ಜಾರ್ಖಂಡ್: ಹೇಮಂತ್ ಸೊರೆನ್ ಸರ್ಕಾರಕ್ಕೆ ವಿಶ್ವಾಸಮತ

ವಿಧಾನಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ಗ್ಲೆನ್ ಜೋಸೆಫ್ ಗಾಲ್‌ಸ್ಟನ್‌ ಸೇರಿದಂತೆ 45 ಶಾಸಕರು ವಿಶ್ವಾಸ ಮತ ಪರವಾಗಿ ಮತ ಹಾಕಿದರು; ಬಿಜೆಪಿ ನೇತೃತ್ವದ ಪ್ರತಿಪಕ್ಷ 27 ಸದಸ್ಯರನ್ನು ಹೊಂದಿದೆ.;

Update: 2024-07-08 10:44 GMT

ರಾಂಚಿ, ಜು.8 - ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ನೇತೃತ್ವದ ಸರ್ಕಾರವು ಸೋಮವಾರ ವಿಶ್ವಾಸ ಮತವನ್ನು ಗೆದ್ದಿದೆ. 

ನಾಮನಿರ್ದೇಶಿತ ಸದಸ್ಯ ಗ್ಲೆನ್ ಜೋಸೆಫ್ ಗಾಲ್‌ಸ್ಟನ್‌ ಸೇರಿದಂತೆ 45 ಶಾಸಕರು ವಿಶ್ವಾಸಮತ ಯಾಚನೆ ಪರವಾಗಿ ಮತ ಚಲಾಯಿಸಿದರು. ಮತ ಎಣಿಕೆ ಆರಂಭವಾಗುತ್ತಿದ್ದಂತೆ, ಬಿಜೆಪಿಯ 24 ಮತ್ತು ಎಜೆಎಸ್‌ಯು ನಾಲ್ವರು ಶಾಸಕರು ಸದನದಿಂದ ಹೊರ ನಡೆದರು. 

ವಿಶ್ವಾಸ ಮತ ಗೆದ್ದ ನಂತರ ಸೊರೆನ್, ʻಇಂದು ಎಲ್ಲರೂ ಮೈತ್ರಿಕೂಟದ ಏಕತೆ ಮತ್ತು ಬಲವನ್ನು ವೀಕ್ಷಿಸಿದ್ದಾರೆ. ಸ್ಪೀಕರ್ ಮತ್ತು ಎಲ್ಲ ಶಾಸಕರಿಗೆ ಧನ್ಯವಾದ ಹೇಳುತ್ತೇನೆ. 2019ರಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಸಾಂವಿಧಾನಿಕ ಕಾರ್ಯ ವಿಧಾನಗಳನ್ನು ಅನುಸರಿಸುತ್ತಿದೆ. ಅದು ಇಂದು ಕೂಡ ಸಾಬೀತಾಗಿದೆ,ʼ ಎಂದು ಹೇಳಿದರು.

ʻರಾಜ್ಯಕ್ಕೆ ಬಿಜೆಪಿಗೆ ಯಾವುದೇ ಕಾರ್ಯನೀತಿಯನ್ನು ಹೊಂದಿಲ್ಲ. ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಜೆಎಂಎಂನಿಂದ ಪ್ರಬಲ ಪ್ರತಿರೋಧ ಎದುರಿಸಬೇಕಾಗುತ್ತದೆ,ʼ ಎಂದು ಸೊರೆನ್‌ ಹೇಳಿದರು.

ವಿಶ್ವಾಸಮತ ಕುರಿತು ಮಾತನಾಡಿದ ಬಿಜೆಪಿ ನಾಯಕ ಅಮರ್ ಬೌರಿ, ಕಳೆದ ಐದು ವರ್ಷಗಳಲ್ಲಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಸರ್ಕಾರ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು.

ಇದಕ್ಕೂ ಮೊದಲು ಬಿಜೆಪಿ ಶಾಸಕರು ಶಾಸಕ ಭಾನುಪ್ರತಾಪ್ ಸಾಹಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಸ್ಪೀಕರ್ ರವೀಂದ್ರನಾಥ್ ಮಹತೋ ಅವರನ್ನು ಒತ್ತಾಯಿಸಿದರು. ಮನವಿಯನ್ನು ಸ್ಪೀಕರ್ ತಿರಸ್ಕರಿಸಿದರು. ಮತದಾನದ ವೇಳೆ 75 ಶಾಸಕರು ಹಾಜರಿದ್ದರು. ಸ್ವತಂತ್ರ ಶಾಸಕ ಸರಯು ರಾಯ್ ಮತದಾನದಿಂದ ದೂರ ಉಳಿದರು.

ಆಡಳಿತಾರೂಢ ಮೈತ್ರಿಕೂಟವು ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನು ಒಳಗೊಂಡಿದ್ದು, ಸಿಪಿಐ (ಎಂಎಲ್) ಶಾಸಕರು ಹೊರಗಿನಿಂದ ಬೆಂಬಲಿಸಿದ್ದಾರೆ. ಲೋಕಸಭೆ ಚುನಾವಣೆ ನಂತರ 81 ಸದಸ್ಯರ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ಬಲ 45 ಆಗಿದೆ(ಜೆಎಂಎಂ 27, ಕಾಂಗ್ರೆಸ್‌ 17 ಮತ್ತು ರಾಷ್ಟ್ರೀಯ ಜನತಾ ದಳದ ಒಬ್ಬರು). ಇಬ್ಬರು ಜೆಎಂಎಂ ಶಾಸಕರು, ನಳಿನ್ ಸೊರೆನ್ ಮತ್ತು ಜೋಬಾ ಮಾಝಿ, ಸಂಸದರಾಗಿ ಆಯ್ಕೆಯಾಗಿದ್ದಾರೆ. ಜಾಮಾ ಶಾಸಕಿ ಸೀತಾ ಸೊರೆನ್ ಬಿಜೆಪಿ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರು. ಜೆಎಂಎಂ ಇಬ್ಬರು ಶಾಸಕರನ್ನು (ಬಿಶುನ್‌ಪುರ ಶಾಸಕ ಚಾಮ್ರಾ ಲಿಂಡಾ ಮತ್ತು ಬೋರಿಯೊ ಶಾಸಕ ಲೋಬಿನ್ ಹೆಂಬ್ರೋಮ್) ಪಕ್ಷದಿಂದ ಉಚ್ಚಾಟಿಸಿದೆ.

ಅದೇ ರೀತಿ, ವಿಧಾನಸಭೆಯಲ್ಲಿ ಬಿಜೆಪಿ ಬಲ 24 ಕ್ಕೆ ಇಳಿದಿದೆ. ಅದರ ಇಬ್ಬರು ಶಾಸಕರು, ಧುಲು ಮಹ್ತೋ (ಬಗ್ಮಾರಾ) ಮತ್ತು ಮನೀಶ್ ಜೈಸ್ವಾಲ್ (ಹಜಾರಿಬಾಗ್), ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಂಡು ಶಾಸಕ ಜೈಪ್ರಕಾಶ್ ಭಾಯ್ ಪಟೇಲ್ ಅವರು ಕಾಂಗ್ರೆಸ್ ಸೇರಿದ ನಂತರ ಬಿಜೆಪಿ ಅವರನ್ನು ಪಕ್ಷ ಉಚ್ಚಾಟಿಸಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆ ಪ್ರಸ್ತುತ ಸಂಖ್ಯಾಬಲ 76.

ಜೆಎಂಎಂ ಕಾರ್ಯಕಾರಿ ಅಧ್ಯಕ್ಷರಾದ ಹೇಮಂತ್ ಸೊರೆನ್ ಅವರು ಜುಲೈ 4 ರಂದು ರಾಜ್ಯದ 13 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು

Tags:    

Similar News