Maharashtra | ಶಿವಾಜಿ ಸೀಮೆಯಲ್ಲಿ ಪ್ರಧಾನಿ ಮೇಲೆ ರಾಹುಲ್ ವಾಗ್ದಾಳಿ

ʻದೇಶ ಎಲ್ಲರಿಗೂ ಸೇರಿದ್ದು ಎಂಬುದು ಶಿವಾಜಿ ಮಹಾರಾಜರು ಜಗತ್ತಿಗೆ ನೀಡಿದ ಸಂದೇಶ. ಸಂವಿಧಾನ ಅವರ ಆದರ್ಶಗಳ ಪ್ರತೀಕವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು, ಸಮಾಜ ಸುಧಾರಕ ಶಾಹು ಮಹಾರಾಜರಂಥವರು ಇಲ್ಲದಿದ್ದರೆ ಸಂವಿಧಾನವೇ ಇರುತ್ತಿರಲಿಲ್ಲ,ʼ ಎಂದು ರಾಹುಲ್‌ ಗಾಂಧಿ ಹೇಳಿದರು

Update: 2024-10-05 11:26 GMT

ಜನರನ್ನು ಹೆದರಿಸಿ ಮತ್ತು ಸಂಸ್ಥೆಗಳನ್ನು ನಾಶಪಡಿಸಿದ ನಂತರ ಶಿವಾಜಿ ಮಹಾರಾಜರ ಮುಂದೆ ತಲೆಬಾಗಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೊಲ್ಹಾಪುರದಲ್ಲಿ ಶಿವಾಜಿ ಪ್ರತಿಮೆ ಅನಾವರಣಕ್ಕೆ ಮುನ್ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ಶಿವಾಜಿ ಪ್ರತಿಮೆ ಕುಸಿದಿದೆ. ಅಧಿಕಾರದಲ್ಲಿರುವವರ ಉದ್ದೇಶಗಳು ಮತ್ತು ಸಿದ್ಧಾಂತಗಳು ತಪ್ಪಾಗಿವೆ ಎಂದು ಆರೋಪಿಸಿದರು.

ದಕ್ಷಿಣ ಮಹಾರಾಷ್ಟ್ರದ ಕೊಲ್ಹಾಪುರವು ಶಿವಾಜಿ ಆಳ್ವಿಕೆ ನಡೆಸಿದ ವಿಸ್ತಾರವಾದ ಪ್ರದೇಶದ ಭಾಗವಾಗಿದೆ. ಆಗಸ್ಟ್ 30 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಮೋದಿ ಅವರು ಶಿವಾಜಿ ಪ್ರತಿಮೆ ಕುಸಿತಕ್ಕೆ ಹಾಗೂ ಕುಸಿತದಿಂದ ಗಾಯಗೊಂಡವರ ಕ್ಷಮೆಯಾಚಿಸಿದ್ದರು. ಆಗಸ್ಟ್ 26 ರಂದು ಕುಸಿದ 35 ಅಡಿ ಪ್ರತಿಮೆಯನ್ನು ಮೋದಿ ಅವರು ಡಿಸೆಂಬರ್ 4, 2023 ರಂದು ಅನಾವರಣಗೊಳಿಸಿದರು. 

ಸೈದ್ಧಾಂತಿಕ ಹೋರಾಟ: ʻದೇಶದಲ್ಲಿ ಎರಡು ಸಿದ್ಧಾಂತಗಳಿವೆ. ಒಂದು ಸಂವಿಧಾನವನ್ನು ರಕ್ಷಿಸುತ್ತದೆ. ಸಮಾನತೆ ಮತ್ತು ಏಕತೆ ಬಗ್ಗೆ ಮಾತನಾಡುತ್ತದೆ. ಅದು ಶಿವಾಜಿ ಮಹಾರಾಜರ ಸಿದ್ಧಾಂತ. ಎರಡನೆಯ ಸಿದ್ಧಾಂತವು ಸಂವಿಧಾನವನ್ನು ನಾಶಪಡಿಸುತ್ತದೆ. ಅವರು ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಾರೆ, ಜನರನ್ನು ಹೆದರಿಸುತ್ತಾರೆ; ಆನಂತರ ಶಿವಾಜಿ ಪ್ರತಿಮೆಗೆ ನಮಸ್ಕರಿಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ, ನೀವು ಶಿವಾಜಿ ಪ್ರತಿಮೆ ಮುಂದೆ ಪ್ರಾರ್ಥಿಸಿದಲ್ಲಿ, ಸಂವಿಧಾನವನ್ನು ರಕ್ಷಿಸಬೇಕಾಗುತ್ತದೆ,ʼ ಎಂದರು. 

ʻ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಿದ ಕೆಲವೇ ದಿನಗಳಲ್ಲಿ ಕುಸಿದುಬಿದ್ದಿತು. ಅವರ ಉದ್ದೇಶ ಸರಿಯಿಲ್ಲ. ಶಿವಾಜಿ ಮಹಾರಾಜರು ಹೋರಾಡಿದ ಸಿದ್ಧಾಂತದ ವಿರುದ್ಧ ಕಾಂಗ್ರೆಸ್ ಕೂಡ ಹೋರಾಡುತ್ತಿದೆ,ʼ ಎಂದರು.

ʻದೇಶ ಎಲ್ಲರಿಗೂ ಸೇರಿದ್ದು ಎಂಬುದು ಶಿವಾಜಿ ಅವರು ಜಗತ್ತಿಗೆ ನೀಡಿದ ಸಂದೇಶ. ಸಂವಿಧಾನ ಅವರ ಆದರ್ಶಗಳ ಪ್ರತೀಕವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು, ಸಮಾಜ ಸುಧಾರಕ ಶಾಹು ಮಹಾರಾಜರಂತಹವರು ಇಲ್ಲದಿದ್ದರೆ ಸಂವಿಧಾನವೇ ಇರುತ್ತಿರಲಿಲ್ಲ,ʼ ಎಂದರು.

ಕೊಲ್ಹಾಪುರಕ್ಕೆ ಆಗಮಿಸಿದ ರಾಹುಲ್ ಅವರನ್ನು ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಸೇರಿದಂತೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.

Tags:    

Similar News