National Herald Probe : ಸೋನಿಯಾ, ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ; ಇಡಿಯಿಂದ 661 ಕೋಟಿ ರೂ. ಆಸ್ತಿ ವಶ ಪ್ರಕ್ರಿಯೆ ಆರಂಭ

ಜಾರಿ ನಿರ್ದೇಶನಾಲಯವು ಏಪ್ರಿಲ್ 11ರಂದು ದೆಹಲಿ, ಮುಂಬೈ ಮತ್ತು ಲಕ್ನೋದ ಆಸ್ತಿ ನೋಂದಣಿ ಅಧಿಕಾರಿಗಳಿಗೆ ನೋಟೀಸ್‌ ಜಾರಿ ಮಾಡಿದೆ. ಈ ಕ್ರಮವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಸೆಕ್ಷನ್ 8 ಮತ್ತು ಸಂಬಂಧಿತ ನಿಯಮಗಳಡಿ ಕೈಗೊಳ್ಳಲಾಗಿದೆ.;

Update: 2025-04-12 13:43 GMT

ಪ್ರಾತಿನಿಧಿಕ ಚಿತ್ರ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಕಾಂಗ್ರೆಸ್‌ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯ (ED) 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಶುಕ್ರವಾರ (ಏಪ್ರಿಲ್ 11, 2025) ನೋಟೀಸ್‌ ಜಾರಿ ಮಾಡಿದೆ. ಈ ಆಸ್ತಿಗಳು ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬೈನ ಬಾಂದ್ರಾ ಪ್ರದೇಶದ ಆವರಣ ಮತ್ತು ಲಕ್ನೋದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಎಜಿಎಲ್​ ಕಟ್ಟಡವನ್ನು ಒಳಗೊಂಡಿವೆ.

ಜಾರಿ ನಿರ್ದೇಶನಾಲಯವು ಏಪ್ರಿಲ್ 11ರಂದು ದೆಹಲಿ, ಮುಂಬೈ ಮತ್ತು ಲಕ್ನೋದ ಆಸ್ತಿ ನೋಂದಣಿ ಅಧಿಕಾರಿಗಳಿಗೆ ನೋಟೀಸ್‌ ಜಾರಿ ಮಾಡಿದೆ. ಈ ಕ್ರಮವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಸೆಕ್ಷನ್ 8 ಮತ್ತು ಸಂಬಂಧಿತ ನಿಯಮಗಳಡಿ ಕೈಗೊಳ್ಳಲಾಗಿದೆ. ಮುಂಬೈನ ಹೆರಾಲ್ಡ್ ಹೌಸ್‌ನ 7, 8 ಮತ್ತು 9ನೇ ಮಹಡಿಗಳ ಮಾಲೀಕತ್ವ ಹೊಂದಿರುವ ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಸ್ಟ್​​ ಲಿಮಿಟೆಡ್‌ಗೆ ಪ್ರತ್ಯೇಕ ನೋಟೀಸ್‌ ನೀಡಲಾಗಿದ್ದು, ಭವಿಷ್ಯದ ಎಲ್ಲಾ ಬಾಡಿಗೆ ಪಾವತಿಗಳನ್ನು ನೇರವಾಗಿ ಜಾರಿ ನಿರ್ದೇಶನಾಲಯಕ್ಕೆ ಠೇವಣಿ ಇಡುವಂತೆ ಸೂಚಿಸಲಾಗಿದೆ.

ನವೆಂಬರ್ 2023ರಲ್ಲಿ, ಇಡಿಯು ದೆಹಲಿ, ಮುಂಬೈ ಮತ್ತು ಲಕ್ನೋದ 661 ಕೋಟಿ ರೂ. ಮೌಲ್ಯದ ಎಜಿಎಲ್​ ಆಸ್ತಿಗಳನ್ನು ಮತ್ತು 90.2 ಕೋಟಿ ರೂ. ಮೌಲ್ಯದ ಎಜಿಎಲ್​ ಷೇರುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.

ಪ್ರಕರಣದ ಹಿನ್ನೆಲೆ

ನ್ಯಾಷನಲ್ ಹೆರಾಲ್ಡ್ ಪ್ರಕರಣವು 2012ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿಯ ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರಿನಿಂದ ಆರಂಭಗೊಂಡಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್‌ ನಾಯಕರು ಯಂಗ್ ಇಂಡಿಯನ್ ಲಿಮಿಟೆಡ್ (YIL) ಮೂಲಕ ಎಜಿಎಲ್​ನ 2,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಕೇವಲ 50 ಲಕ್ಷ ರೂ.ಗೆ "ದುರುದ್ದೇಶಪೂರಿತ ರೀತಿಯಲ್ಲಿ" ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು. ಎಜಿಎಲ್​ ನ್ಯಾಷನಲ್ ಹೆರಾಲ್ಡ್, ಕೌಮಿ ಅವಾಜ್ (ಉರ್ದು) ಮತ್ತು ನವಜೀವನ್ (ಹಿಂದಿ) ಪತ್ರಿಕೆಗಳನ್ನು ಪ್ರಕಟಿಸುತ್ತಿತ್ತು. ಆದರೆ, 2008ರಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಪತ್ರಿಕೆಗಳ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಯಿತು.

2010ರಲ್ಲಿ ರಚನೆಗೊಂಡಿರುವ ಯಂಗ್ ಇಂಡಿಯನ್ ಲಿಮಿಟೆಡ್‌ನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ಶೇ.38ರಷ್ಟು ಷೇರುಗಳನ್ನು ಹೊಂದಿದ್ದಾರೆ. ಉಳಿದ ಶೇ.24ರಷ್ಟು ಷೇರುಗಳನ್ನು ಕಾಂಗ್ರೆಸ್‌ ನಾಯಕರಾದ ದಿ. ಮೋತಿಲಾಲ್ ವೊರಾ ಮತ್ತು ದಿ. ಆಸ್ಕರ್ ಫರ್ನಾಂಡೀಸ್ ಜೊತೆಗೆ ಸುಮನ್ ದುಬೆ ಮತ್ತು ಸ್ಯಾಮ್ ಪಿತ್ರೋಡಾ ಹೊಂದಿದ್ದಾರೆ. ಇಡಿಯ ಪ್ರಕಾರ, ಕಾಂಗ್ರೆಸ್‌ ಪಕ್ಷವು ಎಜಿಎಲ್​​ಗೆ 90.25 ಕೋಟಿ ರೂ. ಬಡ್ಡಿರಹಿತ ಸಾಲವನ್ನು ನೀಡಿತ್ತು.

ಕಾನೂನು ಹೋರಾಟವೇನು?

2014ರಲ್ಲಿ ಇಡಿಯು ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಇದೆಯೇ ಎಂದು ತನಿಖೆ ಆರಂಭಿಸಿತು. 2015ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ಮೇಲ್ಮನವಿಯನ್ನು ತಿರಸ್ಕರಿಸಲಾಯಿತು ಮತ್ತು "ಕ್ರಿಮಿನಲ್ ಉದ್ದೇಶ" ಇದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. 2016ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಆರೋಪಿಗಳಿಗೆ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಯಿತಾದರೂ, ಕಾನೂನು ಕ್ರಮವನ್ನು ರದ್ದುಗೊಳಿಸಲಿಲ್ಲ. 2015ರಲ್ಲಿ ಪಾಟಿಯಾಲಾ ಹೌಸ್ ಕೋರ್ಟ್‌ನಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಯಿತು.

ಕಾಂಗ್ರೆಸ್‌ ಪಕ್ಷವು ಈ ಆರೋಪಗಳನ್ನು "ರಾಜಕೀಯ ಪ್ರೇರಿತ" ಎಂದು ಕರೆದಿದ್ದು, ಯಂಗ್ ಇಂಡಿಯಾ ಲಿಮಿಡೆಟ್​ ಒಂದು "ಲಾಭರಹಿತ" ಸಂಸ್ಥೆಯಾಗಿದ್ದು, ಯಾವುದೇ ಹಣದ ವರ್ಗಾವಣೆ ನಡೆದಿಲ್ಲವಾದ್ದರಿಂದ ಅಕ್ರಮ ಹಣ ವರ್ಗಾವಣೆ ಆರೋಪ ಸುಳ್ಳು ಎಂದು ವಾದಿಸಿದೆ.

ಪ್ರಕರಣ ಯಾಕೆ ಮಹತ್ವದ್ದು?

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು 1938ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸ್ಥಾಪಿಸಿದ್ದರು. ಇದು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ 2008ರಲ್ಲಿ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿತು.  

Tags:    

Similar News