ಕೋಲ್ಕತ್ತಾ: ವೈದ್ಯೆ ಅತ್ಯಾಚಾರ-ಕೊಲೆ; ಪ್ರಿನ್ಸಿಪಾಲ್ ರಾಜೀನಾಮೆ

ವೈದ್ಯೆಯ ಅತ್ಯಾಚಾರ-ಕೊಲೆಯನ್ನು ಪ್ರತಿಭಟಿಸಿ ಕಿರಿಯ ವೈದ್ಯರು, ಇಂಟರ್ನಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸತತ ನಾಲ್ಕನೇ ದಿನವೂ ಮುಷ್ಕರ ಮುಂದುವರಿಸಿದ್ದಾರೆ. ಇದರಿಂದ ಪಶ್ಚಿಮ ಬಂಗಾಳದಾದ್ಯಂತ ಆಸ್ಪತ್ರೆ ಸೇವೆಗಳು ಅಸ್ತವ್ಯಸ್ತಗೊಂಡಿವೆ.;

Update: 2024-08-12 07:34 GMT

ಕ್ಯಾಂಪಸ್‌ನಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಭಾರಿ ಪ್ರತಿಭಟನೆಗಳ ನಡುವೆ ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರು ಸೋಮವಾರ (ಆಗಸ್ಟ್ 12) ರಾಜೀನಾಮೆ ನೀಡಿದ್ದಾರೆ.

ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ಹಾಗೂ ಆಕೆಯ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಒತ್ತಾಯಿಸಿ ಕಿರಿಯ ವೈದ್ಯರು, ಇಂಟರ್ನ್‌ಗಳು ಮತ್ತು ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳು ನಾಲ್ಕನೇ ದಿನವೂ ಮುಷ್ಕರ ಮುಂದುವರಿಸಿದ್ದು, ಪಶ್ಚಿಮ ಬಂಗಾಳದಾದ್ಯಂತ ಆಸ್ಪತ್ರೆ ಸೇವೆಗಳು ಅಸ್ತವ್ಯಸ್ತಗೊಂಡಿವೆ.

ಕಳೆದ ಮೂರು ದಿನದಿಂದ ತುರ್ತು ಕರ್ತವ್ಯಗಳಿಗೆ ಹಾಜರಾಗುತ್ತಿದ್ದ ಕಿರಿಯ ವೈದ್ಯರು,  ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ನಿಷ್ಪಕ್ಷಪಾತ ತನಿಖೆಗೆ ಆಗ್ರಹ: ʻನಮ್ಮ ಸಹೋದ್ಯೋಗಿಯ ಹತ್ಯೆ ಬಗ್ಗೆ ಸಿಬಿಐ ಅಥವಾ ಮ್ಯಾಜಿಸ್ಟ್ರೇಟ್‌ ಅವರಿಂದ ನಿಷ್ಪಕ್ಷಪಾತ ತನಿಖೆ ನಾವು ಬಯಸುತ್ತೇವೆ. ಪೊಲೀಸ್ ತನಿಖೆಯಿಂದ ತೃಪ್ತರಾಗಿಲ್ಲ. ನ್ಯಾಯ ಸಿಗುವವರೆಗೂ ಮತ್ತು ವೈದ್ಯರು, ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿ ರುವವರಿಗೆ ಭದ್ರತೆಯನ್ನು ಖಚಿತಪಡಿಸುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ,ʼ ಎಂದು ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರೊಬ್ಬರು ಹೇಳಿದರು.

ಶುಕ್ರವಾರ (ಆಗಸ್ಟ್ 9) ಬೆಳಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ವೈದ್ಯೆಯ ಶವ ಪತ್ತೆಯಾಗಿದೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಶನಿವಾರ (ಆಗಸ್ಟ್ 10) ಬಂಧಿಸಲಾಗಿದೆ.

ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಎಲ್ಲ ಹಿರಿಯ ವೈದ್ಯರ ರಜೆಯನ್ನು ರದ್ದುಗೊಳಿಸಿದೆ. ʻಹಿರಿಯ ವೈದ್ಯರು ಕರ್ತವ್ಯದಲ್ಲಿದ್ದಾರೆ ಮತ್ತು ಅವರು ರೋಗಿಗಳ ಒಳಹರಿವನ್ನು ನಿಭಾಯಿಸುತ್ತಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಕೆಲಸ ಮಾಡಲು ಅವರಿಗೆ ಸೂಚನೆ ನೀಡಲಾಗಿದೆ,ʼ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಧರಣಿನಿರತರಿಗೆ ಬೆಂಬಲ: ಧರಣಿ ನಿರತ ವೈದ್ಯರಿಗೆ ದೇಶದ ನಾನಾ ಭಾಗಗಳಿಂದ ಬೆಂಬಲ ವ್ಯಕ್ತವಾಗಿದೆ. ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಫೋರ್ಡಾ) ಮುಷ್ಕರವನ್ನು ಅನುಮೋದಿಸಿದ್ದು, ಸೋಮವಾರ ರಾಷ್ಟ್ರವ್ಯಾಪಿ ವೈದ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಕರೆ ನೀಡಿದೆ.

ಪಶ್ಚಿಮ ಬಂಗಾಳ ವೈದ್ಯರ ವೇದಿಕೆಯು ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ತನಿಖೆಗೆ ನಿಷ್ಪಕ್ಷಪಾತ ತನಿಖೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದೆ. ರಾಜ್ಯದಾದ್ಯಂತ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ ಭದ್ರತೆ ಮತ್ತು ಅಪರಾಧಿಗೆ ಮರಣದಂಡನೆ ವಿಧಿಸಬೇಕೆಂದು ಸಮಿತಿ ಒತ್ತಾಯಿಸಿದೆ.

ಅನಿರ್ದಿಷ್ಟಾವಧಿ ಮುಷ್ಕರ : ದೆಹಲಿಯ ಹತ್ತು ಸರ್ಕಾರಿ ಆಸ್ಪತ್ರೆಗಳು ಸೋಮವಾರದಿಂದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು, ಆರ್‌ಎಂಎಲ್ ಆಸ್ಪತ್ರೆ, ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು, ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆ, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ, ಐಎಚ್‌ಬಿಎಎಸ್, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ರಾಷ್ಟ್ರೀಯ ಟಿಬಿ ಹಾಗೂ ಉಸಿರಾಟದ ಕಾಯಿಲೆಗಳ ಆಸ್ಪತ್ರೆ ಮುಷ್ಕರದಲ್ಲಿ ಭಾಗವಹಿಸಿವೆ. ಮುಷ್ಕರ ಇಂದು 9 ಗಂಟೆಗೆ ಪ್ರಾರಂಭವಾಯಿತು ಎಂದು ನಿವಾಸಿ ವೈದ್ಯರ ಸಂಘ(ಆರ್‌ ಡಿಎ) ಹೇಳಿದೆ.

ಮುಷ್ಕರದ ಸಮಯದಲ್ಲಿ ಹೊರರೋಗಿ ವಿಭಾಗ, ಆಪರೇಷನ್ ಥಿಯೇಟರ್‌ ಮತ್ತು ವಾರ್ಡಿನಲ್ಲಿ ಸೇವೆಗಳನ್ನು ಮುಚ್ಚಲಾಗುವುದು. ಆದರೆ, ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತವೆ ಎಂದು ಆರ್‌ಡಿಎ ಹೇಳಿದೆ. 

ʻಆರ್‌.ಜಿ. ಕರ್‌ ಆಸ್ಪತ್ರೆಯ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ಆಗಸ್ಟ್ 12 ರ ಸೋಮವಾರದಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ನಮ್ಮ ಧ್ವನಿ ಕೇಳುವಂತೆ ಮಾಡಲು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದು ಅವಶ್ಯ,ʼ ಎಂದು ಹೇಳಿಕೆ ತಿಳಿಸಿದೆ.

Tags:    

Similar News