J&K polls| ಶೇ.50.65 ಮತದಾನ; ಕಿಶ್ತ್ವಾರ್‌ನಲ್ಲಿ ಅತಿ ಹೆಚ್ಚು

ಜಮ್ಮು ಪ್ರದೇಶದ 3 ಜಿಲ್ಲೆಗಳ ಎಂಟು ಮತ್ತು ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳ 16 ಕ್ಷೇತ್ರಗಳಲ್ಲಿ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ.;

Update: 2024-09-18 13:12 GMT
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬುಧವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.

ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ.50.65 ರಷ್ಟು ಮತ ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಗಿ ಭದ್ರತೆ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಅನಂತನಾಗ್ ಶೇ.46.67, ದೋಡಾ ಶೇ.61.90, ಕಿಶ್ತ್ವಾರ್ ಶೇ.70.03, ಕುಲ್ಗಾಮ್ ಶೇ.50.57, ಪುಲ್ವಾಮಾ ಶೇ.36.90, ರಾಂಬನ್ ಶೇ.60.04, ಶೋಪಿಯಾನ್ ಶೇ.46.84 ಮತ ಚಲಾವಣೆ ಆಗಿದೆ. 

ಕಾಶ್ಮೀರ ಕಣಿವೆಯ 16 ವಿಧಾನಸಭೆ ಕ್ಷೇತ್ರಗಳ ಪೈಕಿ ಮಧ್ಯಾಹ್ನ 1 ಗಂಟೆವರೆಗೆ ಪಹಲ್ಗಾಮ್‌ನಲ್ಲಿ ಗರಿಷ್ಠ ಶೇ. 47.68 ಮತದಾನವಾಗಿದೆ. ನಂತರದ ಸ್ಥಾನದಲ್ಲಿ ಡಿಎಚ್‌ ಪೋರಾ ಶೇ. 43.66, ದೂರು ಶೇ.41.30 ಮತ್ತು ಕೋಕರ್ನಾಗ್ (ಎಸ್ಟಿ‌) ಶೇ.41 ರಷ್ಟು ಹಾಗೂ ಟ್ರಾಲ್‌ನಲ್ಲಿ ಅತಿ ಕಡಿಮೆ(ಶೇ.26.75) ಮತದಾನವಾಗಿದೆ. 

ಜಮ್ಮು ಪ್ರದೇಶದಲ್ಲಿ ಇಂದರ್ವಾಲ್ (ಶೇ.60.01) ಗರಿಷ್ಠ ಮತದಾನ ಆಗಿದೆ. 

ಚುರುಕಿನ ಮತದಾನ: ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗುವ ಮೊದಲೇ ಹಲವು ಬೂತ್‌ಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಮೊದಲ ಗಂಟೆ ನಂತರ ಸರತಿ ಸಾಲುಗಳು ಹೆಚ್ಚಾದವು ಎಂದು ಅಧಿಕಾರಿಗಳು ಹೇಳಿದ್ದಾರೆ. 

ʻಬಹಳ ಸಮಯದ ನಂತರ ಜಮ್ಮು-ಕಾಶ್ಮೀರದ ಜನರಿಗೆ ತಮ್ಮ ಶಾಸಕರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಅವರು ಈ ಅವಕಾಶವನ್ನು ಹೆಚ್ಚು ಬಳಸುತ್ತಿದ್ದಾರೆ. ಇಂದು ಪ್ರಜಾಪ್ರಭುತ್ವದ ಹಬ್ಬ.10 ವರ್ಷಗಳ ನಂತರ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ಇತರ ಸರ್ಕಾರಗಳಿಗಿಂತ ಉತ್ತಮ,ʼ ಎಂದು ಕುಲ್ಗಾಮ್‌ನ ಬಶೀರ್ ಅಹ್ಮದ್ ಹೇಳಿದರು.

23 ಲಕ್ಷ ಮತದಾರರು, 219 ಅಭ್ಯರ್ಥಿಗಳು: ಮೊದಲ ಹಂತದಲ್ಲಿ ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿವೆ.

ಜಮ್ಮು ಪ್ರದೇಶದ ಮೂರು ಜಿಲ್ಲೆಗಳಲ್ಲಿ ಎಂಟು ಮತ್ತು ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ 16 ಕ್ಷೇತ್ರಗಳಿಗೆ 90 ಸ್ವತಂತ್ರರು ಸೇರಿದಂತೆ 219 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 23,27,580 ಮತದಾರರು ಇದ್ದಾರೆ. ಇವರಲ್ಲಿ 11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ಟ್ರಾನ್ಸ್‌ ಜೆಂಡರ್‌ ಗಳು, 18-19 ವರ್ಷ ವಯಸ್ಸಿನ 1.23 ಲಕ್ಷ ಯುವಜನರು, 28,309 ವಿಶೇಷಚೇತನರು ಮತ್ತು 85 ವರ್ಷ ಮೇಲ್ಪಟ್ಟ 15,774 ಹಿರಿಯ ನಾಗರಿಕರು ಇದ್ದಾರೆ.

3,276 ಮತಗಟ್ಟೆಗಳಲ್ಲಿ 14,000 ಮತಗಟ್ಟೆ ಸಿಬ್ಬಂದಿಯಿದ್ದು, 302 ನಗರ ಮತ್ತು 2,974 ಗ್ರಾಮೀಣ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರೀಯ ಸಶಸ್ತ್ರ ಪಡೆ, ಅರೆಸೇನಾ ಪಡೆ (ಸಿಎಪಿಎಫ್), ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪೊಲೀಸ್ ಮತ್ತು ಪೊಲೀಸರು ರಕ್ಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಮತ ಚಲಾವಣೆ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.

ಪ್ರಮುಖ ಅಭ್ಯರ್ಥಿಗಳು: ಪ್ರಮುಖ ಅಭ್ಯರ್ಥಿಗಳ ಪೈಕಿ ಸಿಪಿಐ (ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ, ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿ ಅವರ ಭವಿಷ್ಯ ಪರೀಕ್ಷೆ ನಡೆಯಲಿದೆ.

ಶ್ರೀಗುಫ್ವಾರಾ-ಬಿಜ್‌ಬೆಹರಾದಿಂದ ಪಿಡಿಪಿಯ ಇಲ್ತಿಜಾ ಮುಫ್ತಿ ಮತ್ತು ಪುಲ್ವಾಮಾದಿಂದ ಪಕ್ಷದ ವಹೀದ್ ಪಾರಾ ಕಣದಲ್ಲಿದ್ದಾರೆ. ಜಮ್ಮುವಿನಲ್ಲಿ ಮಾಜಿ ಸಚಿವರಾದ ಸಜ್ಜದ್ ಕಿಚ್ಲೂ (ಎನ್‌ಸಿ), ಖಾಲಿದ್ ನಜೀಬ್ ಸುಹರ್ವರ್ದಿ (ಎನ್‌ಸಿ), ವಿಕಾರ್ ರಸೂಲ್ ವಾನಿ (ಕಾಂಗ್ರೆಸ್), ಅಬ್ದುಲ್ ಮಜಿದ್ ವಾನಿ (ಡಿಪಿಎಪಿ), ಸುನಿಲ್ ಶರ್ಮಾ (ಬಿಜೆಪಿ), ಶಕ್ತಿ ರಾಜ್ ಪರಿಹಾರ್ (ದೋಡಾ ಪಶ್ಚಿಮ) ಮತ್ತು ಕಾಂಗ್ರೆಸ್ ತೊರೆದು, ಡಿಪಿಎಪಿ ಸೇರಿ ಟಿಕೆಟ್ ನಿರಾಕರಿಸಿದ ನಂತರ ಪಕ್ಷೇತರರಾಗಿ ಸ್ಪರ್ಧಿಸಿರುವ, ಮೂರು ಬಾರಿ ಶಾಸಕ ಗುಲಾಂ ಮೊಹಮ್ಮದ್ ಸರೂರಿ ಇದ್ದಾರೆ. 

ಪಂಪೋರ್, ಟ್ರಾಲ್, ಪುಲ್ವಾಮಾ, ರಾಜ್‌ಪೋರಾ, ಜೈನಾಪೋರಾ, ಶೋಪಿಯಾನ್, ಡಿಎಚ್ ಪೋರಾ, ಕುಲ್ಗಾಮ್, ದೇವ್‌ಸರ್, ದೂರು, ಕೋಕರ್‌ನಾಗ್ (ಎಸ್‌ಟಿ), ಅನಂತನಾಗ್ ಪಶ್ಚಿಮ, ಅನಂತನಾಗ್, ಶ್ರೀಗುಫ್ವಾರಾ-ಬಿಜ್‌ಬೆಹರಾ, ಶಾಂಗಸ್-ಅನಂತ್‌ನಾಗ್ ಪೂರ್ವ, ಪಹಲ್ಗಾಮ್, ಇಂದರ್ವಾಲ್, ಕಿಶ್ತ್ವಾರ್, ಪಡ್ಡರ್-ನಾಗ್ಸೇನಿ, ಭದರ್ವಾ, ದೋಡಾ, ದೋಡಾ ಪಶ್ಚಿಮ, ರಾಂಬನ್ ಮತ್ತು ಬನಿಹಾಲ್ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. 

ಇನ್ನೆರಡು ಹಂತಗಳು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

Tags:    

Similar News