ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್‌ಗೆ ಜಾಮೀನು ನೀಡುವುದರಿಂದ, ತನಗೆ ಮತ್ತು ತಮ್ಮ ಕುಟುಂಬಕ್ಕೆ ಅಪಾಯವಿದೆ ಎಂದು ಎಎಪಿ ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಸೋಮವಾರ (ಮೇ 27) ಹೇಳಿದ್ದಾರೆ.
ಬಿಭವ್ ಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮಲಿವಾಲ್ ಈ ಹೇಳಿಕೆ ನೀಡಿದ್ದಾರೆ. ಬಿಭವ್ ಕುಮಾರ್ ಪರ ವಕೀಲರು ಪ್ರಕರಣದ ಕುರಿತು ದೆಹಲಿ ಪೊಲೀಸರ ತನಿಖೆಯನ್ನು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಎಎಪಿ ಸಂಸದೆ ವಿರುದ್ಧ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಕುಮಾರ್ ಪರ ವಕೀಲರು, ಮಲಿವಾಲ್ ವಿರುದ್ಧ ಅತಿಕ್ರಮ ಪ್ರವೇಶದ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದರು. ʻಅವರು ಹೇಳದೆ ಕೇಳದೆ ಮುಖ್ಯಮಂತ್ರಿಗಳ ನಿವಾಸ ಪ್ರವೇಶಿಸಿದರು. ಇದು ಅತಿಕ್ರಮಣಕ್ಕೆ ಸಮ. ಮುಖ್ಯಮಂತ್ರಿಗಳ ಮನೆಗೆ ಯಾರಾದರೂ ಹೀಗೆ ನುಗ್ಗಲು ಸಾಧ್ಯವೇ? ಮಲಿವಾಲ್ ಅವರನ್ನು ಹೊರಗೆ ಕಾಯಲು ಕೇಳಲಾಯಿತು. ಆದರೆ, ಅವರು ಸೆಕ್ಯುರಿಟಿ ವಲಯವನ್ನು ದಾಟಿದರು. ಸಂಸದ ಸ್ಥಾನ ನಿಮಗೆ ಇಷ್ಟ ಬಂದಿರುವುದನ್ನು ಮಾಡಲು ಪರವಾನಗಿ ನೀಡುವುದಿಲ್ಲ. ಇದು ಅತಿಕ್ರಮಣ: ಆದರೆ ಎಫ್‌ಐಆರ್ ನಮ್ಮ ವಿರುದ್ಧವಾಗಿದೆ. ಇದು ಯಾವ ರೀತಿಯ ತನಿಖೆ?,ʼ ಎಂದು ಪ್ರಶ್ನಿಸಿದರು.
'ಸಾಮಾನ್ಯ ವ್ಯಕ್ತಿಯಲ್ಲ: ವಿಚಾರಣೆಯ ಒಂದು ಹಂತದಲ್ಲಿ ಮಲಿವಾಲ್ ಅಳಲಾರಂಭಿಸಿದರು. ʻನನ್ನನ್ನು ಕೆಟ್ಟದಾಗಿ ಥಳಿಸಲಾಗಿದೆ. ಬಿಜೆಪಿಯ ಏಜೆಂಟ್ ಎಂದು ಎಎಪಿ ನಾಯಕರು ಹೇಳುತ್ತಿದ್ದಾರೆ. ಎಎಪಿ ಸಾಮಾಜಿಕ ಮಾಧ್ಯಮ ಟ್ರೋಲ್‌ಗಳ ದೊಡ್ಡ ಯಂತ್ರವನ್ನು ಹೊಂದಿದೆ. ಅವರು ಹೊರಗೆ ಬಂದರೆ ನನಗೆ ಮತ್ತು ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆಯಿದೆ,ʼ ಎಂದು ಹೇಳಿದರು.
ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ಮಾತನಾಡಿ,ʻಸಿಎಂ ಆರೋಪಿಯೊಂದಿಗೆ ತಿರುಗಾಡುತ್ತಿದ್ದಾರೆ. ಅವರನ್ನು ಲಕ್ನೋ ಮತ್ತು ಇತರ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ. ನನ್ನ ವಿರುದ್ಧ ನಿಲ್ಲುವಂತೆ ಪಕ್ಷದ ಎಲ್ಲ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ. ಬಿಭವ್ ಕುಮಾರ್ ಸಾಮಾನ್ಯ ವ್ಯಕ್ತಿಯಲ್ಲ; ಮಂತ್ರಿಗಳು ಕೂಡ ಪಡೆಯದ ಸೌಲಭ್ಯಗಳನ್ನು ಅವರು ಪಡೆಯುತ್ತಾರೆ,ʼ ಎಂದು ವಾದಿಸಿದರು.
ಪೊಲೀಸ್ ದೂರು ವಿಳಂಬ: ʻಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡುವಂತೆ ಅವರನ್ನು ಯಾರು ಕೇಳಿದರು,ʼ ಎಂದು ಪ್ರಶ್ನಿಸಿದ ಕುಮಾರ್ ಅವರ ವಕೀಲರು, ʻಅವರು ಪೂರ್ವಯೋಜಿತ ಆಲೋಚನೆಗಳೊಂದಿಗೆ ಬಂದಿದ್ದರು. ಬಿಭವ್ ಕುಮಾರ್ ಅವರೊಂದಿಗೆ ಮಾತನಾಡಿದ್ದೀರಾ ಎಂದು ಭದ್ರತಾ ಸಿಬ್ಬಂದಿಯನ್ನು ಪದೇಪದೇ ಕೇಳಿದರುʼ ಎಂದು ಹೇಳಿದರು.
ಮಲಿವಾಲ್ ಪೊಲೀಸ್ ದೂರು ನೀಡಲು ವಿಳಂಬ ಮಾಡಿದ್ದನ್ನು ಪ್ರಶ್ನಿಸಿದರು. ʻಅವರು ಅದೇ ದಿನ ದೂರು ದಾಖಲಿಸಲಿಲ್ಲ.ಮೂರು ದಿನಗಳ ನಂತರ ಮಾಡಿದರು. ಡಿಸಿಡಬ್ಲ್ಯೂ ಮುಖ್ಯಸ್ಥರಾಗಿದ್ದ ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರ ಹಕ್ಕು ಉಲ್ಲಂಘನೆಯಾಗಿದ್ದರೆ, ಆಗಲೇ ದೂರು ದಾಖಲಿಸಬೇಕಿತ್ತು. ಮೂರು ದಿನ ತಡವೇಕೆ?,ʼ ಎಂದು ಪ್ರಶ್ನಿಸಿದರು.
ಜಾಮೀನು ಅರ್ಜಿಗೆ ಪೊಲೀಸರ ವಿರೋಧ: ಕುಮಾರ್ ಜಾಮೀನು ಕೋರಿಕೆಯನ್ನು ವಿರೋಧಿಸಿದ ದೆಹಲಿ ಪೊಲೀಸ್ ಪರ ವಕೀಲರು,ʻನೀವು ಯಾವುದೇ ಪ್ರಚೋದನೆ ಇಲ್ಲದೆ ಒಬ್ಬ ಮಹಿಳೆಯನ್ನು ಹೊಡೆದಿದ್ದೀರಿ. ಅವರನ್ನು ಎಳೆದಾಡಿದಿರಿ. ಇಲ್ಲಿ ಉದ್ದೇಶವೇನು ಎಂದು ಪರಿಗಣಿಸಬೇಕಾದ ಅಗತ್ಯವಿಲ್ಲ. ನೀವು ಮಾಡಿದ್ದು ಶಿಷ್ಟಾಚಾರದ ಉಲ್ಲಂಘನೆ,ʼ ಎಂದು ವಾದಿಸಿದರು.
ಆದೇಶವನ್ನು ಕಾಯ್ದಿರಿಸಲಾಗಿದೆ: ಹಲ್ಲೆ ಪ್ರಕರಣದಲ್ಲಿ ಕುಮಾರ್ ಅವರ ಜಾಮೀನು ಅರ್ಜಿಯ ಆದೇಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜೆ 4 ಗಂಟೆಗೆ ಕಾಯ್ದಿರಿಸಿತು.