ಕೆನೆ ಪದರ ವಿರುದ್ಧ ಸರ್ಕಾರ ಕಾನೂನು ತರಬೇಕಿತ್ತು: ಖರ್ಗೆ
ಎಸ್‌ಸಿ-ಎಸ್‌ಟಿಗಳಿಗೆ ಉದ್ಯೋಗ ಸಿಗುತ್ತಿಲ್ಲ; ಎಸ್‌ಸಿ ಸಮುದಾಯಗಳು ಉನ್ನತ ಹುದ್ದೆಯಲ್ಲಿಲ್ಲ.ಎಸ್‌ಸಿ- ಎಸ್‌ಟಿಗಳನ್ನು ಕೆನೆಪದರದಲ್ಲಿ ವರ್ಗೀಕರಿಸುವ ಮೂಲಕ ಅವರನ್ನು ಹತ್ತಿಕ್ಕಲು ಪ್ರಯತ್ನ ನಡೆದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
'ಕೆನೆ ಪದರ' ಪರಿಕಲ್ಪನೆ ಕುರಿತ ಸುಪ್ರೀಂ ಕೋರ್ಟಿನ ತೀರ್ಪನ್ನು ರದ್ದುಗೊಳಿಸಲು ಸರ್ಕಾರ ಸಂಸತ್ತಿನಲ್ಲಿ ಶಾಸನವನ್ನು ತರಬೇಕಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ (ಆಗಸ್ಟ್ 10) ಹೇಳಿದರು.
ಪ್ರಾಯೋಗಿಕ ದತ್ತಾಂಶವನ್ನು ಆಧರಿಸಿ, ಎಸ್‌ಸಿ ಪಟ್ಟಿಯೊಳಗಿನ ಸಮುದಾಯಗಳನ್ನು ರಾಜ್ಯ ಸರ್ಕಾರಗಳು ಉಪ ವರ್ಗೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಈ ತಿಂಗಳ ಬಹುಮತದ ತೀರ್ಪಿನಲ್ಲಿ ಹೇಳಿದೆ. ಪರಿಶಿಷ್ಟ ಜಾತಿ/ಪಂಗಡಗಳಲ್ಲಿನ ಕೆನೆಪದರವನ್ನು ಗುರುತಿಸುವ ನೀತಿಯನ್ನು ರಾಜ್ಯಗಳು ರೂಪಿಸಬೇಕು ಮತ್ತು ಅವರಿಗೆ ಮೀಸಲು ಪ್ರಯೋಜನವನ್ನು ನಿರಾಕರಿಸಬೇಕು ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದರು.
'ಕೆನೆ ಪದರ' ದ ಸಮಸ್ಯೆ: ಕೆನೆ ಪದರ ತರುವ ಮೂಲಕ ಯಾರಿಗೆ ಲಾಭವಾಗಬೇಕೆಂದು ನೀವು ಬಯಸುತ್ತೀರಿ? ಒಂದು ಕಡೆ ಕೆನೆಪದರದ ಮೂಲಕ ಅಸ್ಪೃಶ್ಯರನ್ನು ನಿರಾಕರಿಸುತ್ತಿದ್ದೀರಿ ಮತ್ತು ಸಾವಿರಾರು ವರ್ಷಗಳಿಂದ ಸವಲತ್ತು ಅನುಭವಿಸುತ್ತಿರುವವರಿಗೆ ನೀಡುತ್ತಿದ್ದೀರಿ. ಇದನ್ನು ನಾನು ಖಂಡಿಸುತ್ತೇನೆ ಎಂದು ಖರ್ಗೆ ಹೇಳಿದರು.
ನ್ಯಾಯಮೂರ್ತಿಗಳು ಎತ್ತಿರುವ ಕೆನೆ ಪದರದ ಉಲ್ಲೇಖವು ಎಸ್‌ಸಿ-ಎಸ್‌ಟಿಗಳ ಬಗ್ಗೆ ಅವರು ಗಂಭೀರವಾಗಿ ಯೋಚಿಸಿಲ್ಲ ಎಂಬುದನ್ನು ತೋರಿಸುತ್ತದೆ. ಅಸ್ಪೃಶ್ಯತೆ ಇರುವವರೆಗೂ ಮೀಸಲು ಇರಲೇಬೇಕು ಮತ್ತು ಇರುತ್ತದೆ. ಅದಕ್ಕಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.
ಬಿಜೆಪಿಯ ದ್ವಂದ್ವ: ಬಿಜೆಪಿ ಮೀಸಲು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಸರ್ಕಾರ ಸಾರ್ವಜನಿಕ ವಲಯದ ಉದ್ಯೋಗಗಳನ್ನು ಖಾಸಗೀಕರಣಗೊಳಿಸಿದೆ. ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ, ನೇಮಕ ಮಾಡುತ್ತಿಲ್ಲ ಎಂದು ಖರ್ಗೆ ಹೇಳಿದರು.
ಎಸ್‌ಸಿ-ಎಸ್‌ಟಿಗಳಿಗೆ ಉದ್ಯೋಗ ಸಿಗುತ್ತಿಲ್ಲ.ಯಾವುದೇ ಎಸ್‌ಸಿಗಳು ಉನ್ನತ ಹುದ್ದೆಯಲ್ಲಿಲ್ಲ, ಎಸ್‌ಸಿ-ಎಸ್‌ಟಿಗಳನ್ನು ಕೆನೆ ಪದರದಲ್ಲಿ ವರ್ಗೀಕರಿಸುವ ಮೂಲಕ ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಹಣವಿದ್ದರೂ ತಾರತಮ್ಯ ತಪ್ಪುವುದಿಲ್ಲ: ʻನ್ಯಾಯಾಲಯದ ತೀರ್ಪು ಆಶ್ಚರ್ಯ ತಂದಿದೆ. ಹಣ ಮತ್ತು ಉನ್ನತ ಹುದ್ದೆ ಇದ್ದರೂ, ಎಸ್‌ಸಿ- ಎಸ್‌ಟಿ ಸಮುದಾಯದವರು ತಾರತಮ್ಯ ಎದುರಿಸುತ್ತಿದ್ದಾರೆ. ಎಲ್ಲರೂ ಒಂದಾಗಿ, ಈ ತೀರ್ಪಿಗೆ ಮನ್ನಣೆ ಸಿಗದಂತೆ ನೋಡಿಕೊಳ್ಳಬೇಕು. ಈ ವಿಷಯ ಮತ್ತೆ ಪ್ರಸ್ತಾಪಿಸಬಾರದು ಎಂದು ಮನವಿ ಮಾಡಲು ಬಯಸುತ್ತೇನೆ,ʼ ಎಂದು ಹೇಳಿದರು.
ʻಉಪ ವರ್ಗೀಕರಣಕ್ಕೆ ಸಂಬಂಧಿಸಿದ ಇತರ ವಿಷಯಗಳನ್ನು ಕಾಂಗ್ರೆಸ್ ಚರ್ಚಿಸುತ್ತಿದ್ದು, ವಿವಿಧ ರಾಜ್ಯಗಳ ಮುಖಂಡರೊಂದಿಗೆ ಚರ್ಚಿಸಿದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು,ʼ ಎಂದು ಹೇಳಿದರು.
ಸಂಸತ್ತು ಕಾನೂನು ತರಲಿ: ʻಎಸ್‌ಸಿ-ಎಸ್‌ಟಿಗಳ ರಕ್ಷಣೆಗೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ನಾವು ಇದನ್ನು ಮುಟ್ಟುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಓದಿದ್ದೇನೆ. ಕೆನೆಪದರ ಪರಿಕಲ್ಪನೆ ಕಾರ್ಯರೂಪಕ್ಕೆ ಬರದಂತೆ ನೋಡಿಕೊಳ್ಳಲು ಅವರು ಸಂಸತ್ತಿನಲ್ಲಿ ಕಾನೂನು ತರಬೇಕು ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಬೇಕು,ʼ ಎಂದು ಹೇಳಿದರು.
ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಎಸ್‌ಸಿ-ಎಸ್‌ಟಿ ಮೀಸಲಿನಲ್ಲಿ ಕೆನೆಪದರಕ್ಕೆ ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಸಚಿವ ಸಂಪುಟ ಪ್ರತಿಪಾದಿಸಿದ ಒಂದು ದಿನದ ನಂತರ ಖರ್ಗೆ ಅವರ ಹೇಳಿಕೆ ಬಂದಿದೆ.