ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಗಲ್ಲಿಗೆ ಬ್ರೇಕ್ ಹಾಕಿದ ಕಾಂತಾಪುರದ ‘ಮುತ್ಸದ್ದಿ ಮುಫ್ತಿ’ ಮುಸ್ಲಿಯಾರ್ ಯಾರು?

ನಿಮಿಷಾ ಪ್ರಿಯಾ ಮರಣ ದಂಡನೆಯನ್ನು ಮುಂದೂಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಭಾರತ ‘ಮುತ್ಸದ್ದಿ ಮುಫ್ತಿ’ ಶೇಖ್ ಅಬೂಬಕರ್ ಅಹ್ಮದ್, ಧಾರ್ಮಿಕ ರಾಜತಾಂತ್ರಿಕತೆಯ ಮೂಲಕವೂ ಮಾತುಕತೆ ನಡೆಸಬಹುದು ಎಂಬ ಹೊಸ ಕಿಂಡಿಯನ್ನು ತೆರೆದು ತೋರಿಸಿದ್ದಾರೆ;

Update: 2025-07-17 05:02 GMT
ಶೇಖ್ ಅಬೂಬಕರ್ ಅಹ್ಮದ್ ಅವರ ಪ್ರಭಾವ ಕೇರಳದ ಗಡಿಯನ್ನು ಮೀರಿದ್ದು, ಅದರಲ್ಲೂ ವಿಶೇಷವಾಗಿ ಶಾಫಿ ಇಸ್ಲಾಮಿಕ್ ನ್ಯಾಯಶಾಸ್ತ್ರ ಪದ್ಧತಿಯನ್ನು ಅನುಸರಿಸುವ ದಕ್ಷಿಣ ಏಷ್ಯಾದ ಸುನ್ನಿಗಳಲ್ಲಿ ಪ್ರಭಾವಿ ಧರ್ಮಗುರು.

ಯೆಮೆನ್‌ನಲ್ಲಿ ಇನ್ನೇನು ಗಲ್ಲಿನ ಕುಣಿಕೆಗೆ ಕತ್ತು ಕೊಡಬೇಕು ಎನ್ನುವ ಕ್ಷಣದಲ್ಲಿ ಭಾರತದ ನರ್ಸ್ ನಿಮಿಷಾ ಪ್ರಿಯಾಳ ಮರಣ ದಂಡನೆ ಶಿಕ್ಷೆ ಏಕಾಏಕಿ ಮುಂದಕ್ಕೆ ಹೋಗಿದೆ. ಇದರ ಹಿಂದೆ ಸದ್ದಿಲ್ಲದೇ ಕೆಲಸ ಮಾಡಿದವರು ಕೇರಳದ ಸಂಪ್ರದಾಯವಾದಿ ಸುನ್ನಿ ಧರ್ಮಗುರು ಎಂಬುದು ಅನೇಕರಿಗೆ ಗೊತ್ತಿಲ್ಲ.

ಹೌದು, ಈ ಪ್ರಕರಣದಲ್ಲಿ ಎಲ್ಲ ರಾಜತಾಂತ್ರಿಕ ಮಾರ್ಗಗಳು ವಿಫಲವಾದಾಗ ಆಪತ್ಬಾಂಧವರಂತೆ ಬಂದವರು ಈ ಸುನ್ನಿ ಧರ್ಮಗುರು. ಇವರು ಕೇರಳದ ಕಾಂತಾಪುರಂನ ಎ.ಪಿ.ಅಬೂಬಕರ್ ಮುಸ್ಲಿಯಾರ್. ಇವರು ಶೇಖ್ ಅಬುಬಕರ್ ಅಹ್ಮದ್ ಎಂದೇ ಚಿರಪರಿಚಿತರು. ಇವರು ಭಾರತದ ‘ಮುತ್ಸದ್ದಿ ಮುಫ್ತಿ’ ಅಥವಾ ಇವರನ್ನು ಸರಳವಾಗಿ ಎ.ಪಿ,ಉಸ್ತಾದ್ ಅಂತಲೂ ಕರೆಯುತ್ತಾರೆ.

ಯೆಮೆನ್ ನಂತಹ ರಾಷ್ಟ್ರದಲ್ಲಿ ರಾಜತಾಂತ್ರಿಕವಾಗಿ ಮಧ್ಯಪ್ರವೇಶ ಮಾಡುವುದು ಸುಲಭದ ಕೆಲಸವಲ್ಲ. ಅಲ್ಲಿನ ವಿಕ್ಷಿಪ್ತ ಪರಿಸ್ಥಿತಿಯಿಂದಾಗಿ ಎಲ್ಲ ಮಾರ್ಗಗಳೂ ಮುಚ್ಚಿಹೋದಾಗ ‘ಧಾರ್ಮಿಕ ರಾಜತಾಂತ್ರಿಕತೆ’ ಕೆಲಸ ಮಾಡಿದೆ. ಮಾತುಕತೆಗೆ ಹೊಸ ಬಾಗಿಲನ್ನು ತೆರೆದು ಈ ಮುತ್ಸದ್ದಿ ಮುಫ್ತಿ ನಿಜಾರ್ಥದಲ್ಲಿ ‘ಉಸ್ತಾದ್’ ಆಗಿ ಕೆಲಸ ಮಾಡಿದ್ದಾರೆ.

ಧಾರ್ಮಿಕ ಸಂಪ್ರದಾಯವಾದವು ರಾಜಕೀಯದ ಕಾಠಿಣ್ಯದ ಜೊತೆ ಸೇರಿಕೊಂಡು ಇನ್ನಷ್ಟು ಗೋಜಲಾಗುವ ಜಗತ್ತಿನಲ್ಲಿ ಕಾಂತಾಪುರಂನ ಈ ‘ಹಿರಿಯ ಜೀವ’ದ ಬದುಕು ವಿರೋಧಾಭಾಸದಿಂದ ಕೂಡಿದೆ. ಒಂದು ಕಾಲದಲ್ಲಿ ಮತಧರ್ಮಶಾಸ್ತ್ರದ ಕಟ್ಟಾ ಅನುಯಾಯಿಯಾಗಿದ್ದ ಮತ್ತು ಪರಾನುಭೂತಿಯ ಸಾಮಾಜಿಕ ನೇತಾರರಾಗಿ ಗುರುತಿಸಿಕೊಂಡಿದ್ದ ಮುಫ್ತಿಯಾರ್ ಅವರಿಗೆ ಧರ್ಮ, ರಾಜಕೀಯ ಮತ್ತು ಸಾರ್ವಜನಿಕ ಜೀವನವು ಒಂದಕ್ಕೊಂದು ತಳಕು ಹಾಕಿಕೊಂಡಿರುವ, ಅಷ್ಟೇನು ಸುಲಭವಲ್ಲದ ಕೇರಳದಲ್ಲಿ ವಿಶಿಷ್ಟವಾದ ಸ್ಥಾನವಿದೆ.

ಕಾಂತಾಪುರಂ ಅವರ ಪ್ರಭಾವಳಿ ಎಷ್ಟಿದೆ ಎಂಬುದನ್ನು 1978ರಲ್ಲಿ ಕೋಳಿಕ್ಕೋಡ್ ನಲ್ಲಿ ಅವರು ಸ್ಥಾಪಿಸಿದ ಅತ್ಯಂತ ವಿಸ್ತಾರವಾದ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಸಂಕೀರ್ಣವಾಗಿರುವ ಜಾಮಿಯಾ ಮರ್ಕಝ್ (ಮರ್ಕಝುಲ್ ಸಖಾಫಥಿ ಸುನ್ನಿಯಾ)ನ್ನು ಒಮ್ಮೆ ನೋಡಬೇಕು. ಒಂದು ಸರ್ವೇ ಸಾಧಾರಣವಾದ ಧಾರ್ಮಿಕ ಸೆಮಿನರಿಯಾಗಿ ಆರಂಭವಾದ ಈ ಮರ್ಕಝ್ ಈಗ ಪ್ರಮುಖ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಸ್ಲಾಮಿಕ್ ಧರ್ಮಶಾಸ್ತ್ರ, ಅರೇಬಿಕ್, ಆಧುನಿಕ ವಿಜ್ಞಾನ ಮತ್ತು ವೃತ್ತಿಪರ ತರಬೇತಿಯನ್ನು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ನೀಡುತ್ತಿದೆ.

ಇದು ಕೇವಲ ಒಂದು ಸಾಮಾನ್ಯ ಸಂಸ್ಥೆ ಎಂದು ಹೇಳಿದರೆ ಸುಳ್ಳಾದೀತು. ಇದು ಕಾಂತಾಪುರಂ ಅವರ ಸೈದ್ಧಾಂತಿಕ ನಾಯಕತ್ವದಲ್ಲಿ ರೂಪುಗೊಂಡ ಸಂಪ್ರದಾಯವಾದಿ ಸುನ್ನಿ ಚಿಂತನೆಯ ಪರಿಸರ ವ್ಯವಸ್ಥೆ.

2016ರಲ್ಲಿ ಅಖಿಲ ಭಾರತ ತಂಜಿಮ್ ಉಲಮಾ-ಎ-ಇಸ್ಲಾಂ (All India Tanzeem Ulama-e-Islam) ಸಂಸ್ಥೆಯು ಇವರಿಗೆ ‘ಮುತ್ಸದ್ದಿ ಮುಫ್ತಿ’ (Grand Mufti) ಎಂದು ಅಧಿಕೃತವಾಗಿ ಮುದ್ರೆಯೊತ್ತಿದೆ. ಅಷ್ಟರಲ್ಲಾಗಲೇ ಅವರು ಅನಧಿಕೃತವಾಗಿ ಆ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇವರು ಕೇರಳದ ಗಡಿಯನ್ನು ಮೀರಿ ವಿಶೇಷವಾಗಿ ಶಾಫಿ ಇಸ್ಲಾಮಿಕ್ ನ್ಯಾಯಶಾಸ್ತ್ರ ಪದ್ಧತಿಯಯನ್ನು ಅನುಸರಿಸುವ ದಕ್ಷಿಣ ಏಷ್ಯಾದ ಸುನ್ನಿಗಳಲ್ಲಿ ಭಾರೀ ಪ್ರಭಾವಿ ಎನಿಸಿಕೊಂಡಿರುವ ಧರ್ಮಗುರು.

ಧಾರ್ಮಿಕ ಮತ್ತು ಬೌದ್ಧಿಕ ವೈವಿಧ್ಯತೆಯಿಂದ ಇಸ್ಲಾಂನ್ನು ಗುರುತಿಸಲಾಗುವ ಕೇರಳದಲ್ಲಿ, ಕಾಂತಾಪುರಂ ಅವರು ಸಾಂಪ್ರದಾಯಿಕ ಸುನ್ನಿಗಳ ಅತಿದೊಡ್ಡ ಬಣಗಳಲ್ಲಿ ಒಂದನ್ನು ಮುನ್ನಡೆಸುತ್ತಾರೆ. ಇವರನ್ನು ಸಾಮಾನ್ಯವಾಗಿ ಮತ್ತು ಕೆಲವೊಮ್ಮೆ ವ್ಯಂಗ್ಯವಾಗಿ ಅರಿವಾಳ್ ಸುನ್ನಿಗಳು (ಅಕ್ಷರಶಃ ಕುಡುಗೋಲು ಸುನ್ನಿಗಳು) ಎಂದು ಕರೆಯಲಾಗುತ್ತದೆ. ಇವರು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್)ದೊಂದಿಗೆ ಹೊಂದಿರುವ ಅಸಾಮಾನ್ಯ ರಾಜಕೀಯ ನಿಕಟತೆಯ ಫಲವಾಗಿ ಈ ಹೆಸರು ಬಂದಿದೆ.

ಇದು ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ಜೊತೆ ಗುರುತಿಸಿಕೊಂಡು ಎಡಪಂಥೀಯರನ್ನು ವಿರೋಧಿಸುವ ಇನ್ನೊಂದು ಸುನ್ನಿ ಗುಂಪಿಗೆ ತದ್ವಿರುದ್ಧವಾಗಿದೆ.

ಕಾಂತಾಪುರಂ ರಾಜಕೀಯ ಇಸ್ಲಾಮೀಕರಣ ಮತ್ತು ವಹಾಬಿ/ಸಲಾಫಿ ಸಿದ್ಧಾಂತ ಎರಡನ್ನೂ ವಿರೋಧಿಸಿದರೂ ಕೂಡ ಅವರದೇನು ಆಧುನಿಕ ಸುಧಾರಣೆ ಯೋಜನೆಯಲ್ಲ. ಅವರು ಯಾವತ್ತೂ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿರುವುದು ಪಿತೃಪ್ರಧಾನ ಮತ್ತು ಶ್ರೇಣೀಕೃತ ಸಂಪ್ರದಾಯಗಳನ್ನು. ಲಿಂಗ ಸಮಾನತೆಯನ್ನು ವಿರೋಧಿಸಿದ್ದಾರೆ ಮತ್ತು ಮತಧರ್ಮಶಾಸ್ತ್ರದ ವಿಷಯಗಳಲ್ಲಿ ಕಠಿಣ ನಿಲುವು ಹೊಂದಿದ್ದಾರೆ.

ಹಾಗಿದ್ದೂ ಚಳವಳಿಯ ವಿಷಯ ಬಂದಾಗ ಕೇರಳದಲ್ಲಿ ಎಡಪಂಥೀಯರೊಂದಿಗೆ ಗುರುತಿಸಿಕೊಂಡಿರುವುದು ಅವರ ತಂತ್ರಗಾರಿಕೆಯ ಹೆಜ್ಜೆ. ಈ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ರಾಜಕೀಯದಿಂದ ರಕ್ಷಣೆಯನ್ನು ಪಡೆಯಲು ಎಲ್.ಡಿ.ಎಫ್ ಮತ್ತು ಯು.ಡಿ.ಎಫ್.ನ ಜಾತ್ಯತೀತ ಸಂವಿಧಾನವನ್ನು ಅನುಸರಿಸಿದ್ದಾರೆ.

ಇಷ್ಟೆಲ್ಲ ಹಿನ್ನೆಲೆಯನ್ನು ಹೊಂದಿರುವ ‘ಮುತ್ಸದ್ದಿ ಮುಫ್ತಿ’ ಬಿಡಿಸಲಾಗದ ಕಗ್ಗಂಟಾಗಿ ಹೋಗಿರುವ ನಿಮಿಷಾ ಪ್ರಿಯ ಪ್ರಕರಣದಲ್ಲಿ ತೆರೆಮರೆಯಲ್ಲಿದ್ದು ಹೇಗೆ ಕೆಲಸ ಮಾಡಿದರು?

ಕಾಂತಾಪುರಂ ಅವರು ಯೆಮನ್ ನಲ್ಲಿ ಶತಮಾನಗಳಷ್ಟು ಹಳೆಯದಾದ ಸೂಫಿ ಜಾಲ ಮತ್ತು ಧಾರ್ಮಿಕ ಸಂಸ್ಥೆಗಳ ಜೊತೆ ನಂಟನ್ನು ಹೊಂದಿದ್ದಾರೆ. ಇಸ್ಲಾಮಿನ ದಯೆ ಮತ್ತು ಸಾಮರಸ್ಯದ ವಿಧಾನಗಳ ಆಧಾರದಲ್ಲಿ ಅಲ್ಲಿನ ಹಿರಿಯರು ಹಾಗೂ ಪ್ರಭಾವಿ ಧರ್ಮಗುರುಗಳ ಸಂಪರ್ಕವನ್ನು ಸಾಧಿಸಿದರು. ಅದು ರಾಜತಾಂತ್ರಿಕ ಜಾಲ ಅಥವಾ ಕಾನೂನಿನ ವಾದಗಳಿಗಿಂತ ಭಿನ್ನವಾದುದು. ಅದೇನಿದ್ದರೂ ನಂಬಿಕೆಯ ಭಾಷೆಯಲ್ಲಿ ಬೇರು ಬಿಟ್ಟಿರುವ ನೈತಿಕ ಅಧಿಕಾರದ ನೆಲೆಗಟ್ಟಿನ ಮೇಲೆ ನಿಂತಿದೆ.

ಹಾಗೆ ನೋಡುವುದಾದರೆ ಕಾಂತಾಪುರಂ ಅವರ ಈ ಮಧ್ಯಸ್ಥಿಕೆಯು ಸಂಪ್ರದಾಯವಾದಿ ಮತ್ತು ಕ್ರಾಂತಿಕಾರಿ ಎರಡೂ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಧಾರ್ಮಿಕ ಸಂಸ್ಥೆಗಳಿಗೆ ತೋರುವ ನಿಷ್ಠೆಯ ವಿಚಾರದಲ್ಲಿ ಅವರದ್ದು ಸಂಪ್ರದಾಯದ ನಡೆ. ಅದು ರಾಜನೀತಿಗಿಂತ ಭಿನ್ನವಾದುದು. ಜೀವವನ್ನು ಉಳಿಸುವ ವಿಚಾರದಲ್ಲಿ ನಿಷ್ಠೆಗೆ ಕಟ್ಟುಬಿದ್ದ ಕ್ರಾಂತಿಕಾರಿ ನಡೆ. ಇದು ಸೇಡು ತೀರಿಸಿಕೊಳ್ಳುವ ಮನಸ್ಥಿತಿಗಿಂತ ಭಿನ್ನ.

ಕಾಂತಾಪುರಂ ಅವರು ಯಾವತ್ತೂ ಸ್ತ್ರೀವಾದಿಗಳು ಮತ್ತು ಪ್ರಗತಿಪರ ಮುಸ್ಲಿಮರಿಂದ ಟೀಕೆಗೆ ಒಳಗಾಗುತ್ತಾರೆ. ಅವರ ಸಾರ್ವಜನಿಕ ನಿಲುವುಗಳು ಹಾಗಿವೆ ಕೂಡ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಬಗೆಗಿನ ಅವರ ದೃಷ್ಟಿಕೋನಗಳು ಹಾಗೂ ಇಸ್ಲಾಮಿನ ಸುಧಾರಣಾವಾದಿ ವ್ಯಾಖ್ಯಾನಗಳಿಗೆ ವಿರುದ್ಧವಾಗಿರುವುದು ಇದಕ್ಕೆ ಪ್ರಮುಖ ಕಾರಣ. ಇಷ್ಟೆಲ್ಲ ಇದ್ದೂ ಕೂಡ ಅವರು ತಳಮಟ್ಟದಲ್ಲಿ ಅಗಾಧವಾದ ವಿಶ್ವಾಸಾರ್ಹತೆಯನ್ನು ಸಂಪಾದಿಸಿದ್ದಾರೆ ಎಂದರೆ ಅದನ್ನು ಬಹಳಷ್ಟು ಮಂದಿ ನಿರಾಕರಿಸಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ ಮರ್ಕಝ್ ಗಳು ಸಮಾಜ ಕಲ್ಯಾಣ ಸೇವೆಗಳ ಜೊತೆಗೆ ಧಾರ್ಮಿಕ ಮೂಲಸೌಕರ್ಯಗಳನ್ನು ಕಟ್ಟಿ ಬೆಳೆಸಿರುವ ಗ್ರಾಮೀಣ ಮತ್ತು ಅರೆ-ಪಟ್ಟಣ ಕೇರಳದ ಭಾಗಗಳಲ್ಲಿ ಅವರ ಪ್ರಭಾವ ಗಣನೀಯವಾದುದು.

ಇವರನ್ನು ಟೀಕಿಸುವ ಜನಕ್ಕೆ ಮುಫ್ತಿ ಆಧುನಿಕ ಸಾಂಸ್ಥೀಕರಣದಲ್ಲಿ ವ್ಯಾಪಿಸಿಕೊಂಡಿರುವ ಪಿತೃಪ್ರಧಾನ ಇಸ್ಲಾಮಿನ ಮುಖ. ಅದೇ ರೀತಿ ಅನುಯಾಯಿಗಳಿಗೆ ಇವರು ಥೇಟ್ ಉಸ್ತಾದ್. ಅಂದರೆ ಕೇವಲ ಗುರು ಎಂದರ್ಥವಲ್ಲ, ನೀತಿವಂತ ಎಂದೂ ಅರ್ಥ. 

ಇಂದು ನಿಮಿಷ ಪ್ರಿಯಾ ಅವರ ಜೀವವೇನಾದರೂ ಇಂದು ಯೆಮನ್ ನ ಬುಡಕಟ್ಟು ರಾಜಿಸೂತ್ರ ಅಥವಾ ದಿಯಾ (ಬ್ಲಡ್ ಮನಿ) ಇತ್ಯರ್ಥದ ಮೂಲಕ ಉಳಿದಿದ್ದರೆ ಅದು ಧಾರ್ಮಿಕ ರಾಜತಾಂತ್ರಿಕತೆಗೆ ಸಂದ ಅನಿರೀಕ್ಷಿತ ಜಯ ಎಂದೇ ಪರಿಗಣಿಸಬೇಕಾಗುತ್ತದೆ. ಇದರ ಜೊತೆಗೆ ಭಾರತದ ಸಾರ್ವಜನಿಕ ಬದುಕಿನಲ್ಲಿ ಆಳವಾಗಿ ಬೇರೂರಿರುವ ಸತ್ಯವನ್ನೂ ಒತ್ತಿ ಹೇಳುತ್ತದೆ. ಯಾಕೆಂದರೆ ಭಾರತದಲ್ಲಿ ಜಾತ್ಯತೀತ ಆಚರಣೆಯನ್ನು ಯಾವತ್ತೂ ಜಾತ್ಯತೀತ ನಾಯಕರೇ ನಿಯಂತ್ರಿಸುವುದಿಲ್ಲ. ಕೆಲವೊಮ್ಮೆ ಕಟ್ಟಾ ಸಂಪ್ರದಾಯವಾದಿ ಧ್ವನಿಗಳು ಕೂಡ ಅತ್ಯಂತ ಮಾನವೀಯ ಫಲಿತಾಂಶಗಳನ್ನು ನೀಡಬಲ್ಲವು.

ಕಾಂತಾಪುರದಲ್ಲಿ ನಾವು ನೋಡುತ್ತಿರುವ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕೇವಲ ಧರ್ಮಗುರು ಮಾತ್ರವಲ್ಲ, ಬದಲಾಗಿ ನಡೆದಾಡುವ ಮಾನವತಾವಾದಿ. ಅವರು ತಮ್ಮದೇ ಪಂಥದಲ್ಲಿ ಸುಧಾರಣೆಯನ್ನು ವಿರೋಧಿಸುತ್ತಾರೆ. ಆದರೆ ಕರುಣೆಯ ಕಣ್ಣಿನಲ್ಲಿ ಒಂದು ವ್ಯವಸ್ಥೆಯನ್ನು ಮಂಡಿಯೂರುವಂತೆ ಮಾಡಬಲ್ಲರು.

ಮತ್ತು ಹಾಗೆ ಮಾಡುವ ಮೂಲಕ ಅಸಂಗತ ಸಂಗತಿಗಳಿಂದ ಕೇವಲ ಆತ್ಮಗಳನ್ನಲ್ಲ, ಜೀವಗಳನ್ನೇ ರಕ್ಷಿಸಬಹುದು ಎಂಬುದನ್ನು ಕಾನೂನಾತ್ಮಕ ರಾಜತಾಂತ್ರಿಕತೆಯಲ್ಲಿ ಲಂಗರು ಹಾಕಿ ಕುಳಿತ ರಾಷ್ಟ್ರಕ್ಕೆ ನೆನಪು ಮಾಡಿಕೊಟ್ಟಿದ್ದಾರೆ.

Tags:    

Similar News