18ನೇ ಲೋಕಸಭೆಗೆ ಮೊದಲ ಬಾರಿಗೆ ಪ್ರವೇಶ ಪಡೆದಿರುವ ಬಾಲಿವುಡ್ ತಾರೆ ಕಂಗನಾ ರಣಾವತ್ ಮತ್ತು ಟಿವಿ ನಟ ಅರುಣ್ ಗೋವಿಲ್ ಅವರು ತಾರೆ-ರಾಜಕಾರಣಿಗಳಾದ ಹೇಮಾಮಾಲಿನಿ, ಮನೋಜ್ ತಿವಾರಿ ಅವರನ್ನು ಸೇರಿಕೊಳ್ಳ ಲಿದ್ದಾರೆ.
ಬಾಲಿವುಡ್ ನಟಿ ಮತ್ತು ಪ್ರಧಾನಿಯವರ ದೀರ್ಘಕಾಲದ ಬೆಂಬಲಿಗರಾದ ಕಂಗನಾ ರನೌತ್ ಅವರು ತವರು ರಾಜ್ಯ ಹಿಮಾಚಲ ಪ್ರದೇಶದ ಮಂಡಿಯಿಂದ ಚುನಾಯಿತರಾಗಿದ್ದಾರೆ. ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ದಂಪತಿ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರನ್ನು ಸೋಲಿಸಿದ್ದಾರೆ. ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ ವಿವಾದಗಳಲ್ಲಿ ಸಿಲುಕಿಕೊಳ್ಳುವ ಕಂಗನಾ, ಸಾರ್ವಜನಿಕ ಸೇವೆಗೆ ತನ್ನ ಜೀವನ ಮುಡಿಪಾಗಿಡುವುದಾಗಿ ಹೇಳಿಕೊಂಡಿದ್ದರು.
ʻರಾಮಾಯಣʼ ಧಾರಾವಾಹಿಯ ನಟ ಅರುಣ್ ಗೋವಿಲ್, ಉತ್ತರ ಪ್ರದೇಶದ ಮೀರತ್‌ನಲ್ಲಿ ಬಿಜೆಪಿಯಿಂದ ಕಣಕ್ಕಿಳಿದು, ಸಮಾಜವಾದಿ ಪಕ್ಷದ ಸುನೀತಾ ಯಾದವ್ ಅವರನ್ನು ಸೋಲಿಸಿದರು. ಗೆಲುವಿನ ಅಂತರ 10,585 ಮತ. ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರು. ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಅಭ್ಯರ್ಥಿ ವಿ.ಎಸ್.ಸುನೀಲ್‌ಕುಮಾರ್ ಅವರನ್ನು ಸೋಲಿಸಿ, ರಾಜ್ಯದಲ್ಲಿ ಬಿಜೆಪಿಯ ಮೊದಲ ಸಂಸದರಾದರು. ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಂಗ ಗೀತಾ ಅವರನ್ನು ಸೋಲಿಸಿದ್ದಾರೆ.
ಪರಿಚಿತ ಮುಖಗಳು: ಖ್ಯಾತ ನಟಿ ಹೇಮಾಮಾಲಿನಿ ಅವರು ಉತ್ತರ ಪ್ರದೇಶದ ಮಥುರಾದಲ್ಲಿ ಕಾಂಗ್ರೆಸ್‌ನ ಮುಖೇಶ್ ಧಂಗರ್ ವಿರುದ್ಧ ಗೆಲುವು ಸಾಧಿಸಿ, ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಭೋಜಪುರಿ ತಾರೆ-ಗಾಯಕ ಮನೋಜ್ ತಿವಾರಿ ಅವರು ಈಶಾನ್ಯ ದೆಹಲಿ ಕ್ಷೇತ್ರ ದಲ್ಲಿ ಯುವ ನಾಯಕ ಕಾಂಗ್ರೆಸ್ ನ ಕನ್ಹಯ್ಯ ಕುಮಾರ್ ಅವರನ್ನು ಸೋಲಿಸಿದರು. ಕ್ಷೇತ್ರದಿಂದ ತಿವಾರಿ ಅವರ ಮೂರನೇ ಗೆಲುವು ಇದಾಗಿದೆ. 18ನೇ ಲೋಕಸಭೆ ಚುನಾವಣೆಗೆ ಮತ್ತೆ ಟಿಕೆಟ್ ಪಡೆದ ದೆಹಲಿಯ ಏಕೈಕ ಸಂಸದ ಅವರು. ಉಳಿದವರಿಗೆ ಟಿಕೆಟ್ ನಿರಾಕರಿಸಲಾಯಿತು.
ಜನಪ್ರಿಯ ಭೋಜ್‌ಪುರಿ ಸಿನಿಮಾ ತಾರೆ ರವಿಕಿಶನ್, ಉತ್ತರ ಪ್ರದೇಶದ ಗೋರಖ್‌ಪುರದಿಂದ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಅವರು ಸಮಾಜವಾದಿ ಪಕ್ಷದ ಕಾಜಲ್ ನಿಶಾದ್ ಅವರನ್ನು ಸೋಲಿಸಿದರು.
ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಎಸ್. ಅಹ್ಲುವಾಲಿಯಾ ಅವರನ್ನು ಸೋಲಿಸಿದ್ದಾರೆ. ಈಮೊದಲು ಬಿಜೆಪಿ ಮತ್ತು ಆನಂತರ ಕಾಂಗ್ರೆಸ್‌ನಲ್ಲಿದ್ದ ಸಿನ್ಹಾ, 2022 ರಲ್ಲಿ ಟಿಎಂಸಿಗೆ ಸೇರಿದರು.
ಸೋತವರು: ಉತ್ತರ ಪ್ರದೇಶದ ಅಮೇಥಿಯಲ್ಲಿ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ಸೋತಿದ್ದಾರೆ. ನಟ-ರಾಜಕಾರಣಿ ದಿನೇಶ್ ಲಾಲ್ ಯಾದವ್ ಅಜಂಗಢ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಯಾದವ್ ಅವರಿಂದ ಪರಾಜಿತರಾದರು.
ಬಂಗಾಳ ಚಲನಚಿತ್ರ ತಾರೆಯರು: ಪಶ್ಚಿಮ ಬಂಗಾಳದ ಮೇದಿನಿಪುರದಿಂದ ಬಿಜೆಪಿಯ ಅಗ್ನಿಮಿತ್ರ ಪಾಲ್ ಅವರನ್ನು ಸೋಲಿಸಿದ ಟಿಎಂಸಿಯ ನಟಿ ಜೂನ್ ಮಲಿಯಾ ಅವರು, 2021 ರಲ್ಲಿ ಮೇದಿನಿಪುರದಿಂದ ಪಶ್ಚಿಮ ಬಂಗಾಳದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪಶ್ಚಿಮ ಬಂಗಾಳದ ಬಿರ್ಭೂಮ್ ಕ್ಷೇತ್ರದಿಂದ ಟಿಎಂಸಿಯ ನಟಿ ಶತಾಬ್ದಿ ರಾಯ್ ಅವರು ಬಿಜೆಪಿಯ ದೇಬ್ತಾನು ಭಟ್ಟಾಚಾರ್ಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ರಾಜ್ಯದ ಹೂಗ್ಲಿ ಮತ್ತು ಘಟಾಲ್ ಕ್ಷೇತ್ರಗಳಲ್ಲಿ ಟಿಎಂಸಿ ಮತ್ತು ಬಿಜೆಪಿಯ ಸೆಲೆಬ್ರಿಟಿ ಮುಖಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಟಿಎಂಸಿ ಅಭ್ಯರ್ಥಿ ರಚನಾ ಬ್ಯಾನರ್ಜಿ ಅವರು ಹೂಗ್ಲಿಯಲ್ಲಿ ಬಿಜೆಪಿಯ ಲಾಕೆಟ್ ಚಟರ್ಜಿ ವಿರುದ್ಧ ಗೆದ್ದಿದ್ದಾರೆ. ರಚನಾ ಅವರ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಟಿಎಂಸಿಯ ದೇವ್ ಅಧಿಕಾರಿ ಅವರು ಸಹನಟ ಮತ್ತು ಬಿಜೆಪಿಯ ಹಿರಣ್ ಚಟರ್ಜಿಯವರನ್ನು ಘಟಾಲ್‌ನಲ್ಲಿ ಸೋಲಿಸಿದರು. ಅವರು ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಚಲನಚಿತ್ರ ನಟರು ಮತ್ತು ರಾಜಕೀಯ: ನರ್ಗೀಸ್, ಸುನೀಲ್ ದತ್, ರಾಜೇಶ್ ಖನ್ನಾ, ವಿನೋದ್ ಖನ್ನಾ ಮತ್ತು ಅಮಿತಾಭ್ ಬಚ್ಚನ್ ಅವರು ರಾಜಕೀಯದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಮತ್ತು ಸಿನಿಮಾ ಕ್ಷೇತ್ರಗಳು ನಿಕಟ ಸಂಬಂಧ ಹೊಂದಿವೆ. ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರೆಲ್ಲರೂ ನಟನೆ ಮೂಲಕ ಆರಂಭಿಸಿ, ಸಮುದಾಯದ ನಾಯಕರಾಗಿ ಪರಿವರ್ತನೆಯಾದರು.
ಈಗ ಕಮಲ್ ಹಾಸನ್, ವಿಜಯ್, ಪ್ರಕಾಶ್ ರಾಜ್, ಭಗವಂತ್ ಮಾನ್, ಪರೇಶ್ ರಾವಲ್, ಊರ್ಮಿಳಾ ಮಾತೋಂಡ್ಕರ್ ಮತ್ತು ಗೋವಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.