J&K Assembly polls final phase| 16 ಕ್ಷೇತ್ರಗಳಲ್ಲಿ ಮತದಾನ ಆರಂಭ
ಮೂರನೇ ಹಂತದ ಚುನಾವಣೆಯಲ್ಲಿ ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ತಾರಾ ಚಂದ್ ಮತ್ತು ಮುಜಾಫರ್ ಬೇಗ್ ಸೇರಿದಂತೆ 415 ಅಭ್ಯರ್ಥಿಗಳ ಚುನಾವಣೆ ಭವಿಷ್ಯವನ್ನು 39.18 ಲಕ್ಷಕ್ಕೂ ಹೆಚ್ಚು ಅರ್ಹ ಮತದಾರರು ನಿರ್ಧರಿಸಲಿದ್ದಾರೆ.;
ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಮತದಾನವು ಚಳಿಗಾಲದ ರಾಜಧಾನಿ ಜಮ್ಮು ಸೇರಿದಂತೆ ಏಳು ಜಿಲ್ಲೆಗಳ 40 ಸ್ಥಾನಗಳಲ್ಲಿ ನಡೆಯುತ್ತಿದೆ. ಮಂಗಳವಾರ (ಅಕ್ಟೋಬರ್ 1) ಬೆಳಗ್ಗೆ 9 ಗಂಟೆವರೆಗೆ ಶೇ.11.60ರಷ್ಟು ಮತದಾನವಾಗಿದೆ.
ಉತ್ತರ ಕಾಶ್ಮೀರದ ಮೂರು ಗಡಿ ಜಿಲ್ಲೆಗಳ 16 ಮತ್ತು ಜಮ್ಮು ಪ್ರದೇಶದ 24 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ತಾರಾ ಚಂದ್ ಮತ್ತು ಮುಜಾಫರ್ ಬೇಗ್ ಸೇರಿದಂತೆ 415 ಅಭ್ಯರ್ಥಿಗಳ ಭವಿಷ್ಯವನ್ನು 39.18 ಲಕ್ಷಕ್ಕೂ ಹೆಚ್ಚು ಅರ್ಹ ಮತದಾರರು ನಿರ್ಧರಿಸಲಿದ್ದಾರೆ.
ಮೊದಲ ಬಾರಿ ಮತದಾನ: ಪಶ್ಚಿಮ ಪಾಕಿಸ್ತಾನಿ ನಿರಾಶ್ರಿತರು, ವಾಲ್ಮೀಕಿ ಸಮಾಜ ಮತ್ತು ಗೂರ್ಖಾ ಸಮುದಾಯವು ತಮ್ಮ ಹಕ್ಕು ಚಲಾಯಿಸಲಿದೆ. ಈ ಸಮುದಾಯಗಳು ವಿಧಿ 370 ರ ರದ್ದು ಬಳಿಕ ವಿಧಾನಸಭೆಗೆ ಮತದಾನದ ಹಕ್ಕುಗಳನ್ನು ಪಡೆದುಕೊಂಡಿವೆ. ಈ ಹಿಂದೆ 2019ರಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ ಮತ್ತು 2020 ರಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಮತ ಚಲಾವಣೆ ಎಲ್ಲಿ?: ಬಾರಾಮುಲ್ಲಾ, ಉರಿ, ರಫಿಯಾಬಾದ್, ಪಟ್ಟನ್, ಗುಲ್ಮಾರ್ಗ್, ಸೋಪೋರ್ ಮತ್ತು ವಗೂರಾ-ಕ್ರೀರಿ (ಬಾರಾಮುಲ್ಲಾ ಜಿಲ್ಲೆ), ಕುಪ್ವಾರಾ, ಕರ್ನಾಹ್, ಟ್ರೆಹ್ಗಾಮ್, ಹಂದ್ವಾರಾ, ಲೋಲಾಬ್ ಮತ್ತು ಲಾಂಗೇಟ್ (ಕುಪ್ವಾರ ಜಿಲ್ಲೆ) ಮತ್ತು ಬಂಡಿಪೋರಾ, ಸೋನಾವಾರಿ ಮತ್ತು ಗುರೆಜ್ (ಬಂಡಿಪೋರಾ ಜಿಲ್ಲೆ) ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ 16 ಕ್ಷೇತ್ರಗಳಲ್ಲಿ ಒಟ್ಟು 202 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಮ್ಮು ಪ್ರದೇಶದ ವಿಧಾನಸಭಾ ಕ್ಷೇತ್ರಗಳು ಉಧಂಪುರ, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿವೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ, ರಾಮನ್ ಭಲ್ಲಾ (ಆರ್ ಎಸ್ ಪುರ), ಉಸ್ಮಾನ್ ಮಜೀದ್ (ಬಂಡಿಪೋರಾ), ನಜೀರ್ ಅಹ್ಮದ್ ಖಾನ್ (ಗುರೇಜ್), ತಾಜ್ ಮೊಹಿಯುದ್ದೀನ್ (ಉರಿ), ಬಶರತ್ ಬುಖಾರಿ (ವಾಗೂರ-ಕ್ರೀರಿ), ಇಮ್ರಾನ್ ಅನ್ಸಾರಿ (ಪಟ್ಟಾನ್) , ಗುಲಾಮ್ ಹಸನ್ ಮಿರ್ (ಗುಲ್ಮಾರ್ಗ್), ಚೌಧರಿ ಲಾಲ್ ಸಿಂಗ್ (ಬಸೋಹ್ಲಿ), ರಾಜೀವ್ ಜಸ್ರೋಟಿಯಾ (ಜಸ್ರೋಟಾ), ಮನೋಹರ್ ಲಾಲ್ ಶರ್ಮಾ (ಬಿಲ್ಲವರ್), ಶಾಮ್ ಲಾಲ್ ಶರ್ಮಾ ಮತ್ತು ಅಜಯ್ ಕುಮಾರ್ ಸಾಧೋತ್ರ (ಜಮ್ಮು ಉತ್ತರ).
ಬಿಗಿ ಭದ್ರತೆ: ಸುರಕ್ಷಿತ ಮತದಾನವನ್ನು ಖಚಿತಪಡಿಸಿಕೊಳ್ಳಲು ಅರೆಸೈನಿಕ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿ ಸೇರಿದಂತೆ 400 ಕ್ಕೂ ಹೆಚ್ಚು ಕಂಪನಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜಮ್ಮು ಪ್ರದೇಶದ ವಿಧಾನಸಭಾ ಕ್ಷೇತ್ರಗಳು ಉಧಂಪುರ, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿವೆ.
ಚುನಾವಣೆಯ ಮೊದಲ ಹಂತಗಳಲ್ಲಿ ಉತ್ತಮ ಮತದಾನವಾಗಿದೆ. ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದಲ್ಲಿ ಶೇ. 61.38 ಸೆಪ್ಟೆಂಬರ್ 25 ರಂದು ನಡೆದ ಎರಡನೇ ಹಂತದಲ್ಲಿ ಶೇ. 57.31 ಮತದಾರರು ಪಾಲ್ಗೊಂಡಿದ್ದರು.
ಇಸಿ ಸಿದ್ಧತೆ: ಚುನಾವಣೆ ಆಯೋಗವು 5,060 ಮತಗಟ್ಟೆಗಳನ್ನು ಸ್ಥಾಪಿಸಿದೆ; ಇದರಲ್ಲಿ 974 ನಗರ ಮತಗಟ್ಟೆಗಳು ಮತ್ತು 4,086 ಗ್ರಾಮೀಣ ಮತಗಟ್ಟೆಗಳಿವೆ. ಎಲ್ಲಾ ಕ್ಷೇತ್ರಗಳಲ್ಲಿ ಶೇ.100 ವೆಬ್‌ಕಾಸ್ಟಿಂಗ್ ಖಚಿತಪಡಿಸಿದೆ. ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು 240 ವಿಶೇಷ ಮತದಾನ ಕೇಂದ್ರಗಳು, ಮಹಿಳೆಯರು ನಿರ್ವಹಿಸುವ 50 ಗುಲಾಬಿ ಮತದಾನ ಕೇಂದ್ರಗಳು ಹಾಗೂ 43 ವಿಶೇಷಚೇತನರು ನಿರ್ವಹಿಸುವ ಮತದಾನ ಕೇಂದ್ರಗಳನ್ನು ರಚಿಸಲಾಗಿದೆ. ಜೊತೆಗೆ, ಪರಿಸರ ಜಾಗೃತಿಯನ್ನು ಉತ್ತೇಜಿಸುವ 45 ಹಸಿರು ಮತದಾನ ಕೇಂದ್ರಗಳು, ಗಡಿ ನಿಯಂತ್ರಣ ರೇಖೆ ಬಳಿ 29 ಮತದಾನ ಕೇಂದ್ರಗಳು ಮತ್ತು 33 ವಿಶಿಷ್ಟ ಮತದಾನ ಕೇಂದ್ರಗಳಿವೆ. ಕಾಶ್ಮೀರ ವಿಭಾಗದ ಮತದಾರರಿಗಾಗಿ ಜಮ್ಮುವಿನಲ್ಲಿ 19, ದೆಹಲಿಯಲ್ಲಿ ನಾಲ್ಕು ಮತ್ತು ಉಧಮ್‌ಪುರ ಜಿಲ್ಲೆಯಲ್ಲಿ ಒಂದು ಉಧಮ್‌ಪುರ ಜಿಲ್ಲೆಯಲ್ಲಿ ಒಂದು ಸೇರಿದಂತೆ 24 ವಿಶೇಷ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.