ಲೋಕಸಭೆ ಚುನಾವಣೆ 2024| ಹಂತ 7| 5 ಗಂಟೆವರೆಗೆ ಶೇ.58.34 ಮತದಾನ; ಬಂಗಾಳದಲ್ಲಿ ಹಿಂಸಾಚಾರ
7 ನೇ ಹಂತದಲ್ಲಿ ಪಂಜಾಬ್‌ನ 13, ಹಿಮಾಚಲದ 4, ಯುಪಿ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6 ಮತ್ತು ಜಾರ್ಖಂಡದ 3 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.;
ಏಳನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆಯಲ್ಲಿ ಸಂಜೆ 5 ಗಂಟೆವರೆಗೆ ಶೇ.58.34 ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವಿನ ಹಿಂಸಾಚಾರ ನಡೆದಿದೆ. ಹಲವು ಬೂತ್‌ಗಳಲ್ಲಿ ಇವಿಎಂ ದೋಷದ ದೂರುಗಳು ಕೇಳಿಬಂದಿವೆ.
ಜಾರ್ಖಂಡ್‌ನಲ್ಲಿ ಶೇ.67.95, ಉತ್ತರ ಪ್ರದೇಶ ಶೇ. 54, ಪಶ್ಚಿಮ ಬಂಗಾಳ ಶೇ.69.89, ಬಿಹಾರ ಶೇ. 48.86, ಹಿಮಾಚಲ ಪ್ರದೇಶ ಶೇ.66.56, ಪಂಜಾಬ್ ಶೇ.55.20, ಚಂಡೀಗಢದಲ್ಲಿ ಶೇ.62.80 ಹಾಗೂ ಒಡಿಶಾದಲ್ಲಿ ಶೇ.62.46ರಷ್ಟು ಮತದಾನವಾಗಿದೆ. ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ.66.14, ಶೇ.66.71, ಶೇ.65.68, ಶೇ.69.16, ಶೇ.62.2 ಮತ್ತು ಶೇ.63.36ರಷ್ಟು ಮತದಾನವಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಪಶ್ಚಿಮ ಬಂಗಾಳ, ವಿಶೇಷವಾಗಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದೆ. ಅಲ್ಲಿ ಗುಂಪೊಂದು ಬೂತ್‌ಗೆ ನುಗ್ಗಿ ಇವಿಎಂ ಯಂತ್ರವನ್ನು ತೆಗೆದುಕೊಂಡು ಹೋಗಿದೆ. ಬಳಿಕ ಸಮೀಪದ ಕೆರೆಯಲ್ಲಿ ಯಂತ್ರ ಪತ್ತೆಯಾಗಿದೆ. ಜಾದವ್‌ಪುರ ಕ್ಷೇತ್ರದಲ್ಲಿ ಟಿಎಂಸಿ, ಐಎಸ್‌ಎಫ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಮತಗಟ್ಟೆ ಏಜೆಂಟರನ್ನು ಬೂತ್‌ಗಳಿಗೆ ಪ್ರವೇಶಿಸದಂತೆ ತಡೆದು, ಘರ್ಷಣೆ ನಡೆಸಿವೆ.
ಸಂದೇಶಖಾಲಿಯಲ್ಲಿ ಚುನಾವಣೆ ಅವ್ಯವಹಾರದ ಆರೋಪದ ಮೇಲೆ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. ಟಿಎಂಸಿ ಗೂಂಡಾಗಳು ಜನರನ್ನು ಮತದಾನ ಮಾಡದಂತೆ ತಡೆದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಆರೋಪಿಸಿದ್ದಾರೆ. ಟಿಎಂಸಿ ಪ್ರತ್ಯಾರೋಪ ಮಾಡಿದ್ದು, ರೇಖಾ ಪಾತ್ರ ಮತ್ತು ಬಿಜೆಪಿ ಗೂಂಡಾಗಳು ಚುನಾವಣೆ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಸಂತಿ ಎಕ್ಸ್‌ಪ್ರೆಸ್‌ವೇ ಯಲ್ಲಿ ಎರಡೂ ಗುಂಪುಗಳು ಹೊಡೆದಾಡಿಕೊಂಡಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಶೆಲ್ ಸಿಡಿಸಿದರು.
ಕೊನೆಯ ಹಂತದ ಮತದಾನ: ಸುಮಾರು 5.24 ಕೋಟಿ ಪುರುಷರು, 4.82 ಕೋಟಿ ಮಹಿಳೆಯರು ಮತ್ತು 3,574 ತೃತೀಯಲಿಂಗಿ ಮತದಾರರು ಸೇರಿದಂತೆ 10.06 ಕೋಟಿ ನಾಗರಿಕರು 7ನೇ ಹಂತದಲ್ಲಿ ಮತದಾನಕ್ಕೆ ಅರ್ಹರಾಗಿದ್ದರು. ಪಂಜಾಬ್‌ನ ಎಲ್ಲಾ 13 ಕ್ಷೇತ್ರ , ಹಿಮಾಚಲ ಪ್ರದೇಶದ ನಾಲ್ಕು, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ ಒಂಬತ್ತು, ಬಿಹಾರದ ಎಂಟು, ಒಡಿಶಾದ 6 ಮತ್ತು ಚಂಡೀಗಢ ಹೊರತುಪಡಿಸಿ, ಜಾರ್ಖಂಡ್‌ನ ಮೂರು ಸ್ಥಾನಗಳಲ್ಲಿ ಮತದಾನ ನಡೆದಿದೆ. ಒಡಿಶಾದ ಉಳಿದ 42 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಹಿಮಾಚಲ ಪ್ರದೇಶದ ಆರು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಏಕಕಾಲದಲ್ಲಿ ನಡೆದಿದೆ.
ಪ್ರಮುಖ ಅಭ್ಯರ್ಥಿಗಳು: 904 ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖ ಅಭ್ಯರ್ಥಿಗಳೆಂದರೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಮತ್ತು ನಟಿ ಕಂಗನಾ ರನೌತ್.
7ನೇ ಹಂತವು ಏಪ್ರಿಲ್ 19 ರಂದು ಪ್ರಾರಂಭವಾದ ಮ್ಯಾರಥಾನ್ ಮತದಾನ ಪ್ರಕ್ರಿಯೆಯ ಅಂತ್ಯ. ಮೊದಲ 6 ಹಂತಗಳಲ್ಲಿ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 486 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗೂ ಮತದಾನ ನಡೆದಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಯ ಮತ ಎಣಿಕೆ ಜೂನ್ 2 ರಂದು ನಡೆಯಲಿದೆ.
ಚುನಾವಣೆ ಆಯೋಗದ ಮಾರ್ಗಸೂಚಿಗಳ ಪ್ರಕಾರ, ದೂರದರ್ಶನ ಚಾನೆಲ್‌ಗಳು ಮತ್ತು ಸುದ್ದಿವಾಹಿನಿಗಳು ಜೂನ್ 1 ರಂದು ಸಂಜೆ 6.30 ರ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳನ್ನುಪ್ರಸಾರ ಮಾಡಬಹುದು.
ಇಂದು ಚುನಾವಣೆ ಎಲ್ಲೆಲ್ಲಿ?: ಉತ್ತರ ಪ್ರದೇಶ- 80 ರಲ್ಲಿ 13 ಕ್ಷೇತ್ರ (ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ, ಬನ್ಸ್‌ಗಾಂವ್, ಘೋಸಿ, ಸೇಲಂಪುರ್, ಬಲ್ಲಿಯಾ, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ರಾಬರ್ಟ್ಸ್‌ಗಂಜ್)
ಪಂಜಾಬ್: ಎಲ್ಲ 13 ಕ್ಷೇತ್ರಗಳು (ಗುರುದಾಸ್‌ಪುರ್, ಅಮೃತಸರ, ಖಾದೂರ್ ಸಾಹಿಬ್, ಜಲಂಧರ್, ಹೋಶಿಯಾರ್‌ಪುರ್, ಆನಂದಪುರ ಸಾಹಿಬ್, ಲೂಧಿಯಾನ, ಫತೇಘರ್ ಸಾಹಿಬ್, ಫರೀದ್‌ಕೋಟ್, ಫಿರೋಜ್‌ಪುರ, ಬಟಿಂಡಾ, ಸಂಗ್ರೂರ್, ಪಟಿಯಾಲ)
ಹಿಮಾಚಲ ಪ್ರದೇಶ: ಎಲ್ಲ 4 ಕ್ಷೇತ್ರ (ಕಾಂಗ್ರಾ, ಮಂಡಿ, ಹಮೀರ್‌ಪುರ, ಶಿಮ್ಲಾ). ವಿಧಾನಸಭೆಗೆ ಉಪ ಚುನಾವಣೆ - 6 (ಗ್ಯಾಗ್ರೇಟ್, ಧರ್ಮಶಾಲಾ, ಬರ್ಸರ್, ಲಾಹೌಲ್ ಮತ್ತು ಸ್ಪಿತಿ, ಕುಟ್ಲೆಹಾರ್ ಮತ್ತು ಸುಜಾನ್‌ಪುರ್)
ಬಿಹಾರ: 40 ರಲ್ಲಿ 8 ಕ್ಷೇತ್ರ (ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರ್ರಾ, ಬಕ್ಸರ್, ಸಸಾರಂ, ಕರಕಟ್, ಜಹಾನಾಬಾದ್, ನಳಂದಾ)
ಜಾರ್ಖಂಡ್: 11 ರಲ್ಲಿ 3 (ರಾಜಮಹಲ್, ದುಮ್ಕಾ, ಗೊಡ್ಡಾ)
ಒಡಿಶಾ: 21 ರಲ್ಲಿ 6 (ಮಯೂರ್‌ಭಂಜ್, ಬಾಲಸೋರ್, ಭದ್ರಕ್, ಜಾಜ್‌ಪುರ್, ಕೇಂದ್ರಪಾರ, ಜಗತ್‌ಸಿಂಗ್‌ಪುರ)
ಪಶ್ಚಿಮ ಬಂಗಾಳ: 42 ರಲ್ಲಿ 9 (ದಮ್ ದಮ್, ಬರಾಸತ್, ಬಸಿರ್‌ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‌ಪುರ, ಕೋಲ್ಕತ್ತಾ ದಕ್ಷಿಣ, ಕೋಲ್ಕತ್ತಾ ಉತ್ತರ)