ಮಂಡಿ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ.
ರನೌತ್ ಅವರ ರೈತರ ವಿರುದ್ಧದ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ; ಪಕ್ಷದ ಪರವಾಗಿ ಮಾತನಾಡಲು ಅವರಿಗೆ ಅಧಿಕಾರವಿಲ್ಲ ಎಂದು ಹೇಳಿದೆ.
ನವದೆಹಲಿಯಲ್ಲಿ ಅರ್ಧ ಗಂಟೆ ಕಾಲ ನಡೆದ ಸಭೆಯಲ್ಲಿ ನಡ್ಡಾ ಅವರು ಕಂಗನಾ ಅವರಿಗೆ ಪ್ರಮುಖ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಮತ್ತು ವಿವಿಧ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಭೆ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.
ಬಿಜೆಪಿಗೆ ಮುಖಭಂಗ: ರೈತರ ಪ್ರತಿಭಟನೆ ಹೆಚ್ಚು ತೀವ್ರವಾಗಿದ್ದ ಮತ್ತು ಅಕ್ಟೋಬರ್‌ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಒಂದಾದ ಹರಿಯಾಣದಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಬಿಜೆಪಿಗೆ ಕಂಗನಾ ಅವರ ಹೇಳಿಕೆ ಮುಜುಗರ ಉಂಟುಮಾಡಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್,ʻಬಿಜೆಪಿಗೆ ತನ್ನ ಸಂಸದರನ್ನು ನಿಯಂತ್ರಿಸಬೇಕು. ರೈತರ ಪ್ರತಿಭಟನೆ ಬಗ್ಗೆ ನೀಡುತ್ತಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲʼ ಎಂದಿದ್ದಾರೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ರೈತರನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಕಂಗನಾ ಮತ್ತೊಂದು ಪರೀಕ್ಷೆ ಎದುರಿಸಬೇಕಿದೆ. ಅವರ ಹೊಸ ಚಿತ್ರ 'ಎಮರ್ಜೆನ್ಸಿ' ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.