ಮುಂಬೈ ಸರಣಿ ಸ್ಫೋಟ: 12 ಆರೋಪಿಗಳ ಖುಲಾಸೆ ತೀರ್ಪಿಗೆ ಸುಪ್ರೀಂ ಕೋರ್ಟ್‌ನಿಂದ ಸೀಮಿತ ತಡೆ

ಆಕ್ಷೇಪಿತ ತೀರ್ಪನ್ನು ಬೇರೆ ಯಾವುದೇ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ಹೇಳುತ್ತಿದ್ದೇವೆ. ಆದ್ದರಿಂದ ಆ ಮಟ್ಟಿಗೆ ತೀರ್ಪಿಗೆ ತಡೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.;

Update: 2025-07-24 10:34 GMT

ಸುಪ್ರೀಂ ಕೋರ್ಟ್‌

2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ, 12 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ಗುರುವಾರ ಸೀಮಿತ ಮಟ್ಟದ ತಡೆಯಾಜ್ಞೆ ನೀಡಿದೆ. ಈ ತೀರ್ಪನ್ನು ಬೇರೆ ಯಾವುದೇ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯವು ಮಹತ್ವದ ಆದೇಶವನ್ನು ಹೊರಡಿಸಿದೆ.

ಮರಣದಂಡನೆಗೆ ಗುರಿಯಾಗಿದ್ದ ಐವರು ಸೇರಿದಂತೆ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಹೈಕೋರ್ಟ್ ತೀರ್ಪಿಗೆ ಸಂಪೂರ್ಣ ತಡೆ ನೀಡಲು, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ನಿರಾಕರಿಸಿತು. "ಎಲ್ಲಾ ಪ್ರತಿವಾದಿಗಳನ್ನು ಈಗಾಗಲೇ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಅವರನ್ನು ಮತ್ತೆ ಜೈಲಿಗೆ ಕಳುಹಿಸುವ ಪ್ರಶ್ನೆಯೇ ಇಲ್ಲ. ಆದರೆ, ಕಾನೂನಿನ ಪ್ರಶ್ನೆಗೆ ಸಂಬಂಧಿಸಿದಂತೆ, ಈ ತೀರ್ಪನ್ನು ಬೇರೆ ಯಾವುದೇ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಪರಿಗಣಿಸಬಾರದು. ಆದ್ದರಿಂದ, ಆ ಮಟ್ಟಿಗೆ ಈ ತೀರ್ಪಿಗೆ ತಡೆ ಇರುತ್ತದೆ," ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, "ಹೈಕೋರ್ಟ್ ತೀರ್ಪಿನಲ್ಲಿರುವ ಕೆಲವು ಅವಲೋಕನಗಳು, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ನಡೆಯುತ್ತಿರುವ ಇತರ ವಿಚಾರಣೆಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ, ಆರೋಪಿಗಳ ಖುಲಾಸೆಗೆ ಅಡ್ಡಿಯಾಗದಂತೆ, ಕೇವಲ ತೀರ್ಪಿಗೆ ತಡೆ ನೀಡಬೇಕು," ಎಂದು ಮನವಿ ಮಾಡಿದರು.

ಈ ವಾದವನ್ನು ಪರಿಗಣಿಸಿದ ನ್ಯಾಯಾಲಯವು, ಸೀಮಿತ ತಡೆಯಾಜ್ಞೆ ನೀಡಿ, ಎಲ್ಲಾ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತು. "ನಾವು ನೋಟಿಸ್ ನೀಡುತ್ತಿದ್ದೇವೆ. ಕಕ್ಷಿದಾರರು ಬರಲಿ, ಅವರ ವಾದವನ್ನು ಕೇಳಿ ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಪೀಠ ತಿಳಿಸಿತು.

ಖುಲಾಸೆಗೊಂಡ 12 ಆರೋಪಿಗಳ ಪೈಕಿ, ಒಂಬತ್ತು ಮಂದಿ ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇಬ್ಬರ ವಿರುದ್ಧ ಬೇರೆ ಪ್ರಕರಣಗಳು ಬಾಕಿ ಇರುವುದರಿಂದ ಅವರು ಇನ್ನೂ ಜೈಲಿನಲ್ಲಿದ್ದಾರೆ. ಮತ್ತೊಬ್ಬ ಆರೋಪಿಯು 2021ರಲ್ಲಿ ನಿಧನರಾಗಿದ್ದರು.

2006ರ ಜುಲೈ 11ರಂದು ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದ ಉಪನಗರ ರೈಲುಗಳಲ್ಲಿ ಸಂಭವಿಸಿದ್ದ ಏಳು ಸರಣಿ ಬಾಂಬ್ ಸ್ಫೋಟಗಳಲ್ಲಿ 189 ಮಂದಿ ಮೃತಪಟ್ಟು, 824 ಮಂದಿ ಗಾಯಗೊಂಡಿದ್ದರು. 

Tags:    

Similar News