ಆಪ್ ತೊರೆದ ದೆಹಲಿ ಸಚಿವ
ಜಾರಿ ನಿರ್ದೇಶನಾಲಯ (ಇಡಿ) ನವೆಂಬರ್ 2023ರಲ್ಲಿ ಆನಂದ್ ಅವರ ಮನೆಯನ್ನು ಶೋಧಿಸಿತ್ತು.7 ಕೋಟಿ ರೂ.ಗಿಂತ ಹೆಚ್ಚಿನ ಕಸ್ಟಮ್ಸ್ ವಂಚನೆಗಾಗಿ ಆನಂದ್ ವಿರುದ್ಧ ದೂರು ದಾಖಲಿಸಲಾಗಿದೆ.;
ಏಪ್ರಿಲ್ 10- ದೆಹಲಿಯ ಸಚಿವ ರಾಜ್ ಕುಮಾರ್ ಆನಂದ್ ಬುಧವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ʻಭ್ರಷ್ಟಾಚಾರ ವಿರೋಧಿ ಗುಂಪಿನಲ್ಲಿರುವವರೇ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಪಕ್ಷದ ಅವನತಿ ಆಗಲಿದೆʼ ಎಂದು ದೂರಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಆನಂದ್, ʻಭ್ರಷ್ಟಾಚಾರದ ವಿರುದ್ಧ ಹೋರಾಡಲು ಪಕ್ಷ ಹುಟ್ಟಿದೆ. ಆದರೆ, ಇಂದು ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಈ ಸರ್ಕಾರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಮತ್ತು ಭ್ರಷ್ಟಾಚಾರದಲ್ಲಿ ನನ್ನ ಹೆಸರು ಸೇರುವುದು ನನಗೆ ಇಷ್ಟವಿಲ್ಲʼ ಎಂದು ಹೇಳಿದರು.
ಆದರೆ, ಎಎಪಿ ನಾಯಕ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆನಂದ್ ಅವರು ಬಿಜೆಪಿಯ ʻಒತ್ತಡದಿಂದʼ ತೊರೆಯುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ದಲಿತ ಪ್ರಾತಿನಿಧ್ಯವಿಲ್ಲ: ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿದ್ದ ಆನಂದ್, ಪಕ್ಷದಲ್ಲಿ ದಲಿತರಿಗೆ ಪ್ರಾತಿನಿಧ್ಯ ನೀಡಿಲ್ಲ ಮತ್ತು ಎಎಪಿ ಉನ್ನತ ನಾಯಕರಲ್ಲಿ ದಲಿತರಿಲ್ಲ ಎಂದು ಆರೋಪಿಸಿದರು. ʻಆಮ್ ಆದ್ಮಿ ಪಕ್ಷದಲ್ಲಿ ದಲಿತ ಶಾಸಕ ಅಥವಾ ಕೌನ್ಸಿಲರ್ ಇಲ್ಲ. ದಲಿತ ನಾಯಕರನ್ನು ನಾಯಕತ್ವ ಸ್ಥಾನಕ್ಕೂ ನೇಮಿಸಿಲ್ಲ. ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸುತ್ತೇನೆ. ದಲಿತರ ಪರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಪಕ್ಷದಲ್ಲಿರುವುದರಲ್ಲಿ ಅರ್ಥವಿಲ್ಲʼ ಎಂದು ಸುದ್ದಿಗಾರರಿಗೆ ತಿಳಿಸಿದರು. ʻಇಂತಹ ಸನ್ನಿವೇಶದಲ್ಲಿ ದಲಿತರು ಮೋಸ ಹೋದೆವು ಎಂದು ಭಾವಿಸುತ್ತಾರೆ. ನಾವು ಒಳಗೊಳ್ಳುವಿಕೆಯ ಸಮಾಜದಲ್ಲಿ ಬದುಕುತ್ತಿದ್ದೇವೆ. ಆದರೆ, ಅನುಪಾತದ ಬಗ್ಗೆ ಮಾತನಾಡುವುದು ತಪ್ಪಲ್ಲʼ ಎಂದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿ,ʻರಾಜಕೀಯ ಬದಲಾದ ನಂತರ ದೇಶ ಬದಲಾಗುತ್ತದೆ ಎಂದು ಕೇಜ್ರಿವಾಲ್ ಜಂತರ್ ಮಂತರ್‌ನಿಂದ ಹೇಳಿದ್ದರು. ರಾಜಕೀಯ ಬದಲಾಗಿಲ್ಲ; ಆದರೆ, ರಾಜಕಾರಣಿ ಬದಲಾಗಿದ್ದಾರೆʼ ಎಂದು ಪಟೇಲ್ ನಗರ ಕ್ಷೇತ್ರದ ಶಾಸಕ ಆನಂದ್ ಹೇಳಿದರು. ರಾಜೀನಾಮೆ ನೀಡುತ್ತಿರುವ ಸಂದರ್ಭ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ʻನಿನ್ನೆಯವರೆಗೆ ನಮ್ಮ ವಿರುದ್ಧ ಸಂಚು ರೂಪಿಸಲಾಗುತ್ತಿದೆ ಎಂಬ ಭಾವನೆಯಲ್ಲಿದ್ದೆ. ಆದರೆ, ಹೈಕೋರ್ಟ್ ತೀರ್ಪಿನ ನಂತರ ಏನೋ ತಪ್ಪಾಗಿದೆ ಎನ್ನಿಸಿದೆ,ʼ ಎಂದರು.
ಯಾವುದೇ ಪಕ್ಷ ಸೇರುವುದಿಲ್ಲ: ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ ಕೆಲವೇ ದಿನಗಳಲ್ಲಿ ಆನಂದ್ ರಾಜೀನಾಮೆ ನೀಡಿದ್ದಾರೆ. ಅತಿಶಿ ಮೇಲೆ ಬಿಜೆಪಿ ಪ್ರಕರಣ ದಾಖಲಿಸಿದೆ. ʻತಾವು ಯಾವುದೇ ಪಕ್ಷಕ್ಕೆ ಸೇರುವುದಿಲ್ಲʼ ಎಂದು ಆನಂದ್ ಹೇಳಿದರು. ಆನಂದ್ ಎಎಪಿಯ ರಾಷ್ಟ್ರೀಯ ಮಂಡಳಿಯ ಸದಸ್ಯ. 2011 ರಿಂದ ಕೇಜ್ರಿವಾಲ್ ಅವರ ಚಳವಳಿಯಲ್ಲಿದ್ದಾರೆ. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, 2020 ರಲ್ಲಿ ಪಟೇಲ್ ನಗರದಿಂದ ಆಯ್ಕೆಯಾಗಿದ್ದರು. ಜಾರಿ ನಿರ್ದೇಶನಾಲಯ (ಇಡಿ) ನವೆಂಬರ್ 2023ರಲ್ಲಿ ಆನಂದ್ ಅವರ ಮನೆಯನ್ನು ಶೋಧಿಸಿತು. 7 ಕೋಟಿ ರೂ.ಗಿಂತ ಹೆಚ್ಚಿನ ಕಸ್ಟಮ್ಸ್ ವಂಚನೆಗಾಗಿ ಆನಂದ್ ವಿರುದ್ಧ ದೂರು ದಾಖಲಿಸಲಾಗಿದೆ.