Mahakumbh Mela : ಕುಂಭ ಮೇಳದಲ್ಲಿ ಬಯಲು ಶೌಚ; ಉತ್ತರ ಪ್ರದೇಶಕ್ಕೆ ಹಸಿರು ನ್ಯಾಯಾಧೀಕರಣ ನೋಟಿಸ್
Mahakumbh Mela :ನಿಪುಣ್ ಭೂಷಣ್ ಎಂಬುವರು ಎನ್ಜಿಟಿಗೆ ಅರ್ಜಿ ಸಲ್ಲಿಸಿದ್ದು.ಮಹಾ ಕುಂಭ ಮೇಳದ ವೇಳೆ ಶೌಚಾಲಯಗಳ ಕೊರತೆಯಿಂದ ಉಂಟಾದ ಪರಿಸರ ಮಾಲಿನ್ಯಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.;
ಮಹಾ ಕುಂಭ ಮೇಳ ನಡೆಯುವ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಸಮರ್ಪಕ ಶೌಚಾಲಯ ಸೌಲಭ್ಯಗಳನ್ನು ಒದಗಿಸದ ಕಾರಣ ಗಂಗಾ ನದಿಯ ತೀರದಲ್ಲಿ ಮುಕ್ತ ಶೌಚ ಪ್ರಕ್ರಿಯೆ ಹೆಚ್ಚಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಉತ್ತರಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.
ನಿಪುಣ್ ಭೂಷಣ್ ಎಂಬವರು ಎನ್ಜಿಟಿಗೆ ಅರ್ಜಿ ಸಲ್ಲಿಸಿದ್ದು. ಮಹಾ ಕುಂಭ ಮೇಳದ ವೇಳೆ ಶೌಚಾಲಯ ಸೌಲಭ್ಯಗಳ ಕೊರತೆಯಿಂದ ಉಂಟಾದ ಪರಿಸರ ಮಾಲಿನ್ಯಕ್ಕಾಗಿ ಉತ್ತರ ಪ್ರದೇಶ ಸರ್ಕಾರ ₹10 ಕೋಟಿ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ. ಮಹಾ ಕುಂಭ ಮೇಳದ ಪ್ರಯಾಗ್ರಾಜ್ನಲ್ಲಿ ಶೌಚ ಸೌಲಭ್ಯಗಳ ಕೊರತೆಯಿಂದ ನದಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಾಲಿನ್ಯ ಉಂಟಾಗಿದೆ ಎಂಬುದನ್ನು ತಮ್ಮ ಅರ್ಜಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.
ಫೆಬ್ರವರಿ 24ರಂದು ಮುಂದಿನ ವಿಚಾರಣೆ
ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ.ಸೆಂಥಿಲ್ ವೆಲ್ ನೇತೃತ್ವದ ಪೀಠ, ಸಂಬಂಧಿತ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದ್ದು, ಮುಂದಿನ ವಿಚಾರಣೆಗೆ ಒಂದು ವಾರ ಮುಂಚೆ ಉತ್ತರ ನೀಡುವಂತೆ ಸೂಚಿಸಿದೆ.
ಗಂಗೆಯ ನೀರಿನ ಮಾಲಿನ್ಯ ಮಟ್ಟ ಉಲ್ಬಣ
ಬಾರ್ ಆ್ಯಂಡ್ ಬೆಂಚ್ ವರದಿ ಪ್ರಕಾರ, 2024ರ ನವೆಂಬರ್‌ನಲ್ಲಿ ಗಂಗಾ ನದಿಯ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದ್ದು, ಸಂಗಮ ಬಳಿ ಫಿಕಲ್ ಕೊಲಿಫಾರ್ಮ್ ಪತ್ತೆಯಾಗಿದೆ. ಅದು 3,300 MPN/100ml ದಾಖಲಾಗಿದ್ದು, ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಿತಿಯಾದ 2,500 MPN/100ml ಅನ್ನು ಮೀರಿದೆ.
ಆರೋಗ್ಯದ ಮೇಲೆ ಪರಿಣಾಮ
ಈ ಮಾಲಿನ್ಯದಿಂದ ಕಾಲರಾ. ಹೆಪಟೈಟಿಸ್ ಎ, ಪೋಲಿಯೊ ಮುಂತಾದ ತೀವ್ರ ಕಾಯಿಲೆಗಳ ಅಪಾಯವಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಭಕ್ತರು ಗಂಗೆಯಲ್ಲಿನ ಪವಿತ್ರ ಸ್ನಾನ ಕೈಗೊಂಡಿರುವುದರಿಂದ ಇದು ಜನಾರೋಗ್ಯಕ್ಕೆ ದೊಡ್ಡ ಸವಾಲು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿದಾರರು ‘ಪೋಲ್ಯೂಟರ್ ಪೇಸ್’ ತತ್ವವನ್ನು ಕೋರ್ಟ್ಗೆ ಮನವರಿಕೆ ಮಾಡಿದ್ದು, ಮಾಲಿನ್ಯ ಮಾಡುವವನು ಅದರ ಪರಿಣಾಮದ ವೆಚ್ಚವನ್ನು ಭರಿಸಬೇಕು ಎಂದು ನಿಯಮ ಹೇಳುತ್ತದೆ.
ಮಹಾ ಕುಂಭ ಮೇಳದಲ್ಲಿ 1.5 ಲಕ್ಷ ಬಯೋ-ಟಾಯ್ಲೆಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿದರೂ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿರುವ ಕಾರಣ ಅದು ಸಾಕಾಗಲಿಲ್ಲ. ಕುಂಭ ಮೇಳದಲ್ಲಿ ತೀರಗಳಲ್ಲಿ ಮುಕ್ತ ಶೌಚಮಾಡುತ್ತಿರುವ ವೀಡಿಯೊಗಳು ಕಳವಳ ಉಂಟು ಮಾಡಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.