J&K Assembly polls: ಬಿಜೆಪಿ 44 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಸೆಪ್ಟೆಂಬರ್ 18 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ

Update: 2024-08-26 06:03 GMT

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ (ಆಗಸ್ಟ್ 26) ಬಿಡುಗಡೆ ಮಾಡಿದೆ. ಇದರಲ್ಲಿ ಮೊದಲ ಹಂತದ ಚುನಾವಣೆಗೆ 15, ಎರಡನೇ ಹಂತಕ್ಕೆ 10 ಮತ್ತು ಮೂರನೇ ಹಂತಕ್ಕೆ 19 ಅಭ್ಯರ್ಥಿಗಳು ಸೇರಿದ್ದಾರೆ. ವಿಧಾನಸಭೆ ಸದಸ್ಯ ಬಲ 90.

ತನ್ನ ಭದ್ರಕೋಟೆಯಾದ ಜಮ್ಮು ಪ್ರದೇಶವಲ್ಲದೆ, ಪಾಂಪೋರ್, ಶೋಪಿಯಾನ್, ಅನಂತನಾಗ್ ಪಶ್ಚಿಮ ಮತ್ತು ಅನಂತನಾಗ್ ಸೇರಿದಂತೆ ಕಾಶ್ಮೀರದ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ನಗ್ರೋತಾದಿಂದ ದೇವೆಂದರ್‌ ಸಿಂಗ್‌ ರಾಣಾ, ಜಮ್ಮು ಪಶ್ಚಿಮದಿಂದ ಅರವಿಂದ್ ಗುಪ್ತಾ ಮತ್ತು ಜಮ್ಮು ಪೂರ್ವದಿಂದ ಯುದ್ಧವೀರ್ ಸೇಥಿ ಕಣಕ್ಕಿಳಿದಿದ್ದಾರೆ. 

ಪಟ್ಟಿಯಲ್ಲಿರುವ ಇತರರೆಂದರೆ, ರಾಜ್‌ಪೋರಾದಿಂದ ಅರ್ಷಿದ್ ಭಟ್, ಶೋಪಿಯಾನ್‌ನಿಂದ ಜಾವೇದ್ ಅಹ್ಮದ್ ಖಾದ್ರಿ, ಮೊಹಮ್ಮದ್. ಅನಂತನಾಗ್ ಪಶ್ಚಿಮದಿಂದ ರಫೀಕ್ ವಾನಿ, ಅನಂತನಾಗ್‌ನಿಂದ ಸೈಯದ್ ವಜಾಹತ್, ಕಿಶ್ತ್ವಾರ್‌ನಿಂದ ಸುಶ್ರೀ ಶಗುನ್ ಪರಿಹಾರ್ ಮತ್ತು ದೋಡಾದಿಂದ ಗಜಯ್ ಸಿಂಗ್ ರಾಣಾ. 

ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಭಾನುವಾರ (ಆ.25) ಸಂಜೆ ಸಭೆ ನಡೆಸಿತ್ತು. 2014ರಲ್ಲಿ ಜಮ್ಮು-ಕಾಶ್ಮೀರ ಪೂರ್ಣ ಪ್ರಮಾಣದ ರಾಜ್ಯವಾಗಿದ್ದಾಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದಿತ್ತು.

ಬಿಜೆಪಿಯ ಭದ್ರಕೋಟೆಯಾಗಿರುವ ಜಮ್ಮು ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಕೂಟವು ತೀವ್ರ ಸವಾಲು ಒಡ್ಡಲಿದೆ. 

Tags:    

Similar News