ಲೋಕಸಭೆಗೆ ಕೋಡಿಕುನ್ನಿಲ್ ಸುರೇಶ್ ಆಯ್ಕೆಗೆ ನಕಾರ: ಕಾಂಗ್ರೆಸ್‌ ಟೀಕೆ; ವಿಪಕ್ಷ ನಾಯಕ ಮಾಡಿ ಎಂದ ಬಿಜೆಪಿ

ಅತ್ಯಂತ ಹಿರಿಯ ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸದೆ ಇರುವುದು ಸಂಪ್ರದಾಯಗಳ ಉಲ್ಲಂಘನೆ ಎಂದು ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಹೇಳಿದೆ.;

Update: 2024-06-22 06:18 GMT

ಹಿರಿಯ ಸಂಸದ ಕೋಡಿಕುನ್ನಿಲ್ ಸುರೇಶ್‌ ಅವರನ್ನು ಹಂಗಾಮಿ  ಸ್ಪೀಕರ್ ಆಗಿ ನೇಮಕ ಮಾಡದಿರುವ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಸುರೇಶ್ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವಂತೆ ಬಿಜೆಪಿ ತಿರುಗೇಟು ನೀಡಿದೆ. 

ಲೋಕಸಭೆಯ ಎಂಟು ಅವಧಿಯ ಅತ್ಯಂತ ಹಿರಿಯ ಸಂಸದ ಸುರೇಶ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡದಿರುವುದು ಸಂಪ್ರದಾಯಗಳ ಉಲ್ಲಂಘನೆ ಎಂದು ವಿಜಯನ್ ಮತ್ತು ಕಾಂಗ್ರೆಸ್ ಹೇಳಿದ್ದರು. ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು, ಸುರೇಶ್ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವ ಮೂಲಕ ಕೇಂದ್ರದ ನಿರ್ಧಾರವನ್ನು ಪ್ರತಿಭಟಿಸಬೇಕು ಎಂದು ಹೇಳಿದರು. 

ಮಾವೇಲಿಕರ ಕ್ಷೇತ್ರದ ಕಾಂಗ್ರೆಸ್ ಸಂಸದ ಮೇಧಾವಿ, ದಲಿತ ಸಮುದಾಯದ ಮತ್ತು ಕೇರಳದ ಸದಸ್ಯ. ರಾಹುಲ್ ಗಾಂಧಿ ಅವರ ಇಂದಿನ ಮತ್ತು ಪ್ರಿಯಾಂಕಾ ಗಾಂಧಿ ಅವರ ನಾಳೆಯ ಕುಟುಂಬದ ಸದಸ್ಯ ಎಂದು ಬಣ್ಣಿಸಿದರು. ʻಸುರೇಶ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕು. ಅವರನ್ನು ಹಂಗಾಮಿ ಸ್ಪೀಕರ್ ಮಾಡದಿರುವುದಕ್ಕೆ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ಈ ರೀತಿ ವ್ಯಕ್ತಪಡಿಸಬೇಕು,ʼ ಎಂದು ಸುರೇಂದ್ರನ್ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ. 

ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಸೇರಿದಂತೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಸುರೇಶ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಬೇಕಿತ್ತು ಎಂದು ಹೇಳಿದ್ದಾರೆ. ʻಕೇಂದ್ರದ ನಿರ್ಧಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಿದೆ. ಬಿಜೆಪಿ ಹಿಂದಿನಂತೆ ಸಂಸತ್ತಿನ ಕಾರ್ಯವಿಧಾನಗಳನ್ನು ಉಲ್ಲಂಘಿಸುತ್ತಿದೆ ಅಥವಾ ಸ್ವಂತ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದೆ ಎಂದು ಸುರೇಶ್ ಟೀಕಿಸಿದ್ದಾರೆ. 

ಕೇಂದ್ರದ ನಿರ್ಧಾರವನ್ನು ಟೀಕಿಸಿರುವ ಪಿಣರಾಯಿ ವಿಜಯನ್, ʻಮಾವೇಲಿಕರ ಕ್ಷೇತ್ರದ ಕಾಂಗ್ರೆಸ್ ಸಂಸದ ಸುರೇಶ್ ಅವರನ್ನು ಮೇಲ್ಜಾತಿ ರಾಜಕಾರಣದಿಂದ ಸ್ಥಾನಕ್ಕೆ ಪರಿಗಣಿಸಿಲ್ಲ ಎಂದು ಶಂಕಿಸುವವರಿಗೆ ಬಿಜೆಪಿ ಉತ್ತರವೇನು?,ʼ ಎಂದು ಪ್ರಶ್ನಿಸಿದ್ದಾರೆ.

ಏಳು ಅವಧಿಯ ಸಂಸದ ಮತ್ತು ಬಿಜೆಪಿ ನಾಯಕ ಭರ್ತೃಹರಿ ಮಹತಾಬ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.

ಹಂಗಾಮಿ ಸ್ಪೀಕರ್ 18 ನೇ ಲೋಕಸಭೆಯ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸುತ್ತಾರೆ ಮತ್ತು ಸ್ಪೀಕರ್ ಆಯ್ಕೆಯಾಗುವವರೆಗೆ ಸದನದ ಅಧ್ಯಕ್ಷತೆ ವಹಿಸುತ್ತಾರೆ. ಮೊದಲ ಅಧಿವೇಶನ ಜೂನ್ 24ರಂದು ಆರಂಭವಾಗಲಿದ್ದು, ಸದಸ್ಯರು ಜೂನ್ 24-25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 26 ರಂದು ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ

Tags:    

Similar News