ಪತ್ರಕರ್ತನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸುರೇಶ್ ಪೊಲೀಸ್ ವಶಕ್ಕೆ
ಪತ್ರಕರ್ತ ಮುಕೇಶ್ ಚಂದ್ರಕರ್ (33) ಜ.1 ರಂದು ನಾಪತ್ತೆಯಾಗಿದ್ದರು. ಜ.3 ರಂದು ಸುರೇಶ್‌ಗೆ ಸೇರಿದ್ದ ಜಾಗದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.;
ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಪತ್ರಕರ್ತ ಮುಕೇಶ್ ಚಂದ್ರಶೇಖರ್ ಹತ್ಯೆಯ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ಎನ್ನುವಾತನನ್ನು ಹೈದರಾಬಾದ್‌ನಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪತ್ರಕರ್ತನನ್ನು ಕೊಲೆ ಮಾಡಿದ್ದ ಪ್ರಕರಣ ಜ.3 ರಂದು ಬೆಳಕಿಗೆ ಬಂದಿತ್ತು. ಆ ಬಳಿಕ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಗುತ್ತಿಗೆದಾರನಾಗಿರುವ ಆರೋಪಿ ಸುರೇಶ್‌ನನ್ನು ಪತ್ತೆ ಮಾಡಲು ಎಸ್‌ಐಟಿ ರಚನೆ ಮಾಡಲಾಗಿತ್ತು. ಭಾನುವಾರ ರಾತ್ರಿ ಅಧಿಕಾರಿಗಳು ಸುರೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುರೇಶ್ ಸಹೋದರರಾದ ರಿತೇಶ್ ಚಂದ್ರಕರ್ ಮತ್ತು ದಿನೇಶ್ ಚಂದ್ರಕರ್ ಮತ್ತು ಮೇಲ್ವಿಚಾರಕ ಮಹೇಂದ್ರ ರಾಂಟೆಕೆ ಎಂಬುವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪತ್ರಕರ್ತ ಮುಕೇಶ್ ಚಂದ್ರಕರ್ (33) ಜ.1 ರಂದು ನಾಪತ್ತೆಯಾಗಿದ್ದರು. ಜ.3 ರಂದು ಸುರೇಶ್‌ಗೆ ಸೇರಿದ್ದ ಜಾಗದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಮುಕೇಶ್ ಚಂದ್ರಕರ್ ‘ಬಸ್ತಾರ್ ಜಂಕ್ಷನ್’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಹೊಂದಿದ್ದರು, ಜತೆಗೆ ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತಿದ್ದರು. ರಸ್ತೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ ನಂತರ ಅವರ ಹತ್ಯೆ ನಡೆದಿದೆ.