ಮಹಾರಾಷ್ಟ್ರ | ತರಂಗಗಳನ್ನು ಸೃಷ್ಟಿಸಿದ ಫಡ್ನವಿಸ್-ಉದ್ಧವ್ ಭೇಟಿ
ಫಡ್ನವಿಸ್ ಮತ್ತು ಠಾಕ್ರೆ ಒಟ್ಟಿಗೆ ಲಿಫ್ಟ್‌ಗಾಗಿ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರು ನಾಯಕರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುವುದು ಕಂಡುಬಂದಿದೆ.;
ವಿಧಾನ ಭವನದ ಲಿಫ್ಟ್‌ನಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ನಡುವಿನ ಆಕಸ್ಮಿಕ ಮುಖಾಮುಖಿಯಿಂದ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಅಲೆಗಳು ಸೃಷ್ಟಿಯಾಗಿವೆ.
ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನದಂದು ಫಡ್ನವೀಸ್ ಮತ್ತು ಠಾಕ್ರೆ ಒಟ್ಟಿಗೆ ಲಿಫ್ಟ್‌ಗಾಗಿ ಕಾಯುತ್ತಿದ್ದರು. ಉಭಯ ನಾಯಕರು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆನಂತರ ಸಂಭಾಷಣೆ ಬಗ್ಗೆ ಕೇಳಿದಾಗ ಠಾಕ್ರೆ ಹೇಳಿದರು, ಜನರು 'ನಿರಾಕರಣೆಗಳ ಹೊರತಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೆʼ ಎಂಬ ಹಾಡಿನ ಬಗ್ಗೆ ಯೋಚಿಸಿರಬೇಕು. ಆದರೆ, ಅಂಥದ್ದೇನೂ ಆಗುವುದಿಲ್ಲ.
ʻಲಿಫ್ಟ್‌ಗಳಿಗೆ ಕಿವಿಗಳಿಲ್ಲ. ಆದ್ದರಿಂದ ಲಿಫ್ಟ್‌ಗಳಲ್ಲಿ ಇಂತಹ ಸಭೆಗಳನ್ನು ನಡೆಸುವುದು ಉತ್ತಮ ಸಲಹೆ, ʼಎಂದು ಠಾಕ್ರೆ ಸುದ್ದಿಗಾರರೊಂದಿಗೆ ನಗುತ್ತ ಹೇಳಿದರು. ಇದೊಂದು ʻಅನಿರೀಕ್ಷಿತ ಭೇಟಿʼ ಎಂದು ಹೇಳಿದರು.
ಲಿಫ್ಟ್‌ನಲ್ಲಿದ್ದ ಬಿಜೆಪಿ ಶಾಸಕ ಪ್ರವೀಣ್ ದಾರೇಕರ್, ʻಲಿಫ್ಟ್ ತೆರೆದಾಗ ಫಡ್ನವೀಸ್ ಅವರು ಆಡಳಿತ ಪಕ್ಷದ ಕಚೇರಿಗಳ ಕಡೆಗೆ ನಡೆದರು ಮತ್ತು ಉದ್ಧವ್ ಅವರು ವಿರೋಧ ಪಕ್ಷದ ಕಚೇರಿಗೆ ನಡೆದರು. ಇದರರ್ಥ ಅವರಿಗೆ ಆಡಳಿತ ಪಕ್ಷವನ್ನು ಸೇರುವ ಉದ್ದೇಶವಿಲ್ಲ,ʼ.
ಬಿಜೆಪಿಯ ಹಿರಿಯ ಸಚಿವ ಚಂದ್ರಕಾಂತ್ ಪಾಟೀಲ್ ಅವರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಅವರ ಕಚೇರಿಯಲ್ಲಿ ಠಾಕ್ರೆ ಅವರನ್ನು ಭೇಟಿ ಮಾಡಿದರು.
ಪಾಟೀಲ್ ಅವರು ಠಾಕ್ರೆ ಅವರಿಗೆ ಹೂಗುಚ್ಛ ಮತ್ತು ಮಿಲ್ಕ್ ಚಾಕೊಲೇಟ್ ನೀಡಿದರು.ʻನಾಳೆ ನೀವು ಜನರಿಗೆ ಮತ್ತೊಂದು ಚಾಕೊಲೇಟ್ ನೀಡುತ್ತೀರಿ,ʼ ಎಂದು ಠಾಕ್ರೆ ಕುಟುಕಿದರು. ಶುಕ್ರವಾರ ರಾಜ್ಯ ಬಜೆಟ್ ಮಂಡನೆಯಾಗಲಿದೆ.
ಮುಂದಿನ ನಾಲ್ಕು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದು ಕೊನೆಯ ವಿಧಾನಮಂಡಲದ ಅಧಿವೇಶನ. ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ಮಹಾಯುತಿ ಮೈತ್ರಿಕೂಟವು ವಿಧಾನಸಭೆ ಚುನಾವಣೆಗೆ ಮುನ್ನ 'ಎಲ್ಲರಿಗೂ ಇಷ್ಟವಾಗುವ' ಬಜೆಟ್ ಮಂಡಿಸಲು ಯೋಜಿಸುತ್ತಿದೆ ಹಾಗೂ ಹಣಕಾಸು ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಜನಪ್ರಿಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ ಎನ್ನುವ ವದಂತಿಯಿದೆ.