ಜಮ್ಮು- ಕಾಶ್ಮೀರ‌ | ಒಮರ್‌ ಅಬ್ದುಲ್ಲಾ ಮತ್ತೆ ಸಿಎಂ: ನ್ಯಾಷನಲ್‌ ಕಾನ್ಪರೆನ್ಸ್‌ ಘೋಷಣೆ

ಆರ್ಟಿಕಲ್ 370 ರದ್ದತಿಯನ್ನು ಜಮ್ಮು ಮತ್ತು ಕಾಶ್ಮೀರ ಜನರು ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಈ ಚುನಾವಣಾ ತೀರ್ಪು ಸಾಕ್ಷಿಯಾಗಿದೆ ಎಂದು ಎನ್‌ಸಿ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.;

Update: 2024-10-08 10:32 GMT

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ)-ಕಾಂಗ್ರೆಸ್ ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದ್ದು,  ಒಮರ್ ಅಬ್ದುಲ್ಲಾ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. 

ಈ ಬಗ್ಗೆ  ನ್ಯಾಷನಲ್‌ ಕಾನ್ಫರೆನ್ಸ್‌  ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮಂಗಳವಾರ (ಅಕ್ಟೋಬರ್ 8) ಘೋಷಣೆ ಮಾಡಿದ್ದಾರೆ.  ಮೈತ್ರಿಕೂಟದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಫಾರೂಕ್‌ ಅಬ್ದುಲ್ಲಾ ಅವರು, "ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗುತ್ತಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ ಇಂಡಿ ಒಕ್ಕೂಟ 49 ಸ್ಥಾನಗಳಲ್ಲಿ ಮನ್ನಡೆ ಕಾಯ್ದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟಾದ ಬಳಿಕ ನಡೆದ ಚುನಾವನೆಯಲ್ಲಿ  ಒಮರ್‌ ಅಬ್ದುಲ್ಲಾ ಅವರು  ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು. 10 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಬಿಜೆಪಿಯ ಅಧಿಕಾರದ ಆಸೆಗೆ ಇಂಡಿ ಒಕ್ಕೂಟ ತಣ್ಣೀರೆಚಿದೆ.

ಆರ್ಟಿಕಲ್ 370 ರದ್ದತಿಗೆ ವಿರೋಧ?

ಆರ್ಟಿಕಲ್ 370 ರದ್ದತಿಯನ್ನು ಜೆಕೆ ಜನರು ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಈ ಚುನಾವಣಾ ತೀರ್ಪು ಸಾಕ್ಷಿಯಾಗಿದೆ ಎಂದು ಎನ್‌ಸಿ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ  ಹೇಳಿದ್ದಾರೆ.  "2019ರ ಆಗಸ್ಟ್ 5ರಂದು ಕೈಗೊಂಡ ನಿರ್ಧಾರಗಳು ತಮಗೆ ಸ್ವೀಕಾರಾರ್ಹವಲ್ಲ ಎಂಬುದನ್ನು ಜನತೆ ತಮ್ಮ ತೀರ್ಪು ನೀಡಿ ಸಾಬೀತುಪಡಿಸಿದ್ದಾರೆ. ಜನರು ಮತದಾನದಲ್ಲಿ ಪಾಲ್ಗೊಂಡು  ಈ ತೀರ್ಪು ನೀಡಿದ್ದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ.  ಚುನಾಯಿತ ಸರ್ಕಾರವು ಜನರ "ಸಂಕಟಗಳನ್ನು" ಕೊನೆಗೊಳಿಸಲು ಸಾಕಷ್ಟು ಕೆಲಸ ಮಾಡಲಿದೆ ," ಎಂದು ಅವರು ಹೇಳಿದ್ದಾರೆ. 

" ನಿರುದ್ಯೋಗವನ್ನು ಕೊನೆಗೊಳಿಸಬೇಕು ಮತ್ತು ಹಣದುಬ್ಬರ ಮತ್ತು ಡ್ರಗ್ಸ್ ಹಾವಳಿಯಂತಹ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಈಗ, ಆಡಳಿತ ನಡೆಸಲು ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಅವರ ಸಲಹೆಗಾರರು ಇರುವುದಿಲ್ಲ. ಜನರಿಗಾಗಿ ಕೆಲಸ ಮಾಡುವ 90 ಶಾಸಕರು ಇರುತ್ತಾರೆ" ಎಂದ ಅವರು ಹೇಳಿದರು.

ಒಮರ್ ಅಬ್ದುಲ್ಲಾ ಗೆಲುವು

ಬುದ್ಗಾಮ್ ವಿಧಾನಸಭಾ ಕ್ಷೇತ್ರವನ್ನು ಒಮರ್‌ ಅಬ್ದುಲ್ಲಾ ಅವರು ಗೆದ್ದುಕೊಂಡಿದ್ದು, ಪಿಡಿಪಿಯ ಅಗಾ ಸೈಯದ್ ಮುಂತಜೀರ್ ಮೆಹದಿ ಅವರನ್ನು 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.  ಅಬುಲ್ಲಾ  ಕುಟುಂಬದ ಭದ್ರಕೋಟೆಯಾದ ಗಂದರ್‌ಬಾಲ್‌ನಿಂದಲೂ ಮುನ್ನಡೆಯಲ್ಲಿರುವ ಒಮರ್ ಬುದ್ಗಾಮ್‌ನಲ್ಲಿ 36,010 ಮತಗಳನ್ನು ಗಳಿಸಿದ್ದಾರೆ. 

ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷರಾಗಿರುವ ಒಮರ್‌ ಅಬ್ದುಲ್ಲಾ,  2014 ರ ಚುನಾವಣೆಗಳಲ್ಲಿ ಶ್ರೀನಗರದ ಸೋನ್ವಾರ್ ಮತ್ತು ಬುದ್ಗಾಮ್ ಜಿಲ್ಲೆಯ ಬೀರ್ವಾಹ್ ಎಂಬ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದು,  ಬೀರ್ವಾಹ್‌  ಸೀಟು ಗೆದ್ದಿದ್ದರು.  ಕಳೆದ ಲೋಕಸಭಾ ಚುನಾವಣೆಯಲ್ರುಲಿ  ಉತ್ತರ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ  ಸ್ಪರ್ಧಿಸಿ  ಸೋತಿದ್ದರು.

ಒಮರ್ ಅವರು ಹಿಂದೆಯೂ ಸಿಎಂ

2019 ಕ್ಕಿಂತ ಹಿಂದೆ ಸ್ವತಂತ್ರ ರಾಜ್ಯವಾಗಿದ್ದ ಜಮ್ಮು  ಮತ್ತು ಕಾಶ್ಮೀರದಲ್ಲಿ,   2009 ರಿಂದ 2015 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.  ಆಗ 38 ವರ್ಷದ ಒಮರ್ 11 ನೇ ಮತ್ತು ಕಿರಿಯ ವಯಸ್ಸಿನ  ಮುಖ್ಯಮಂತ್ರಿಯಾಗಿದ್ದರು. ಎರಡು ಬಾರಿ ಲೋಕಸಭಾ ಸಂಸದರಾಗಿದ್ದ ಅವರು 1998ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. 2001 ರಿಂದ 2002 ರವರೆಗೆ  ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಕೆ ಸರ್ಕಾರದಲ್ಲಿ  ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

Tags:    

Similar News