ಜಮ್ಮು- ಕಾಶ್ಮೀರ: ಕುಲ್ಗಾಮ್​ನಲ್ಲಿ 'ಆಪರೇಷನ್ ಅಖಾಲ್' ಮುಂದುವರಿಕೆ, ಹೊಸ ಎನ್​ಕೌಂಟರ್​ ಆರಂಭ

ಆಗಸ್ಟ್ 1ರಂದು ಕುಲ್ಗಾಮ್​​ನ ಅಖಾಲ್ ಅರಣ್ಯ ಪ್ರದೇಶದಲ್ಲಿ ಆರಂಭವಾದ ಈ ಕಾರ್ಯಾಚರಣೆಯು, ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಅತಿ ಸುದೀರ್ಘ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.;

Update: 2025-08-10 08:25 GMT

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ 'ಆಪರೇಷನ್ ಅಖಾಲ್' ಭಾನುವಾರ, 10ನೇ ದಿನಕ್ಕೆ ಕಾಲಿಟ್ಟಿದೆ. ಈ ಕಾರ್ಯಾಚರಣೆ ಮುಂದುವರಿದಿರುವಾಗಲೇ, ಕಿಶ್ತ್ವಾರ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮತ್ತೊಂದು ಹೊಸ ಗುಂಡಿನ ಚಕಮಕಿ ಆರಂಭವಾಗಿದೆ.

ಆಗಸ್ಟ್ 1ರಂದು ಕುಲ್ಗಾಮ್​​ನ ಅಖಾಲ್ ಅರಣ್ಯ ಪ್ರದೇಶದಲ್ಲಿ ಆರಂಭವಾದ ಈ ಕಾರ್ಯಾಚರಣೆಯು, ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಅತಿ ಸುದೀರ್ಘ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಈವರೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಯೋಧರು ಹುತಾತ್ಮರಾಗಿದ್ದು, ಇತರ ಒಂಬತ್ತು ಯೋಧರು ಗಾಯಗೊಂಡಿದ್ದಾರೆ. ಇಬ್ಬರು ಉಗ್ರರನ್ನೂ ಸಹ ಹತ್ಯೆ ಮಾಡಲಾಗಿದೆ, ಆದರೆ ಅವರ ಗುರುತು ಮತ್ತು ಸಂಘಟನೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

"ಭದ್ರತಾ ಪಡೆಗಳು ಅಡಗಿರುವ ಉಗ್ರರ ಸ್ಥಳವನ್ನು ಸಮೀಪಿಸುತ್ತಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರು ದಟ್ಟವಾದ ಕಾಡಿನಲ್ಲಿ ಹೋರಾಡುವಲ್ಲಿ ಉನ್ನತ ತರಬೇತಿ ಪಡೆದಿದ್ದು, ಡ್ರೋನ್​ಗಳ ಕಣ್ತಪ್ಪಿಸಲು ದಟ್ಟವಾದ ಮರಗಳ ಸಹಾಯ ಪಡೆಯುತ್ತಿದ್ದಾರೆ. ಭದ್ರತಾ ಪಡೆಗಳು ಡ್ರೋನ್​​ಗಳು, ಹೆಲಿಕಾಪ್ಟರ್​ಗಳು ಮತ್ತು ಪ್ಯಾರಾ ಕಮಾಂಡೋಗಳ ಸಹಾಯದಿಂದ ಉಗ್ರರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಳಿನ್ ಪ್ರಭಾತ್ ಮತ್ತು ಸೇನೆಯ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರು ಕಾರ್ಯಾಚರಣೆಯನ್ನು ಖುದ್ದಾಗಿ ಉಸ್ತುವಾರಿ ವಹಿಸಿದ್ದಾರೆ.

ಹೊಸ ಗುಂಡಿನ ಚಕಮಕಿ

ಗುಡ್ಡಗಾಡು ಪ್ರದೇಶವಾದ ಕಿಶ್ತ್ವಾರ್ ಜಿಲ್ಲೆಯ ದೂಲ್ ಎಂಬಲ್ಲಿ ಇಬ್ಬರು ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಭದ್ರತಾ ಪಡೆಗಳನ್ನು ಕಂಡ ಕೂಡಲೇ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಪ್ರತಿಯಾಗಿ ಪಡೆಗಳು ಗುಂಡು ಹಾರಿಸುವುದರೊಂದಿಗೆ ಎನ್​ಕೌಂಟರ್​ ಆರಂಭವಾಗಿದೆ. ಸೇನೆಯ ವೈಟ್ ನೈಟ್ ಕಾರ್ಪ್ಸ್ ಕೂಡ ಈ ಎನ್​​ಕೌಂಟರ್​ ಕಾರ್ಯಾಚರಣೆಯನ್ನು 'ಎಕ್ಸ್' ಖಾತೆಯಲ್ಲಿ ದೃಢಪಡಿಸಿದೆ.

Tags:    

Similar News