ಚೀನಾದಿಂದ ಹಣ ಪಡೆದ ಆರೋಪ |: ನ್ಯೂಸ್‌ಕ್ಲಿಕ್‌ ಮುಖ್ಯಸ್ಥ ಪ್ರಬೀರ್ ಪುರ್ಕಾಯಸ್ಥ ಬಂಧನ ಅಸಿಂಧು ಎಂದ ಸುಪ್ರೀಂ

Update: 2024-05-15 06:21 GMT

ನ್ಯೂಸ್‌ಕ್ಲಿಕ್‌ ಸುದ್ದಿ ಪೋರ್ಟಲ್‌ ನ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ (ಮೇ 15) ಆದೇಶಿಸಿದೆ. ಅವರ ಬಂಧನ ʻಅಸಿಂಧುʼ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ. 

ಚೀನಾ ಪರ ಪ್ರಚಾರ ಮಾಡಲು ವೆಬ್‌ಸೈಟ್‌ಗೆ ಹಣ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸರು ಅವರನ್ನು ಭಯೋತ್ಪಾದನೆ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಬಂಧಿಸಿದ್ದರು. ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ಮೇ 6 ರಂದು ಆದೇಶಿಸಿತ್ತು. 2023ರ ಅಕ್ಟೋಬರ್ 3 ರಂದು ದೆಹಲಿ ಪೊಲೀಸರ ವಿಶೇಷ ಘಟಕ ಪುರ್ಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ಬಂಧಿಸಿತ್ತು. ಪುರ್ಕಾಯಸ್ಥ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. 

ಎಫ್‌ಐಆರ್‌ ಪ್ರಕಾರ, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಮತ್ತು ದೇಶದ ವಿರುದ್ಧ ಅಸಮಾಧಾನ ಸೃಷ್ಟಿಸಲು ನ್ಯೂಸ್ ಪೋರ್ಟಲ್‌ ಚೀನಾದಿಂದ ಹಣ ಪಡೆದಿದೆ 2019 ರ ಲೋಕಸಭೆ ಚುನಾವಣೆ ಸಮಯದಲ್ಲಿ ಚುನಾವಣೆ ಪ್ರಕ್ರಿಯೆ ಯನ್ನು ಹಾಳುಮಾಡಲು ಪುರ್ಕಾಯಸ್ಥ ಅವರು ಪೀಪಲ್ಸ್ ಅಲಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ (ಪಿಎಡಿಎಸ್) ಗುಂಪಿನೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿ‌ಸಿದೆ. 

ಅಕ್ಟೋಬರ್ 3 ರಂದು ದೆಹಲಿಯ 88 ಮತ್ತು ಇತರ ರಾಜ್ಯಗಳ ಏಳು ಸ್ಥಳಗಳಲ್ಲಿ ದಾಳಿ ನಡೆಸಿ, ನ್ಯೂಸ್‌ಕ್ಲಿಕ್ ಕಚೇರಿ ಮತ್ತು ಪತ್ರಕರ್ತರ ನಿವಾಸಗಳಿಂದ ಸುಮಾರು 300 ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂಬತ್ತು ಮಹಿಳಾ ಪತ್ರಕರ್ತರು ಸೇರಿದಂತೆ 46 ವ್ಯಕ್ತಿಗಳನ್ನು ವಿಶೇಷ ಕೋಶ ಪ್ರಶ್ನಿಸಿದೆ.

Tags:    

Similar News