ದಾಭೋಲ್ಕರ್ ಹತ್ಯೆ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
2013ರ ಆಗಸ್ಟ್ 20ರಂದು ಬೆಳಗ್ಗೆ ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ತೆರಳುತ್ತಿದ್ದ ದಾಭೋಲ್ಕರ್ (67) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.;
ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯವು ಮೂಢನಂಬಿಕೆ ವಿರೋಧಿ ಹೋರಾಟಗಾರ ಡಾ.ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ದೋಷಿ ಎಂದು ಶುಕ್ರವಾರ (ಮೇ 10) ತೀರ್ಪು ನೀಡಿದೆ. ಇತರ ಮೂವರನ್ನು ಖುಲಾಸೆಗೊಳಿಸಿದೆ.
ಶೂಟರ್‌ಗಳಾದ ಶರದ್ ಕಲಾಸ್ಕರ್ ಮತ್ತು ಸಚಿನ್ ಅಂದುರೆ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿದೆ. ಇತರ ಆರೋಪಿಗಳಾದ ಡಾ.ವೀರೇಂದ್ರ ಸಿನ್ಹ ತಾವಡೆ, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ.
2013ರ ಆಗಸ್ಟ್ 20ರಂದು ಬೆಳಗ್ಗೆ ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ದಾಭೋಲ್ಕರ್ (67) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
20 ಸಾಕ್ಷಿಗಳ ವಿಚಾರಣೆ: ಪ್ರಾಸಿಕ್ಯೂಷನ್ 20 ಸಾಕ್ಷಿಗಳನ್ನು ಹಾಗೂ ಪ್ರತಿವಾದಿಗಳು ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಸಿದರು. ಮೂಢನಂಬಿಕೆ ವಿರುದ್ಧ ದಾಭೋಲ್ಕರ್ ಅವರ ಹೋರಾಟವನ್ನು ಆರೋಪಿಗಳು ವಿರೋಧಿಸಿದ್ದರು ಎಂದು ಪ್ರಾಸಿಕ್ಯೂಷನ್ ಅಂತಿಮ ವಾದದಲ್ಲಿ ಹೇಳಿತ್ತು.
ಆರಂಭದಲ್ಲಿ ಪುಣೆ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಆನಂತರ ಬಾಂಬೆ ಹೈಕೋರ್ಟ್ ಆದೇಶದಂತೆ 2014ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಕೈಗೆತ್ತಿಕೊಂಡಿತು. ಹಿಂದೂ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ವೀರೇಂದ್ರ ಸಿನ್ಹ್ ತಾವಡೆ ಅವರನ್ನು ಜೂನ್ 2016 ರಲ್ಲಿ ಬಂಧಿಸಿತು.
ಪ್ರಾಸಿಕ್ಯೂಷನ್ ಪ್ರಕಾರ, ತಾವಡೆ ಕೊಲೆಯ ಮುಖ್ಯ ಸಂಚುಕೋರರಲ್ಲಿ ಒಬ್ಬರು. ತಾವಡೆ ಮತ್ತು ಇತರ ಕೆಲವು ಆರೋಪಿಗಳು ನಂಟು ಹೊಂದಿರುವ ಸನಾತನ ಸಂಸ್ಥೆಯು ದಾಭೋಲ್ಕರ್ ಅವರ ಸಂಘಟನೆಯಾದ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕೆಲಸವನ್ನು ವಿರೋಧಿಸಿತ್ತು.
ಹತ್ಯೆಕೋರರ ಗುರುತು: ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರನ್ನು ಶೂಟರ್ ಗಳೆಂದು ಹೆಸರಿಸಿತ್ತು. ಆನಂತರ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ಬಂಧಿಸಿತು. ಬಳಿಕ ವಕೀಲರಾದ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಸಹ ಸಂಚುಕೋರರೆಂದು ಆರೋಪಿಸಿ, ಬಂಧಿಸಿತು. ವಿಚಾರಣೆ ಸಂದರ್ಭದಲ್ಲಿ ಪ್ರತಿವಾದಿ ವಕೀಲರಲ್ಲಿ ಒಬ್ಬರಾದ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರು ಶೂಟರ್‌ಗಳು ಎಂಬ ಬಗ್ಗೆ ಸಿಬಿಐನ ಲೋಪವನ್ನು ಪ್ರಶ್ನಿಸಿದ್ದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120 ಬಿ (ಪಿತೂರಿ), 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಯುಎಪಿಎ ಸೆಕ್ಷನ್ 16ರಡಿ ಪ್ರಕರಣ ದಾಖಲಿಸಲಾಗಿತ್ತು. ತಾವಡೆ, ಅಂದುರೆ ಮತ್ತು ಕಲಾಸ್ಕರ್ ಜೈಲಿನಲ್ಲಿದ್ದು, ಪುನಾಲೇಕರ್ ಮತ್ತು ಭಾವೆ ಜಾಮೀನಿನ ಮೇಲೆ ಹೊರಗಿದ್ದಾರೆ.
ದಾಭೋಲ್ಕರ್ ಅವರ ಹತ್ಯೆಯ ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ (ಕೊಲ್ಹಾಪುರ, ಫೆಬ್ರವರಿ 2015), ಕನ್ನಡ ವಿದ್ವಾಂಸ ಮತ್ತು ಬರಹಗಾರ ಎಂ.ಎಂ. ಕಲ್ಬುರ್ಗಿ (ಧಾರವಾಡ, ಆಗಸ್ಟ್ 2015) ಮತ್ತು ಪತ್ರಕರ್ತೆ ಗೌರಿ ಲಂಕೇಶ್ (ಬೆಂಗಳೂರು, ಸೆಪ್ಟೆಂಬರ್. 2017) ಹತ್ಯೆ ನಡೆದಿದೆ. ಈ ನಾಲ್ಕು ಪ್ರಕರಣಗಳ ಆರೋಪಿಗಳು ಪರಸ್ಪರ ನಂಟು ಹೊಂದಿರುವ ಶಂಕೆ ವ್ಯಕ್ತ ವಾಗಿದೆ.