ಮರಾಠಾ ಮೀಸಲು: ಉಪವಾಸ ಸ್ಥಗಿತಗೊಳಿಸಿದ ಮನೋಜ್ ಜಾರಂಗೆ

ಮರಾಠ ಸಮುದಾಯದವರು ಬಿಜೆಪಿಯನ್ನು ಸೋಲಿಸಬೇಕು. ಗೃಹ ಸಚಿವ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಜಾರಂಗೆ ಆರೋಪಿಸಿದರು.;

Update: 2024-07-24 09:51 GMT

ಮರಾಠಾ ಕಾರ್ಯಕರ್ತ ಮನೋಜ್ ಜಾರಂಗೆ ಅವರು ಐದು ದಿನಗಳ ಹಿಂದೆ ಆರಂಭಿಸಿದ್ದ ಉಪವಾಸವನ್ನು ಬುಧವಾರ (ಜುಲೈ 24) ಸ್ಥಗಿತಗೊಳಿಸಿದರು. 

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಈ ನಿರ್ಧಾರ ಪ್ರಕಟಿಸಿದ ಅವರು, ಹೋರಾಟ ಮುಂದುವರಿಸಲು ತಾವು ಜೀವಂತ ಇರಬೇಕೆಂದು ಸಮುದಾಯದ ಸದಸ್ಯರು ಬಯಸುತ್ತಾರೆ ಎಂದು ಹೇಳಿದರು.

ಜಾರಂಗೆ ಅವರ ಬೇಡಿಕೆ: ಕುಣಬಿಗಳನ್ನು ಮರಾಠಾ ಸಮುದಾಯದವರ 'ಸಾಗೆ ಸೋಯಾರೆ' (ರಕ್ತ ಸಂಬಂಧಿ) ಎಂದು ಗುರುತಿಸುವ ಕರಡು ಅಧಿಸೂಚನೆಯ ಅನುಷ್ಠಾನ, ಮರಾಠರಿಗೆ ಒಬಿಸಿ ವರ್ಗದಲ್ಲಿ ಮೀಸಲು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಜುಲೈ 20 ರಂದು ಉಪವಾಸ ಪ್ರಾರಂಭಿಸಿದರು. ಐವಿ(ನರದೊಳಗೆ ದ್ರವ) ನಿರಾಕರಿಸಿದ್ದ ಅವರು, ಮಂಗಳವಾರ (ಜುಲೈ 23) ರಾತ್ರಿಯಿಂದ ಐವಿ ತೆಗೆದುಕೊಂಡರು. 

ʻಸಮುದಾಯದವರು ನಾನು ಬದುಕಬೇಕು ಎಂದು ಹೇಳುತ್ತಾರೆ. ನನ್ನ ಮೇಲೆ ಸಮುದಾಯದ ಭಾರಿ ಒತ್ತಡವಿದೆ. ನಾನು ಮೃತಪಟ್ಟರೆ, ಸಮುದಾಯ ವಿಭಜನೆ ಆಗುತ್ತದೆ. ಆದ್ದರಿಂದ, ನಾನು ಉಪವಾಸವನ್ನು ಅಮಾನತುಗೊಳಿಸಲು ನಿರ್ಧರಿಸಿದ್ದೇನೆ,ʼ ಎಂದರು. 

ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿ ಎಂಎಲ್ಸಿ ಪ್ರವೀಣ್ ದಾರೇಕರ್ ಮತ್ತು ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಅವರನ್ನು ಟೀಕಿಸಿದ ಜಾರಂಗೆ, ಅವರಿಬ್ಬರು ಮರಾಠ ಸಮುದಾಯಕ್ಕೆ ಮೀಸಲು ವಿರೋಧಿಸುತ್ತಿದ್ದಾರೆ. ಮರಾಠ ಸಮುದಾಯದವರು ಬಿಜೆಪಿಯನ್ನು ಸೋಲಿಸಬೇಕು ಎಂದು ಒತ್ತಾಯಿಸಿದರು. 

ಗೃಹ ಸಚಿವ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಳ ಮಟ್ಟದ ರಾಜಕೀಯ: ಸರ್ಕಾರಿ ಯಂತ್ರವನ್ನು ಬಳಸಿಕೊಂಡು, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಫಡ್ನವೀಸ್ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಆ.7ರಿಂದ 13ರ ನಡುವೆ ವಿವಿಧ ಜಿಲ್ಲೆಗಳಲ್ಲಿ ಮರಾಠ ಸಮುದಾಯದ ಸಭೆಗಳು ನಡೆಯಲಿದ್ದು,ಆನಂತರ ಆ.29ರಂದು ಸಭೆ ನಡೆಸಿ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಾರಂಗೆ ಘೋಷಿಸಿದರು.

Tags:    

Similar News