ ಅನಿಶ್ಚಿತ ವಿಧಾನಸಭೆಯ ಸಾಧ್ಯತೆಯನ್ನು ತಳ್ಳಿಹಾಕಿದ ಅವರು,ʼ ರಾಜ್ಯದಲ್ಲಿ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಸಾಕಷ್ಟು ಬಲ ಕಳೆದುಕೊಂಡಿದೆ ಮತ್ತು ಒಡೆಯುತ್ತಿದೆ. ಮುಂಬರುವ ಚುನಾವಣೆ ಕದನದಲ್ಲಿ ಅದಕ್ಕೆ ಅವಕಾಶವಿಲ್ಲ,ʼ ಎಂದು ಹೇಳಿದರು.
ಜೆಜೆಪಿ ಬೆಂಬಲ ಸವೆಯುತ್ತಿದೆ: ʻಜೆಜೆಪಿ ನೆಲೆ ಕಳೆದುಕೊಂಡಿದೆ. ಈ ಬಾರಿ ಜೆಜೆಪಿ ಬೆಂಬಲಿಸುವವರು ಕಡಿಮೆ. ಕಳೆದ ಬಾರಿಯೂ ಗೆದ್ದ ವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಅಭ್ಯರ್ಥಿಗಳು. ಜೆಜೆಪಿಯ ಬಹುತೇಕ ಶಾಸಕರು ಈಗಾಗಲೇ ಅವರನ್ನು ತೊರೆದಿದ್ದಾರೆ. ಐಎನ್‌ಎಲ್‌ಡಿ-ಬಿಎಸ್‌ಪಿ ರಾಜ್ಯದಲ್ಲಿ ಸಾಕಷ್ಟು ನೆಲೆ ಕಳೆದುಕೊಂಡಿವೆ,ʼ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹರಿಯಾಣ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹೇಳಿದರು.
ಎಎಪಿ ಜೊತೆ ಮೈತ್ರಿ ಇಲ್ಲ: ʻನಾವು ರಾಷ್ಟ್ರೀಯ ಮಟ್ಟದಲ್ಲಿ ಪಾಲುದಾರರು. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಅದನ್ನು ಪಾಲುದಾರರು ಮೇಲೆ ನಿರ್ಧರಿಸುತ್ತಾರೆ. ಕಾಂಗ್ರೆಸ್ ಸಾಕಷ್ಟು ಬಲವಾಗಿದೆ ಮತ್ತು ನಾವು ನಮ್ಮದೇ ಬಲದಿಂದ ಹೋರಾಡುತ್ತೇವೆ,ʼ ಎಂದು ಹೇಳಿದರು.
ಜನ ಬಿಜೆಪಿ ವಿರುದ್ಧ: ʻಹರಿಯಾಣದ ಜನರು ಆಡಳಿತಾರೂಢ ಬಿಜೆಪಿ ವಿರುದ್ಧ ಇದ್ದಾರೆ. ನಾವು 90 ಸ್ಥಾನಗಳಲ್ಲಿ ಹೋರಾಡುತ್ತಿದ್ದೇವೆ ಮತ್ತು ನಮಗೆ ಪ್ರತಿಯೊಂದು ಸ್ಥಾನವೂ ಮುಖ್ಯ,ʼ ಎಂದು ಕಾಂಗ್ರೆಸ್‌ಗೆ ಎಷ್ಟು ಸ್ಥಾನಗಳು ಸಿಗುತ್ತವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ʻಬಿಜೆಪಿ ಹೆಚ್ಚು ಬೆಂಬಲ ಹೊಂದಿಲ್ಲ.ಅವರ ಮುಖ್ಯಮಂತ್ರಿಗೆ ರಾಜಕೀಯ ಅನುಭವವಿದೆ ಎಂದು ನಾನು ಭಾವಿಸುವುದಿಲ್ಲ. ಅದು ಕೂಡ ಅವರ ವಿರುದ್ಧ ಆಗಲಿದೆ. ಬಿಜೆಪಿಯಲ್ಲಿ ಸಾಕಷ್ಟು ಒತ್ತಡಗಳಿವೆ. ಅವರು ಸಂಪರ್ಕ ಕಡಿದುಕೊಂಡಿದ್ದು, ಅದರ ಬೆಲೆ ತೆರಲಿದ್ದಾರೆ,ʼ ಎಂದು ಹೇಳಿದರು.
ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾನೂನು ಖಾತರಿ, ಅಗ್ನಿಪಥ್ ಮಿಲಿಟರಿ ನೇಮಕ ಯೋಜನೆಯನ್ನು ಹಿಂಪಡೆಯುವುದು ಪ್ರಮುಖ ಬೇಡಿಕೆಗಳಾಗಿವೆ. ನಿರುದ್ಯೋಗ ಮತ್ತು ಭ್ರಷ್ಟಾಚಾರ ಹರಿಯಾಣದ ದೊಡ್ಡ ಸಮಸ್ಯೆಗಳಲ್ಲಿ ಒಂದು ಎಂದು ಹೇಳಿದರು.
ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 1 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.