ಎನ್‌ಐಎ ಬಂಧನ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಭದ್ರತೆ ಹೆಚ್ಚಳ
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾನುವಾರ ನಾಲ್ವರು ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ ನಂತರ ಅಹಮದಾಬಾದಿ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಐವರು ಉಪ ಪೊಲೀಸ್ ಆಯುಕ್ತರು ಮತ್ತು 10 ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ 3,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಂದು ಸಂಜೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಸ್ಪರ್ಧೆ ನಡೆಯಲಿದೆ. ವಿಜೇತರು ಮೇ 24 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದ್ದಾರೆ.
ಗುಜರಾತ್ ಎಟಿಎಸ್ ಹುಡುಕಾಟ: ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ನೊಂದಿಗೆ ಸಂಬಂಧ ಹೊಂದಿರುವ ನಾಲ್ವರು ಶ್ರೀಲಂಕಾ ಪ್ರಜೆಗಳನ್ನು ಭಾನುವಾರ ಬಂಧಿಸಿದ ನಂತರ, ಗುಜರಾತ್ ಎಟಿಎಸ್ ಅಹಮದಾಬಾದ್ -ಹಿಮ್ಮತ್‌ನಗರ ಹೆದ್ದಾರಿಯ ಚಿಲೋಡಾದಲ್ಲಿ ನಿರ್ಮಾಣ ಅವಶೇಷಗಳ ಅಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿದ ವ್ಯಕ್ತಿಗಳ ಹುಡುಕಾಟದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುಜರಾತ್ ಎಟಿಎಸ್ ನಾಲ್ವರು ಶಂಕಿತರನ್ನು ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಶಂಕಿತರು ಕೊಲಂಬೊದಿಂದ ಚೆನ್ನೈ ಮೂಲಕ ಗುಜರಾತ್‌ಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಐಎಸ್ ಆಜ್ಞೆ ಮೇರೆಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಆಗಮಿಸಿದ್ದರು ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಶ್ರೀಲಂಕಾದ ನಾಯಕನ ಹಿಂಬಾಲಕರು ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಸ್ ಅಜ್ಞಾತ ಸ್ಥಳದಿಂದ ಮೂರು ಪಿಸ್ತೂಲ್ ಮತ್ತು 20 ಸುತ್ತು ಮದ್ದುಗುಂಡು ವಶಪಡಿಸಿಕೊಂಡಿದೆ. ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿಗೆ ಸಂಚು ರೂಪಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಶ್ರೀಲಂಕಾ ತಂಡ ನೇಮಕ: ʻಗುಜರಾತ್‌ನಲ್ಲಿ ಬಂಧಿತರಾಗಿರುವವರ ತನಿಖೆಗೆ ನೇಮಕಗೊಂಡ ತಂಡಕ್ಕೆ ಹಿರಿಯ ಉಪ ಇನ್ಸ್‌ಪೆಕ್ಟರ್ ಜನರಲ್ ಮುಖ್ಯಸ್ಥರಾಗಿರುತ್ತಾರೆ,ʼ ಎಂದು ಶ್ರೀಲಂಕಾ ಪೊಲೀಸರು ಬುಧವಾರ ಹೇಳಿದ್ದಾರೆ. ʻಹಿರಿಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದ ತಂಡವನ್ನು ಐಜಿಪಿ ದೇಶಬಂದು ತೆನ್ನಕೋನ್ ಅವರು ನೇಮಿಸಿದ್ದಾರೆʼ ಎಂದು ಪೊಲೀ ಸ್ ವಕ್ತಾರ ಮತ್ತು ಹಿರಿಯ ಅಧೀಕ್ಷಕ ನಿಹಾಲ್ ತಾಲ್ದುವಾ ತಿಳಿಸಿದ್ದಾರೆ. ಭಾರತೀಯ ಅಧಿಕಾರಿಗಳು ಲಂಕಾ ಪ್ರಜೆಗಳ ಬಂಧನದ ಅಧಿಕೃತ ಸೂಚನೆಯನ್ನು ಅನುಸರಿಸಿ, ಪೊಲೀಸ್ ಮುಖ್ಯಸ್ಥರು ಈ ಕ್ರಮ ತೆಗೆದು ಕೊಂಡಿದ್ದಾರೆ ಎಂದು ಅವರು ಹೇಳಿದರು.
ಬಂಧಿತ ಮೊಹಮ್ಮದ್ ನುಸ್ರತ್ (35), ಮೊಹಮ್ಮದ್ ಫಾರೂಖ್ (35), ಮೊಹಮ್ಮದ್ ನಫ್ರಾನ್ (27) ಮತ್ತು ಮೊಹಮ್ಮದ್ ರಾಸ್ದೀನ್ (43) ಅವರು ಶ್ರೀಲಂಕಾದ ಉಗ್ರಗಾಮಿ ಸಂಘಟನೆ ನ್ಯಾಷನಲ್ ತೌಹೀತ್ ಜಮಾತ್ (ಎನ್‌ಜೆಟಿ) ನೊಂದಿಗೆ ಸಂಬಂಧ ಹೊಂದಿದ್ದರು. ಅವರ ಪಾಕಿಸ್ತಾನಿ ನಿರ್ವಾಹಕ ಅಬು ಬಕರ್ ಅಲ್ ಬಗ್ದಾದಿ ಮೂಲಕ ಐಎಸ್ ಸೇರಿದ್ದಾರೆ ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ ವಿಕಾಸ್ ಸಹಾಯ್ ಹೇಳಿದ್ದಾರೆ.
ಮದ್ದುಗುಂಡು ವಶ: ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಮೂಲಕ ಚಿಲೋಡಾದಲ್ಲಿ ಎಟಿಎಸ್ ತಂಡ ಮೂರು ಪಾಕಿಸ್ತಾನಿ ನಿರ್ಮಿತ ಪಿಸ್ತೂಲ್ ಮತ್ತು 20 ಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಸಹಾಯ್ ಹೇಳಿದರು. ʻಅವರು ಫೆಬ್ರವರಿಯಲ್ಲಿ ಅಬು (ಪಾಕಿಸ್ತಾನದ ಐಎಸ್ ನಾಯಕ) ಜೊತೆ ಸಂಪರ್ಕಕ್ಕೆ ಬಂದರು. ಮುಖಂಡನ ಆದೇಶದಂತೆ ಭಾರತದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು,ʼ ಎಂದು ಸಹಾಯ್ ಹೇಳಿದರು.