ಲಖೀಂಪುರ ಖೇರಿ ಹಿಂಸಾಚಾರ: ಆಶಿಶ್ ಮಿಶ್ರಾಗೆ ಸುಪ್ರೀಂ ಜಾಮೀನು

ಕಳೆದ ವರ್ಷ ಜನವರಿ 25 ರಂದು ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.;

Update: 2024-07-22 10:07 GMT

ಹೊಸದಿಲ್ಲಿ, ಜು.22: 2021ರಲ್ಲಿ ಎಂಟು ಜೀವಗಳನ್ನು ಬಲಿ ತೆಗೆದುಕೊಂಡ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ. ಆದರೆ, ದೆಹಲಿ ಅಥವಾ ಲಕ್ನೋಗೆ ಅವರ ಪ್ರವೇಶವನ್ನು ನಿರ್ಬಂಧಿಸಿದೆ.

ಸುಪ್ರೀಂ ಕೋರ್ಟ್ 2023ರ ಜನವರಿ 25 ರಂದು ʻದುರದೃಷ್ಟಕರ ಘೋರ ಹಿಂಸಾಚಾರ ಘಟನೆʼಯಲ್ಲಿ ಆಶಿಶ್ ಮಿಶ್ರಾಗೆ ಮಧ್ಯಂತರ ಜಾಮೀನು ನೀಡಿತ್ತು. 

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಪ್ರಕರಣದಲ್ಲಿ ರೈತರಿಗೆ ಜಾಮೀನು ನೀಡಿತು ಮತ್ತು ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣೆ ನ್ಯಾಯಾಲಯಕ್ಕೆ ಸೂಚಿಸಿತು.

ʻಪರಿಸ್ಥಿತಿಯನ್ನು ಪರಿಗಣಿಸಿ, ಮಧ್ಯಂತರ ಆದೇಶವನ್ನು ಪೂರ್ಣಗೊಳಿಸಲಾಗಿದೆ .117 ಸಾಕ್ಷಿಗಳಲ್ಲಿ ಏಳು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ವಿಚಾರಣೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು,ʼ ಎಂದಿದೆ. 

ʻಬಾಕಿ ಪ್ರಕರಣಗಳು ಮತ್ತು ತುರ್ತು ವಿಚಾರಣೆ ಅಗತ್ಯವಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ವೇಳಾಪಟ್ಟಿ ನಿಗದಿಪಡಿಸಬೇಕೆಂದು ನಾವು ವಿಚಾರಣೆ ನ್ಯಾಯಾಲಯಕ್ಕೆ ನಿರ್ದೇಶಿಸುತ್ತೇವೆ,ʼ ಎಂದು ಪೀಠ ಹೇಳಿದೆ. 

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ, ರೈತರು ಪ್ರತಿಭಟನೆ ನಡೆಸಿದಾಗ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಎಸ್‌ಯುವಿ(ಸ್ಪೋರ್ಟ್ಸ್ ಯುಟಿಲಿಟಿ ವಾಹನ)ವನ್ನು ಚಲಾಯಿಸಿ, ನಾಲ್ವರು ರೈತರನ್ನು ಕೊಲ್ಲಲಾಗಿದೆ. ಕೋಪಗೊಂಡ ರೈತರು ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದರು ಎಂದು ಆರೋಪಿಸಲಾಗಿದೆ. ಹಿಂಸಾಚಾರದಲ್ಲಿ ಪತ್ರಕರ್ತರೊಬ್ಬರು ಸಾವಿಗೀಡಾಗಿದ್ದರು.

Tags:    

Similar News